ADVERTISEMENT

ರೋಗ ಹತೋಟಿಗೆ ತುರ್ತುಸಭೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2012, 9:55 IST
Last Updated 17 ಜುಲೈ 2012, 9:55 IST

ಕಮಲನಗರ: ಸಮೀಪದ ಡೊಣಗಾಂವ್ ಗ್ರಾಮದಲ್ಲಿ ಕಲುಷಿತಗೊಂಡ ನೀರು ಸೇವಿಸಿ ವಾಂತಿ ಭೇದಿ ಉಲ್ಬಣಗೊಂಡ ಹಿನ್ನಲೆಯಲ್ಲಿ ಸೋಮವಾರ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಶಾಸಕ ಪ್ರಭು ಚವ್ಹಾಣ ನೇತೃತ್ವದಲ್ಲಿ ತಾಲ್ಲೂಕು ಅಧಿಕಾರಿಗಳ ತುರ್ತುಸಭೆ ನಡೆಯಿತು.

ಕಳೆದ ನಾಲ್ಕೈದು ದಿನಗಳ ಹಿಂದೆ ವಾಂತಿ ಭೇದಿ ಪ್ರಕರಣದಿಂದ ಇಬ್ಬರು ಮೃತಪಟ್ಟಿದ್ದು, ಅನೇಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತಿರುವ ವಾಂತಿ ಭೇದಿ ಪ್ರಕರಣವನ್ನು ಶೀಘ್ರದಲ್ಲಿ ಪರಿಹಾರ ಕೊಂಡುಕೊಳ್ಳಲು ಸಭೆಯಲ್ಲಿ ಚರ್ಚಿಸಲಾಯಿತು.

ಕುಡಿಯುವ ನೀರು ಸೇರಿದಂತೆ ಚರಂಡಿ ಹಾಗೂ ಗ್ರಾಮದ ಸ್ವಚ್ಛತೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ವಾಂತಿ ಭೇದಿ ಉಲ್ಬಣಗೊಂಡಿರುವ ಬಡಾವಣೆಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ತುರ್ತು ಕ್ರಮಕೈಗೊಳ್ಳಬೇಕು. ಗ್ರಾಮದ ಕುಡಿಯುವ ನೀರಿನ ತೊಟ್ಟಿಗಳನ್ನು ಸ್ವಚ್ಛಗೊಳಿಸಿ, ಬ್ಲೀಚಿಂಗ್ ಪೌಡರ್ ಹಾಕಿ ಶುದ್ಧೀಕರಿಸುವಂತೆ ಕೂಡಲೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಪ್ರಭು ಚವ್ಹಾಣ ಅಧಿಕಾರಿಗಳಿಗೆ ಸೂಚಿಸಿದರು.

ಮಳೆಗಾಲ ಇರುವುದರಿಂದ ರೋಗ ಉಲ್ಬಣಗೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತವೆ. ನೈರ್ಮಲ್ಯ ಕಾಪಾಡುವುದರ ಜತೆಗೆ ಕಾಯಿಸಿ ಆರಿಸಿದ ನೀರು ಕುಡಿಯುವಂತೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತಾಲ್ಲೂಕಿನ ಪ್ರತಿ ಗ್ರಾಮಗಳಲ್ಲಿ ಡಂಗೂರ ಸಾರುವಂತೆ ಗ್ರಾಮ ಪಂಚಾಯಿತಿಗಳಿಗೆ ಆದೇಶ ಹೊರಡಿಸುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗದಿಗೆಪ್ಪನವರ್ ಅವರಿಗೆ ಶಾಸಕರು ಸೂಚಿಸಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಅನಿಲ ಚಿಂತಾಮಣಿ ಮಾತನಾಡಿ, ಗ್ರಾಮದಲ್ಲಿನ ನೀರಿನ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಒಂದೆರಡು ದಿನಗಳಲ್ಲಿ ಅದರ ವರದಿ ಬರಲಿದೆ. ವಾಂತಿ ಭೇದಿ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಅಗತ್ಯ ಔಷಧಿಗಳನ್ನು ಸಂಗ್ರಹಿಸಿಡಲಾಗಿದೆ.

ಹತೋಟಿಗೆ ಬರದ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಪರಸ್ಥಳಕ್ಕೆ ಕೊಂಡೊಯ್ಯಲು 24 ಗಂಟೆಗಳ ಸೇವೆ ಒದಗಿಸಲು ಆಂಬುಲೆನ್ಸ್ ಸದಾ ಸಿದ್ಧವಾಗಿರುತ್ತದೆ. ಗ್ರಾಮಸ್ಥರು ಭಯ ಪಡುವ ಅಗತ್ಯವಿಲ್ಲ ಎಂದರು.

ವಾಂತಿ ಭೇದಿಯಿಂದ ಕಳೆದ ನಾಲ್ಕು ದಿನಗಳ ಹಿಂದೆ ಮೃತಪಟ್ಟ ಅಂಜನಾಬಾಯಿ ಭೋಸ್ಲೆ ಹಾಗೂ ಸೇವಂತಿಬಾಯಿ ಕಾಂಬಳೆ ಅವರ ಕುಟುಂಬ ವರ್ಗದವರನ್ನು ಶಾಸಕ ಚವ್ಹಾಣ ಭೇಟಿ ಮಾಡಿ ಸಾಂತ್ವನ ಹೇಳಿದರು. ಸರ್ಕಾರದಿಂದ ಆರ್ಥಿಕ ಸಹಾಯ ಒದಗಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. ಮೃತರ ಕುಟುಂಬದವರಿಗೆ ತಲಾ 10 ಸಾವಿರ ರೂಪಾಯಿ ಒದಗಿಸುವಂತೆ ತಹಸೀಲ್ದಾರ್ ಅವರಿಗೆ ಸೂಚಿಸಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಶ್ರೀರಂಗ್ ಪರಿಹಾರ್, ಮುಖಂಡ ಸುರೇಶ ಭೋಸ್ಲೆ, ತಹಸೀಲ್ದಾರ್ ಶಿವಕುಮಾರ
ಶೀಲವಂತ, ತಾಲ್ಲೂಕು ಪಂಚಾಯಿತಿ ಇಒ ಗದಿಗೆಪ್ಪನವರ್, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಅಧಿಕಾರಿ ಅಶೋಕಕುಮಾರ ಕಾಳಗಿ, ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಗುರುರಾಜ ಹಿರೇಗೌಡರ್, ಸಹಾಯಕ ಕೃಷಿ ನಿರ್ದೇಶಕ ಸೋಮಶೇಖರ ಬಿರಾದಾರ್, ಡಾ.ಜ್ಞಾನೇಶ್ವರ ನಿರ್ಗುಡೆ, ಡಾ.ಮೋಹನ ಜಾಧವ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.