ADVERTISEMENT

ರಸ್ತೆ ಅಭಿವೃದ್ಧಿಗೆ ಅನುದಾನ ಇಲ್ಲ: ಸೇಡಂ

​ಪ್ರಜಾವಾಣಿ ವಾರ್ತೆ
Published 20 ಜೂನ್ 2012, 9:20 IST
Last Updated 20 ಜೂನ್ 2012, 9:20 IST

ಹುಮನಾಬಾದ್: ಧಾರ್ಮಿಕ ಕೇಂದ್ರ ಹಾಗೂ ರಸ್ತೆಗಳ ಅಭಿವೃದ್ಧಿಗೆ ತಮ್ಮ ನಿಧಿಯಿಂದ ಅನುದಾನ ನೀಡುವುದಿಲ್ಲ ಎಂದು ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ ತಿಳಿಸಿದರು. 

 ಸ್ಥಳೀಯ ಲಕ್ಷ್ಮೀವೆಂಕಟೇಶ್ವರ ಬಾಲಭಾರತಿ ವಿದ್ಯಾಮಂದಿರದಲ್ಲಿ ವಿಕಾಸ ಅಕಾಡೆಮಿ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.

ಪ್ರತಿ ತಾಲ್ಲೂಕಿನಲ್ಲಿ 4ರಿಂದ 5ಮಾದರಿ ವರ್ಗಕೋಣೆ ನಿರ್ಮಿಸಲು ಅಗತ್ಯ ಯೋಜನೆ ರೂಪಿಸಲಾಗಿದ್ದು, ನಿರ್ಮಾಣ ಸಂಬಂಧ ಅಗತ್ಯ ಆರ್ಥಿಕ ನೆರವು ನೀಡಲಾಗುವುದು ಎಂದರು. ಒಂದು ವೇಳೆ ಕೋಣೆ ಇದ್ದಲ್ಲಿ ಅಗತ್ಯ ಉಪಕರಣ ಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ವಿಕಾಸ ಅಕಾಡೆಮಿ ವತಿಯಿಂದ ಸ್ವಯಂ ಉದ್ಯೋಗ ಯೋಜನ ಅಡಿಯಲ್ಲಿ ಪ್ರತಿ ತಾಲ್ಲೂಕಿಗೆ 8ಹೊಲಿಗೆ ಯಂತ್ರ ನೀಡಲಾಗುವುದು ಹಾಗೂ ಬೆಳವಣಿಗೆ ಹಂತದಲ್ಲಿ ಇರುವ ಪ್ರಾಮಾಣಿಕ ಸೇವೆ ಸಲ್ಲಿಸುವ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಸಂಬಂಧ ಸಹಾಯಧನ ನೀಡಲಾಗುವುದು ಎಂದರು. ಬಡ ಹಾಗೂ ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸೌಲಭ್ಯ ನೀಡಲಾಗುವುದು ಎಂದರು.

