ADVERTISEMENT

ಲೋಕಾಯುಕ್ತ ಮಾತ್ರವಲ್ಲ, ಸಿ.ಬಿ.ಐ. ತನಿಖೆಗೂ ಸಿದ್ಧ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2011, 9:40 IST
Last Updated 10 ಫೆಬ್ರುವರಿ 2011, 9:40 IST

ಬೀದರ್: ಕಟಾವು ಗ್ಯಾಂಗ್ ತರುವಲ್ಲಿ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆದಿಲ್ಲ ಎಂದು ಕಾರ್ಖಾನೆಯ ಅಧ್ಯಕ್ಷ ಸುಭಾಷ ಕಲ್ಲೂರ ಸ್ಪಷ್ಟಪಡಿಸಿದರು.ಕೆಲ ನಿರ್ದೇಶಕರು ಅವ್ಯವಹಾರ ಆಗಿರುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಲೋಕಾಯುಕ್ತಕ್ಕೆ ದೂರು ಸಲ್ಲಿಸುವುದಾಗಿಯೂ ತಿಳಿಸಿದ್ದಾರೆ. ಆದರೆ, ಈ ಬಗ್ಗೆ ಸಿ.ಬಿ.ಐ. ತನಿಖೆ ನಡೆದರೂ ಎದುರಿಸಲು ತಾವು ಸಿದ್ಧರಿರುವುದಾಗಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ತಮ್ಮ ಹೆಸರಿಗೆ ಮಸಿ ಬಳಿಯುವುದಕ್ಕಾಗಿ ಕೆಲವರು ತಾವು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಒಂದಿಲ್ಲೊಂದು ರೀತಿಯ ಅಡೆ ತಡೆ ಉಂಟು ಮಾಡುತ್ತಿದ್ದಾರೆ. ತಮ್ಮನ್ನು ಹುದ್ದೆಯಿಂದ ಕೆಳಗಿಳಿಸಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಆಪಾದಿಸಿದರು.ಕಟಾವು ಗ್ಯಾಂಗ್ ತರುವುದಕ್ಕಾಗಿ 8 ಕೋಟಿ ರೂಪಾಯಿ ನೀಡಲಾಗಿತ್ತು. ಆದರೆ, ಕಡಿಮೆ ಕಟಾವು ಗ್ಯಾಂಗ್‌ಗಳನ್ನು ತರುವ ಮೂಲಕ 3 ಕೋಟಿ ರೂಪಾಯಿ ಅವ್ಯವಹಾರ ನಡೆಸಲಾಗಿದೆ ಎಂಬ ಹೇಳಿಕೆ ಹುಸಿಯಾಗಿದೆ. ಈಗಲೇ ಕಾರ್ಖಾನೆಯ ಲೆಕ್ಕ ಪತ್ರ ಮುಗಿದಿಲ್ಲ. ಹೀಗಾಗಿ ಅವ್ಯವಹಾರದ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಕಾರ್ಖಾನೆಯಲ್ಲಿ ಸದ್ಯ 194 ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ಹಾಗೂ ಕಟಾವು ಗ್ಯಾಂಗ್, ಲಾರಿ, ಟ್ರ್ಯಾಕ್ಟರ್ ಮತ್ತು 500 ಎತ್ತಿನ ಬಂಡಿಗಳು ಕಾರ್ಯ ನಿರ್ವಹಿಸುತ್ತಿವೆ. ಮುಂಗಡ ಪಡೆದು 78 ಗ್ಯಾಂಗ್‌ಗಳು ಕೆಲಸಕ್ಕೆ ಹಾಜರಾಗಿಲ್ಲ. ಅವರಿಂದ ಹಣ ವಸೂಲಿ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.ಆಡಳಿತ ಮಂಡಳಿಯಲ್ಲಿ ಕುಳಿತು ಸಮಸ್ಯೆ ಬಗ್ಗೆ ಚರ್ಚೆ ಮಾಡೋಣ. ಅದು ಬಿಟ್ಟು ನಿರ್ದೇಶಕರೇ ಧರಣಿ ಮಾಡಿದರೆ ಹೇಗೆ? ಸಂಜಯ ಖೇಣಿ ಅವರು 3 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ನೀಡಿರುವ ಹೇಳಿಕೆಯನ್ನು ಖಂಡಿಸಲಾಗುತ್ತದೆ ಎಂದು ಹೇಳಿದರು.

