ADVERTISEMENT

ರಂಗೇರುತ್ತಿರುವ ಚುನಾವಣಾ ಕಣ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2013, 6:25 IST
Last Updated 23 ಏಪ್ರಿಲ್ 2013, 6:25 IST

ಜನವಾಡ: ಸಾರ್ವತ್ರಿಕ ಚುನಾವಣೆ ಮತದಾನಕ್ಕೆ 13 ದಿನವಷ್ಟೇ ಬಾಕಿ ಉಳಿದಿದ್ದು, ಬೀದರ್ ವಿಧಾನಸಭಾ ಕ್ಷೇತ್ರದ  ಜನವಾಡ ಹಾಗೂ ಮಾಳೆಗಾಂವ್ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲೂ ಪ್ರಚಾರ ರಂಗೇರುತ್ತಿದೆ. ಅಭ್ಯರ್ಥಿಗಳು ಈ ಎರಡೂ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿಯೂ ಅಬ್ಬರದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಕಾಂಗ್ರೆಸ್, ಕೆಜೆಪಿ, ಬಿಜೆಪಿ, ಜೆಡಿಎಸ್ ಸೇರಿ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತದಾರರ ಮನವೊಲಿಸಲು ವ್ಯಾಪಕ ಕಸರತ್ತು ನಡೆಸುತ್ತಿದ್ದಾರೆ. ಗ್ರಾಮಗಳಲ್ಲಿ ಸಭೆ, ಸಮಾರಂಭ ಏರ್ಪಡಿಸುತ್ತಿದ್ದು, ಪಾದಯಾತ್ರೆ ಮೂಲಕ ಮತದಾರರ ಮನೆ ಬಾಗಿಲಿಗೇ ಭೇಟಿ ನೀಡಿ ಮತ ಯಾಚಿಸುತ್ತಿದ್ದಾರೆ.

`ಕ್ಷೇತ್ರವನ್ನು ಮಾದರಿಯಾಗಿಸುತ್ತೇನೆ.  ಗ್ರಾಮವನ್ನು ಸಮಸ್ಯೆ ಮುಕ್ತವಾಗಿಸುತ್ತೇನೆ' ಎಂಬುದು ಸೇರಿದಂತೆ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಮತದಾರರಿಗೆ ಭರವಸೆಗಳ ಸುರಿಮಳೆ ಸುರಿಸುತ್ತಿದ್ದಾರೆ. ಜೊತೆಗೆ, ಪರಸ್ಪರ ಕೆಸರೆರೆಚಾಟದಲ್ಲೂ ತೊಡಗಿದ್ದಾರೆ ಎನ್ನುತ್ತಾರೆ ಮತದಾರರು.

ಗ್ರಾಮಗಳಲ್ಲಿಯೂ ಚುನಾವಣೆ ವಿಷಯವೇ ಚರ್ಚೆಗೆ ವಸ್ತುವಾಗಿದೆ. ಅಭ್ಯರ್ಥಿ ಬಂದಾಗ ಬೆಂಬಲಿಗರು ಹೂಮಾಲೆ ಹಾಕಿ ಸ್ವಾಗತಿಸಿ, ಗ್ರಾಮ ಸಂಚಾರ ಮಾಡಿಸುತ್ತಿದ್ದಾರೆ. ಅಭ್ಯರ್ಥಿಗಳು ಬಂದಾಗ, ಮತದಾರರು ಅವರ ಭರವಸೆಯ ಮಾತುಗಳನ್ನಷ್ಟೇ ಕೇಳಿ ಸುಮ್ಮನಾಗುತ್ತಿಲ್ಲ. ಬದಲಾಗಿ, ದೇವಸ್ಥಾನ ಜೀರ್ಣೋದ್ಧಾರ, ಮಾಸಾಶನ, ಆಶ್ರಯ ಮನೆ ಮತ್ತಿತರ ಬೇಡಿಕೆಗಳನ್ನು ಮುಂದಿಟ್ಟು ಸುಸ್ತಾಗುವಂತೆ ಮಾಡುತ್ತಿದ್ದಾರೆ ಎಂದು ಎನ್ನುತ್ತಾರೆ ಚಾಂಬೋಳ್ ಗ್ರಾಮದ ವೃದ್ಧರೊಬ್ಬರು.

ಈ ಹಿಂದೆ ತಮಗೆ ವಿವಿಧ ಸೌಕರ್ಯಗಳು ಮಂಜೂರಾಗದ ಬಗ್ಗೆಯೂ ಅಸಹನೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳುತ್ತಾರೆ.
ಅಭ್ಯರ್ಥಿಗಳ ಬೆಂಬಲಿಗರು ಮತದಾರರನ್ನು  ಅಣ್ಣ, ಅವ್ವ, ಅಕ್ಕ, ತಮ್ಮ ಎಂದು ಮಾಮ, ಕಾಕ ಎನ್ನುತ್ತಾ ಮನವೊಲಿಸಲು ಯತ್ನಿಸುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.