ADVERTISEMENT

ರಸ್ತೆ, ಶೌಚಾಲಯ ನಿರ್ಮಾಣಕ್ಕೆ ಆದ್ಯತೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 8:35 IST
Last Updated 13 ಫೆಬ್ರುವರಿ 2011, 8:35 IST

ಭಾಲ್ಕಿ: ನಮ್ಮ ಕ್ಷೇತ್ರದ ಹಲವು ಹಳ್ಳಿಗಳಲ್ಲಿನ ರಸ್ತೆಗಳು ತೀವ್ರವಾಗಿ ಹದಗೆಟ್ಟಿವೆ. ಮಹಿಳೆಯರಿಗೆ ಸಾರ್ವಜನಿಕ ಶೌಚಾಲಯಗಳ ಅವಶ್ಯಕತೆ ಇದೆ. ಇವೆರಡಕ್ಕೂ ತುರ್ತು ಆದ್ಯತೆ ನೀಡಿ ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಹಲಬರ್ಗಾದ ನೂತನ ಜಿಪಂ ಸದಸ್ಯೆ ಸುಗಂಧಾ ಮಡಿವಾಳಪ್ಪ ಮಂಗಲಗಿ ಅವರ ಭರವಸೆಯಾಗಿದೆ.

ಸಮಸ್ಯೆಗಳು: ಹಲಬರ್ಗಾ, ಧನ್ನೂರಾ(ಎಸ್) ಗ್ರಾಮಗಳು ದೊಡ್ಡದಾಗಿವೆ. ಆದರೆ ಗ್ರಾಮಗಳಲ್ಲಿ ಸಾರ್ವಜನಿಕ ಶೌಚಾಲಯಗಳಿಲ್ಲ. ರಸ್ತೆ, ಚರಂಡಿ, ಕುಡಿಯುವ ನೀರಿನ ವ್ಯವಸ್ಥೆಗಳು ಸುಧಾರಿಸಬೇಕಿದೆ. ತೇಗಂಪೂರ ಕೆರೆ ಅಭಿವೃದ್ಧಿಯ ಅಗತ್ಯವಿದೆ. ಶಾಲೆಗೆ ಸುತ್ತುಗೋಡೆ ಮತ್ತಿತರ ಸೌಕರ್ಯಗಳು ಆಗಬೇಕಿವೆ. ಹಾಲಹಿಪ್ಪರ್ಗಾ, ಕೋಸಂ, ನಾಗೂರ(ಕೆ), ಅಲಿಯಾಬಾದ ರಸ್ತೆ ತೀರಾ ಹದಗೆಟ್ಟಿದೆ. ಜ್ಯಾಂತಿ ಮತ್ತು ಧನ್ನೂರಾ ನಡುವಿನ ರಸ್ತೆ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿವೆ. ಇಲ್ಲಿನ ಹಳ್ಳಕ್ಕೆ ಸೇತುವೆಯ ನಿರ್ಮಾಣ ಅನಿವಾರ್ಯವಾಗಿದೆ.

ತರನಳ್ಳಿ, ನೇಳಗಿ, ಗೋಧಿ ಹಿಪ್ಪರ್ಗಾ ಶಾಲೆಗಳಿಗೆ ಕಂಪೌಂಡ್ ಅಗತ್ಯವಿದೆ. ಗ್ರಾಮಗಳ ರಸ್ತೆ, ಚರಂಡಿ, ಕುಡಿಯುವ ನೀರಿನ ಪೂರೈಕೆ ಸರಿಪಡಿಸಬೇಕಿದೆ. ಜೋಳದಾಪಕಾ ಮತ್ತು ಗೋಧಿಹಿಪ್ಪರ್ಗಾ ಮಧ್ಯೆದಲ್ಲಿ ಮಂಜೂರಾಗಿರುವ ರಸ್ತೆ ಕಾಮಗಾರಿ ಆರಂಭವಾಗದೇ ವರ್ಷಗಳೇ ಉರುಳಿವೆ. ಮಳೆಗಾಲ ಬಂದರೆ ಕೆಸರಿನ ಗದ್ದೆಯಂತಾಗುತ್ತದೆ.

ಹುಣಜಿ(ಕೆ), ಕಣಜಿ, ಬ್ಯಾಲಹಳ್ಳಿ(ಕೆ), ಹಾಲಹಳ್ಳಿ(ಕೆ), ನೀಲಂನಳ್ಳಿ, ಮಳಚಾಪುರ, ರುದನೂರ, ಸೇವಾನಗರ, ಮತ್ತು ಖಾನಾಪುರಗಳಲ್ಲೂ ಅಗತ್ಯವಿರುವ ಮೂಲ ಸೌಕರ್ಯಗಳು ವಿಕಾಸಗೊಳ್ಳಬೇಕಿವೆ. ಸಾಕಷ್ಟು ಕಡೆ ಉದ್ಯೋಗ ಖಾತ್ರಿ ಕಾಮಗಾರಿಗಳು ಬೋಗಸ್ ಆಗಿ ಲಕ್ಷಾಂತರ ಹಣ ಲೂಟಿಖೋರರ ಪಾಲಾಗಿವೆ ಎಂಬ ಆರೋಪಗಳು ಗಂಭೀರವಾಗಿವೆ. ಇವುಗಳ ತನಿಖೆ ನಡೆಯಬೇಕಿದೆ.

ಭರವಸೆ: ಹಲಬರ್ಗಾ ಕ್ಷೇತ್ರದಲ್ಲಿ ಬರುವ ಎಲ್ಲ ಗ್ರಾಮಗಳಿಗೂ ಶೀಘ್ರದಲ್ಲಿ ಭೇಟಿ ನೀಡಿ ಸಮಸ್ಯೆಗಳ ಪಟ್ಟಿ ಸಿದ್ಧಪಡಿಸಲಾಗುವದು. ಆದ್ಯತೆಯ ಮೇರೆಗೆ ಎಲ್ಲ ವರ್ಗದ ಜನರಿಗೆ ಅನುಕೂಲವಾಗುವಂಥ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವದಾಗಿ ಈ ಕ್ಷೇತ್ರದ ಜಿಪಂ ಸದಸ್ಯೆ ಸುಗಂಧಾ ಮಡಿವಾಳಪ್ಪ ಮಂಗಲಗಿ ಅವರು ಭರವಸೆ ನೀಡುತ್ತಾರೆ.                                                          
         

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.