ADVERTISEMENT

ರೈಲ್ವೆ ಕಾರ್ಮಿಕ ಸಾವು: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 5:01 IST
Last Updated 7 ಸೆಪ್ಟೆಂಬರ್ 2013, 5:01 IST

ಸೇಡಂ: ರೈಲ್ವೆ ಕಾರ್ಮಿಕನ ಸಾವಿಗೆ ಕಾರಣನಾದ ಎಂಜಿನಿಯರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಾಂಡೂರು ಶಾಖೆಯ ಮಜ್ದೂರ್ ಯೂನಿಯನ್‌ನ ನೂರಾರು ಕಾರ್ಮಿಕರು ಮತ್ತು ಅಧಿಕಾರಿಗಳು ಪ್ರತಿಭಟನೆ ನಡೆಸಿದರು.
ಇಲ್ಲಿಯ ದಕ್ಷಿಣ ಮಧ್ಯ ರೈಲ್ವೆ ಕಾರ್ಯಾಲಯದ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಬಿಹಾರ ಮೂಲದ ಉದಯಕುಮಾರ (20) ಚಿತ್ತಾಪುರ ತಾಲ್ಲೂಕಿನ ಸೂಲಹಳ್ಳಿ ರೈಲ್ವೆ ನಿಲ್ದಾಣದಲ್ಲಿ ಯುನಿಟ್-2ರ ಟ್ರ್ಯಾಕ್ ಮ್ಯೋನ್ ಆಗಿ ಕೆಲಸ ಮಾಡುತ್ತಿದ್ದನು. ಟಿ.ಸಿ. (ಟಿಕೆಟ್ ಚೆಕ್ಕರ್) ಪರೀಕ್ಷೆ ಬರೆಯಲು 5 ದಿನಗಳ ರಜೆಗಾಗಿ ಸೇಡಂನ ರೈಲ್ವೆ ಕಾರ್ಯಾಲಯದ ಕಿರಿಯ ಎಂಜಿನಿಯರ್ ಅಜಿತ್ ಚಕ್ರವರ್ತಿ ಬಳಿ ಮನವಿ ಮಾಡಿದ್ದಾನೆ. ದಿನ ಪೂರ್ತಿ ದುಂಬಾಲು ಬಿದ್ದಿದ್ದಾನೆ. ಆದರೂ ಅವರು ನಿರಾಕರಿಸಿದ್ದಾರೆ. 

ಚಿತ್ತಾಪುರಕ್ಕೆ ಹೈದರಾಬಾದ್-ವಾಡಿ ಪ್ಯಾಸೆಂಜರ್‌ನಲ್ಲಿ ವಾಪಸ್ಸಾಗುವ ವೇಳೆ ಮಾನಸಿಕವಾಗಿ ನೊಂದು ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ ಎಂದು ದಕ್ಷಿಣ ಮಧ್ಯ ರೈಲ್ವೆ ಮಜ್ದೂರ್ ಯೂನಿಯನ್ ಅಧ್ಯಕ್ಷ ಪಿ.ವಿ. ವೆಂಕಟೇಶ ತಿಳಿಸಿದ್ದಾರೆ. 

ಈ ರೀತಿಯ ದುರ್ವರ್ತನೆ ತೋರಿದ ಕಿರಿಯ ಎಂಜಿನಿಯರ್ ವಿರುದ್ಧ  ಕಾನೂನು  ಕ್ರಮ ಕೈಗೊಳ್ಳಬೇಕು ಮತ್ತು ಮುಂದೆ ಈ ರೀತಿಯ ಅನಾಹುತಗಳು ನಡೆಯದಂತೆ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಅವರು  ಒತ್ತಾಯಿಸಿದರು.

ಮಜ್ದೂರ್ ಯೂನಿಯನ್ ಕಾರ್ಯದರ್ಶಿ ಬಿ.ಸಿ. ಕುಲ್ಲಯನ್ನ, ಖಜಾಂಚಿ ಸಿ.ಎಚ್. ರಮೇಶ ಕುಮಾರ, ಉಪಾಧ್ಯಕ್ಷ ಬಿ. ಸಂತೋಷಕುಮಾರ ಝಾ, ಸಿದ್ಧರಾಜು ಸೇರಿದಂತೆ ನೂರಾರು ಕಾರ್ಮಿಕರು ಮತ್ತು ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.