ರಾಷ್ಟ್ರಪತಿ ಭವನ ಹಾಗೂ ಸಂಸತ್ತು ನೋಡುವ ಅಪೇಕ್ಷೆ ಇದ್ದಲ್ಲಿ ಅಂಥವರು ಕನಿಷ್ಟ 8ದಿನ ಮುಂಚೆ ವೀಕ್ಷಿಸುವವರ ಪಟ್ಟಿ ಸಲ್ಲಿಸಿದಲ್ಲಿ ಅಂಥವರಿಗೆ ಉಚಿತ ಪಾಸ್ ನೀಡಲಾಗುವುದು. ಇನ್ನೂ ವಿವಿಧ ವಿನೂತನ ಯೋಜನೆಗಳ ಕುರಿತ ಪ್ರಣಾಳಿಕೆಯನ್ನು ಜೂನ್ 30ಕ್ಕೆ ಗುಲ್ಬರ್ಗದಲ್ಲಿ ಅಧಿಕೃತ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಮುಂಬರುವ ಲೋಕಸಭಾ ಚುನಾವಣೆ ಪೂರ್ವದಲ್ಲಿ ಕಲಂ 371ನ ಅಡಿ ತೆಲಂಗಾಣ ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಹಿನ್ನೆಲೆಯಲ್ಲಿ ವಿಶೇಷ ಪ್ಯಾಕೇಜ್ ಪ್ರಕಟಿಸುವ ಸಾಧ್ಯತೆಗಳಿವೆ ಎಂದು ಘಾಟಬೋರಾಳದ ಸಮಾಜ ಕಾರ್ಯಕರ್ತ ಭಾವುರಾವ ಪಾಟೀಲ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ವಿಕಾಸ ಅಕಾಡೆಮಿಯ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾಧೆ, ತಾಲ್ಲೂಕು ಸಂಯೋಜಕ ಶಿವಶಂಕರ ತರನಳ್ಳಿ, ಪ್ರಮುಖರಾದ ನಾರಾಯಣರಾವ ಚಿದ್ರಿ, ಶಿವಾನಂದ ಮಂಠಾಳಕರ್, ವಿಶ್ವನಾಥ ಪಾಟೀಲ ಮಾಡಗೂಳ್, ಗುಂಡಯ್ಯ ತೀರ್ಥ, ರಾಜಕುಮಾರ ಹರಕಂಚಿ, ಜಗನ್ನಾಥ ಹಲಮಡಗಿ, ಪಂಡಿತ್ ಬಾಳೂರೆ, ಶಿವಪುತ್ರ ಸ್ವಾಮಿ, ಸತ್ತಾರಸಾಬ್, ವಿಜಯಕುಮಾರ ದುರ್ಗದ, ರಾಜೇಂದ್ರ ಚವಾಣ, ಸುರೇಶ ಚೌಧರಿ, ಸೂರ್ಯಕಾಂತ ಮಠಪತಿ, ಮಹಾಗಾಂವ ಪಾಟೀಲ, ಕೆ.ಕೆ.ಯರಂತೇಲಿ ಮಠ್ ಮೊದಲಾದವರು ಇದ್ದರು.

ಜಿಲ್ಲಾಧ್ಯಕ್ಷರ ಆಯ್ಕೆ ಕಾನೂನುಬಾಹಿರ
ಬೀದರ್: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ನೂತನ ಅಧ್ಯಕ್ಷರನ್ನಾಗಿ ಸಿದ್ರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಿಸಿರುವುದು ಕಾನೂನು ಬಾಹಿರವಾಗಿದೆ ಎಂದು ಸಂಘದ ಜಿಲ್ಲಾ ಅಧ್ಯಕ್ಷ ಬಾಬುವಾಲಿ ದೂರಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ತಾವು ನೀಡಿರುವ ರಾಜೀನಾಮೆಯನ್ನು ರಾಜ್ಯ ಅಧ್ಯಕ್ಷರು ಇನ್ನೂ ಅಂಗೀಕರಿಸಿಲ್ಲ. ಹುದ್ದೆಯಲ್ಲಿ ಮುಂದುವರೆಯುವಂತೆ ಸೂಚಿಸಿದ್ದಾರೆ. ನೂತನ ಅಧ್ಯಕ್ಷರ ಆಯ್ಕೆ ಹಾಲಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿಯೇ ನಡೆಯಬೇಕು. ಅದಾಗಿಯೂ ನಿಯಮಗಳನ್ನು ಗಾಳಿಗೆ ತೂರಿ ಅನಧಿಕೃತ ಸಭೆ ನಡೆಸಿ ಅಧ್ಯಕ್ಷರ ಆಯ್ಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ತಾವು ಅಧ್ಯಕ್ಷರಾಗಿರುವಾಗ ತಮ್ಮ ಗಮನಕ್ಕೆ ತರದೆ ಮತ್ತೊಬ್ಬರು ಅಧ್ಯಕ್ಷರಾಗಿದ್ದಾರೆ ಎಂದು ಹೇಳಿಕೆ ನೀಡಿರುವುದು ದುರದೃಷ್ಟಕರ. ಈ ಕುರಿತು ಶೀಘ್ರದಲ್ಲಿಯೇ ಸಂಘದ ಸರ್ವ ಸದಸ್ಯರ ಸಭೆ ಕರೆದು ರಾಜ್ಯಾಧ್ಯಕ್ಷರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದ್ದಾರೆ.

ಸಂಘದ ಗೌರವ ಕಾಪಾಡಲು ರಾಜ್ಯ ಅಧ್ಯಕ್ಷರು ತಮ್ಮ ರಾಜೀನಾಮೆ ಅಂಗೀಕರಿಸಿ ಮತ್ತೊಮ್ಮೆ ಚುನಾವಣೆ ಮೂಲಕ ಜಿಲ್ಲಾ ಅಧ್ಯಕ್ಷರ ಆಯ್ಕೆಗೆ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.