ADVERTISEMENT

ಲಘು ಪೋಷಕಾಂಶ ಬಳಕೆಯಿಂದ ಅಧಿಕ ಇಳುವರಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2011, 10:35 IST
Last Updated 9 ಸೆಪ್ಟೆಂಬರ್ 2011, 10:35 IST

ಜನವಾಡ: ರೈತರು ಒಣ ಭೂಮಿಯಲ್ಲಿ ಲಘು ಪೋಷಕಾಂಶ ಬಳಸಿ ಹೆಚ್ಚಿನ ಇಳುವರಿ ಪಡೆಯಬೇಕು ಎಂದು ಹೈದರಾಬಾದ್‌ನ ಇಕ್ರಿಸ್ಯಾಟ್ ಸಂಸ್ಥೆಯ ವಿಜ್ಞಾನಿ ಪುರುಷೋತ್ತಮ ಸಲಹೆ ಮಾಡಿದರು.

ಬೀದರ್ ತಾಲ್ಲೂಕಿನ ದದ್ದಾಪುರ ಗ್ರಾಮದ ಗಣಪತರಾವ ಪುಂಡಲಿಕ ಅವರ ಹೊಲದಲ್ಲಿ ಗುರುವಾರ ಏರ್ಪಡಿಸಿದ್ದ ಭೂಚೇತನ ಯೋಜನೆಯ ಹೆಸರು ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭೂಚೇತನ ಯೋಜನೆ ಕರ್ನಾಟಕದಲ್ಲಿ ಸಮರ್ಪಕ ಅನುಷ್ಠಾನಗೊಂಡಿದ್ದು, ದೇಶಕ್ಕೆ ಮಾದರಿಯಾಗಿದೆ. ಹೀಗಾಗಿ ರೈತರು ಇದನ್ನು ಸದುಪಯೋಗ ಪಡೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಸಾವಯವ ಕೃಷಿಯಲ್ಲಿ ಕಡಿಮೆ ಖರ್ಚಿನಲ್ಲಿ ಅಧಿಕ ಆದಾಯ ಗಳಿಸಬಹುದಾಗಿದೆ. ಆದ್ದರಿಂದ ರೈತರು ಸಾವಯವ ಕೃಷಿಯತ್ತ ತಮ್ಮ ಚಿತ್ತ ಹರಿಸಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಲಕ್ಷ್ಮಿಕಾಂತ ತಿಳಿಸಿದರು.

ದದ್ದಾಪುರ ಗ್ರಾಮವನ್ನು ಮಾದರಿಯಾಗಿಟ್ಟುಕೊಂಡು ಬೇರೆ ಬೇರೆ ಗ್ರಾಮಗಳ ರೈತರು ಕೂಡ ಲಘು ಪೋಷಕಾಂಶ ಬಳಸಿ ಒಣ ಭೂಮಿಯಲ್ಲಿ ಉತ್ತಮ ಬೆಳೆ ಬೆಳೆಯಬೇಕು ಎಂದು ಜನವಾಡ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಆರತಿ ಪಾಟೀಲ್ ಹೇಳಿದರು.

ಭೂಚೇತನ ಯೋಜನೆಯಡಿ ಖುಷ್ಕಿ ಭೂಮಿಯಲ್ಲಿ ಹೆಚ್ಚಿನ ಇಳುವರಿ ಪಡೆಯುವುದಕ್ಕಾಗಿ ಲಘು ಪೋಷಕಾಂಶ ಒದಗಿಸಲಾಗುತ್ತಿದೆ. ಲಘು ಪೋಷಕಾಂಶಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ಹೆಚ್ಚಾಗಿ ಉತ್ತಮ ಬೆಳೆ ಬರುತ್ತದೆ. ದದ್ದಾಪುರ ಗ್ರಾಮವನ್ನು ಭೂಚೇತನ ಯೋಜನೆಯಡಿ ಮಾದರಿ ಗ್ರಾಮವನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್. ಕಟಗಿ, ಭೂಚೇತನ ಯೋಜನೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಬೀದರ್ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಶಾಂತಕುಮಾರ ಪನಸಾಲೆ, ತಾಲ್ಲೂಕು ಪಂಚಾಯಿತಿ ಸದಸ್ಯ ಸುಭಾಷ ಪಾಟೀಲ್, ಗ್ರಾಮ ಪಂಚಾಯಿತಿ ಸದಸ್ಯ ನಾಮದೇವ, ಅನುಗಾರ ಬಸವರಾಜ ಏಣಕೂರು, ವೆಂಕಟರಾವ ಶೇರಿಕಾರ, ಚಂದ್ರಪ್ಪ ಜಾಬಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.