ADVERTISEMENT

ರಾಮನಗರ ನಿವಾಸಿಗಳಿಗೆ ಸೌಲಭ್ಯ ಮರೀಚಿಕೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2012, 4:30 IST
Last Updated 22 ಅಕ್ಟೋಬರ್ 2012, 4:30 IST
ರಾಮನಗರ ನಿವಾಸಿಗಳಿಗೆ ಸೌಲಭ್ಯ ಮರೀಚಿಕೆ
ರಾಮನಗರ ನಿವಾಸಿಗಳಿಗೆ ಸೌಲಭ್ಯ ಮರೀಚಿಕೆ   

ಔರಾದ್: ಪಟ್ಟಣದ ಹೊರ ವಲಯದ ರಾಮನಗರ ಆಶ್ರಯ ನಿವಾಸಿಗಳು ಕಳೆದ ಹಲವು ವರ್ಷಗಳಿಂದ ರಸ್ತೆ, ಕುಡಿಯುವ ನೀರು ಮತ್ತಿತರ ಮೂಲ ಸೌಲಭ್ಯದಿಂದ ವಂಚಿತರಾಗಿದ್ದಾರೆ.

ಬಡವರು, ಕೂಲಿ ಕಾರ್ಮಿಕರು ಮತ್ತು ನಿವೇಶನ ರಹಿತರಿಗಾಗಿ ಕಳೆದ ಹತ್ತು ವರ್ಷಗಳ ಹಿಂದೆ ರಾಮನಗರ ಎಂಬ ಆಶ್ರಯ ಕಾಲೊನಿ ನಿರ್ಮಿಸಲಾಗಿದೆ. ಆರಂಭದಲ್ಲಿ 135 ಕುಟುಂಬಗಳು ವಾಸವಾಗಿದ್ದ ಇಲ್ಲಿ ಈಗ 200ಕ್ಕೂ ಹೆಚ್ಚು ಕುಟುಂಬಗಳಿವೆ. ಪಟ್ಟಣ ಪಂಚಾಯಿತಿಯವರು ಗಣೇಶ್ ಮಾರುಕಟ್ಟೆ ತೆರವುಗೊಳಿಸುವ ವೇಳೆ ಅಲ್ಲಿಯ 40 ಗುಡಿಸಲುವಾಸಿಗಳು ನಿರಾಶ್ರಿತರಾದರು. ಅವರೆಲ್ಲರಿಗೂ ರಾಮನಗರ ಕಾಲೊನಿಗೆ ಹೋಗಲು ಹೇಳಿದರು. ಈಗ ಅಲ್ಲಿ 250 ಕುಟುಂಬಗಳ 800ಕ್ಕೂ ಹೆಚ್ಚು ಜನರು ಮೂಲ ಸೌಲಭ್ಯಗಳಿಲ್ಲದೆ ಜೀವನ ಸಾಗಿಸುತ್ತಿದ್ದಾರೆ.

ನಮಗೆ ಮನೆ ಕಟ್ಟಿ ಕೊಡುವುದಾಗಿ ಹೇಳಿ ಗಣೇಶ್ ಮಾರುಕಟ್ಟೆಯಿಂದ ಇಲ್ಲಿಗೆ ಸ್ಥಳಾಂತರಿಸಿದ್ದಾರೆ. ಮನೆ ಕಟ್ಟುವುದು ದೂರದ ಮಾತು. ನಮಗೆ ಕುಡಿಯಲು ನೀರು, ರಾತ್ರಿ ವೇಳೆ ಬೆಳಕಿನ ವ್ಯವಸ್ಥೆ ಮತ್ತು ಓಡಾಡಲು ಸೂಕ್ತ ರಸ್ತೆ ಸೌಲಭ್ಯವಿಲ್ಲ ಎಂದು ಇಲ್ಲಿಯ ವಿದ್ಯಾರ್ಥಿ ನಿತಿನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಲೊನಿಯ ಕೆಲ ಮನೆಗಳಿಗೆ ವಿದ್ಯುತ್ ವ್ಯವಸ್ಥೆ ಇದೆ. ಇನ್ನು ಕೆಲವರು ತಂತಿ ಹಾಕಿಕೊಂಡು ವಿದ್ಯುತ್ ಪಡೆದುಕೊಂಡಿದ್ದಾರೆ. ಅಲ್ಲಲ್ಲಿ ತಂತಿ ಜೋತು ಬಿದ್ದು ಭಯವಾಗುತ್ತಿದೆ. ಆದರೆ ಈ ಬಗ್ಗೆ ಯಾರು ಕೇಳುವವರು ಹೇಳುವವರು ಇಲ್ಲ ಎಂದು ಅಲ್ಲಿಯ ನಿವಾಸಿಗಳು ದೂರಿದ್ದಾರೆ.

ಅಲ್ಲಲ್ಲಿ ಹುಲ್ಲು ಮತ್ತು ಮುಳ್ಳುಗಿಡಗಳು ಬೆಳೆದು ಹಾವು ಚೇಳಿನ ಭಯ ಕಾಡುತ್ತಿದೆ. ಮಳೆ ಬಿದ್ದರಂತೂ ಸಮಸ್ಯೆ ಮತ್ತಷ್ಟು ಬಿಗಡಾಯಿಸಿ ರಾತ್ರಿ ವೇಳೆ ಮಹಿಳೆಯರು ಮತ್ತು ಮಕ್ಕಳು ಭಯದ ನೆರಳಿನಲ್ಲಿ ಬದುಕುವಂತಾಗಿದೆ ಎಂದು ಅಲ್ಲಿಯ ನಿವಾಸಿ ಉಮಾಕಾಂತ ಅಲವತ್ತುಕೊಂಡಿದ್ದಾರೆ. ಸಂಬಂಧ ಪಟ್ಟವರು ಕಾಳಜಿ ವಹಿಸಿ ಇಲ್ಲಿಯ ಜನರಿಗೆ ಅಗತ್ಯ ಸೌಲಭ್ಯ ಕಲ್ಪಿಸಿಕೊಡುವಂತೆ ವಿವಿಧ ಜನಪರ ಸಂಘಟನೆಗಳು ಒತ್ತಾಯಿಸಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.