ADVERTISEMENT

ಲಂಬಾಣಿ ನೃತ್ಯ, ಹೋಳಿ ಹಬ್ಬಕ್ಕೆ ಮೆರಗು

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2012, 19:30 IST
Last Updated 9 ಮಾರ್ಚ್ 2012, 19:30 IST
ಲಂಬಾಣಿ ನೃತ್ಯ, ಹೋಳಿ ಹಬ್ಬಕ್ಕೆ ಮೆರಗು
ಲಂಬಾಣಿ ನೃತ್ಯ, ಹೋಳಿ ಹಬ್ಬಕ್ಕೆ ಮೆರಗು   

ಆಳಂದ: ತಾಲ್ಲೂಕಿನಲ್ಲಿ ಈ ಬಾರಿ ಹೋಳಿ ಹಬ್ಬವನ್ನು ಗುರುವಾರ ಮತ್ತು ಶುಕ್ರವಾರ ಎರಡೂ ದಿನ ಸಡಗರ ಸಂಭ್ರಮದಿಂದ ಆಚರಿಸಲಾಗಿದ್ದು ಜಾತಿಮತ ಭೇದವಿಲ್ಲದೆ ಎಲ್ಲ ಸಮುದಾಯದವರು ಪಾಲ್ಗೊಂಡದ್ದು ವಿಶೇಷವಾಗಿತ್ತು.

ಪಟ್ಟಣ ಸೇರಿದಂತೆ ಲಂಬಾಣಿ ತಾಂಡಾಗಳಲ್ಲಿ ಮಹಿಳೆಯರ ನೃತ್ಯ ವಿಶೇಷವಾಗಿ ಕಂಡುಬಂತು. ಆಳಂದ ಪಟ್ಟಣದ ಚಕ್ರಕಟ್ಟಾ ಹಾಗೂ ರಾಮ ಮಂದಿರ ಬಳಿ ಮೊಸರು ಗಡಿಗೆ ಒಡೆ ಯುವ ಕಾರ‌್ಯಕ್ರಮ ಗಮನಸೆಳೆಯಿತು. ಬಣ್ಣದಲ್ಲಿ ಮಿಂದೆದ್ದ ಪಟ್ಟಣದ ನೂರಾರು ಯುವಕರು ಎತ್ತಿನ ಗಾಡಿಯಲ್ಲಿ ಬಣ್ಣದ ಬ್ಯಾರಲ್ ಸಮೇತ ಮೆರವಣಿಗೆಯಲ್ಲಿ ಹೊರಟರು.

ಎಳೆಯರು ಮತ್ತು ಯುವಕರು ಬೆಳಿಗ್ಗೆಯಿಂದಲೇ ಪರಸ್ಪರ ಬಣ್ಣ ಎರಚಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುವುದು, ಗುಂಪು ಗುಂಪಾಗಿ ಮನೆಮನೆಗೆ ತೆರಳಿ ಬಗೆಬಗೆಯ ಬಣ್ಣ ಬಳಿದು ಸಂಭ್ರಮಪಟ್ಟರು.

ಆಳಂದ ಸಮೀಪದ ಮಾದನಹಿಪ್ಪರಗಾ, ಹೆಬಳಿ, ಕಮನಹಳ್ಳಿ, ಹಿರೋಳಿ, ಕೊಡಲಹಂಗರಗಾ, ಸಾವಳಗಿ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಬುಧವಾರ ರಾತ್ರಿ ಕಾಮದಹನ ನಡೆಸಿ ಗುರುವಾರ ಧೂಳಂಡಿ ನಡೆಸಲಾಯಿತು.  ಹುಣ್ಣಿಮೆಯ ಗೊಂದಲದಿಂದಾಗಿ ತಾಲ್ಲೂಕಿನ ಹಳ್ಳಿಸಲಗರ, ಪಡಸಾವಳಿ, ಜೀರಳ್ಳಿ, ಜಮಗಾ (ಕೆ) ಇತರ ಗ್ರಾಮಗಳಲ್ಲಿ ಗುರುವಾರ ರಾತ್ರಿ ಕಾಮದಹನ ಮಾಡಿ ಶುಕ್ರವಾರ  ಧೂಳಂಡಿ ಆಚರಿಸ ಲಾಯಿತು. ರಾತ್ರಿಯಿಡಿ ಯುವಕರು ಕಟ್ಟಿಗೆಯನ್ನು ಒಟ್ಟಿ ಬೆಂಕಿ ಇಟ್ಟು ಹರ್ಷೋದ್ಗಾರದಿಂದ ಕಾಮನನ್ನು ಸಂಹಾರ ಮಾಡುವುದು ಜರುಗಿತು.

ಕೆಲವು ಮನೆಗಳಲ್ಲಿ ಎಳೆಯ ಮಕ್ಕಳ ಕೊರಳಲ್ಲಿ ಬೆಂಡು ಬತಾಸಿನ ಸರ ಹಾಕಿ ಸಂಭ್ರಮಪಟ್ಟದ್ದು ಕಂಡುಬಂತು.

ಡಿವೈಎಸ್ಪಿ ಎಸ್.ಇ. ಸಾಂಬಾ ಹಾಗೂ ಸಿಪಿಐ ಜಿ.ಎಸ್. ಹುಡಗಿ ಅವರ ನೇತೃತ್ವಲ್ಲಿ ಬಿಗಿಬಂದೋಬಸ್ತ್ ಏರ್ಪಡಿಸಲಾಗಿತ್ತು. ಅಂಗಡಿ ಮುಗ್ಗಟ್ಟು ಬಂದ್ ಮಾಡಲಾಗಿತ್ತು.
-

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.