ಖೇಣಿ ಅವರು ರಾಜಕೀಯಕ್ಕೆ ಬಂದು ಎಷ್ಟು ದಿನಗಳಾಯಿತು? ಅವರಿಗೆ ನಿಜವಾಗಿ ರೈತರ ಬಗ್ಗೆ ಕಳಕಳಿ ಇದೆಯೇ? ಎಂದು ಪ್ರಶ್ನಿಸಿದರು. ಕಾರ್ಖಾನೆ ಉಳಿಸಬೇಕಾದ ನಿರ್ದೇಶಕರೇ ಅಡ್ಡಿಪಡಿಸುತ್ತಿದ್ದಾರೆ. ನಿರ್ದೇಶಕರ ಧರಣಿ ರಾಜಕೀಯಪ್ರೇರಿತ ಹಾಗೂ ರೈತ ವಿರೋಧಿಯಾಗಿದೆ. ಬಿಜೆಪಿ ಮುಖಂಡರಾದ ಖೇಣಿ ಪಕ್ಷದ ವೇದಿಕೆಯಲ್ಲಿ ಮಾತಾಡಬೇಕು. ಸರ್ಕಾರದಿಂದ 15 ಕೋಟಿ ಸಾಲ ತಂದು ಕಾರ್ಖಾನೆ ನಡೆಸಲಾಗುತ್ತಿದೆ. ಖೇಣಿ ಅವರ ಹೇಳಿಕೆ ಬಗ್ಗೆ ಕೋರ್ ಕಮೀಟಿ ಸಭೆಯಲ್ಲಿ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಕಾರ್ಖಾನೆಗೆ 105 ಕೋಟಿ ಸಾಲ ಇದೆ. ಇದರಲ್ಲಿ ಸರ್ಕಾರಕ್ಕೆ 40 ಕೋಟಿ ರೂಪಾಯಿ ಕೊಡಬೇಕಾಗಿದೆ. ಕಳೆದ ಹಂಗಾಮಿಗೆ ಹೋಲಿಸಿದರೆ ಈ ಬಾರಿ ಉತ್ತಮ ಇಳುವರಿ ಬಂದಿದೆ. ದಿನದ ಇಳುವರಿ 10.65 ಹಾಗೂ ಸರಾಸರಿ ಇಳುವರಿ 9.81 ಆಗಿದೆ ಎಂದು ಹೇಳಿದರು.

ಪ್ರಸಕ್ತ ಹಂಗಾಮಿನಲ್ಲಿ ಈವರೆಗೆ 2,27,398 ಮೆಟ್ರಿಕ್ ಟನ್ ಕಬ್ಬು ನುರಿಸಿ 2,18,350 ಕ್ವಿಂಟಲ್ ಸಕ್ಕರೆ ಉತ್ಪಾದನೆ ಮಾಡಲಾಗಿದೆ. ಒಟ್ಟು 6 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ. ಕಾರ್ಖಾನೆ ಏಪ್ರಿಲ್‌ವರೆಗೆ ನಡೆಯಲಿದೆ. ರೈತರ ಕಬ್ಬು ಉಳಿದಲ್ಲಿ ಅದರ ನುರಿಕೆ ಆಗುವವರೆಗೆ ಕ್ರಷಿಂಗ್ ಮುಂದುವರೆಸಲಾಗುತ್ತದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಖಾನೆಯ ಉಪಾಧ್ಯಕ್ಷ ಎಂ.ಜಿ. ಮುಳೆ, ನಿರ್ದೇಶಕರಾದ ವೀರಣ್ಣ ಪಾಟೀಲ್, ಬಸವರಾಜ ಆರ್ಯ, ಸಂಜೀವರೆಡ್ಡಿ ಯರಬಾಗ್, ಮಯಾದೇವಿ ಹುಡಗಿ, ಕಿರಣ ಚಂದಾ, ಪ್ರಭುಶೆಟ್ಟಿ ಪಾಟೀಲ್, ವ್ಯವಸ್ಥಾಪಕ ನಿರ್ದೇಶಕ ಓಂಪ್ರಕಾಶ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಬುವಾಲಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಅವ್ಯವಹಾರ ಸಾಬೀತುಪಡಿಸಿದರೆ ರಾಜೀನಾಮೆ
ಬೀದರ್: 
ಕಬ್ಬು ಕಟಾವು ಗ್ಯಾಂಗ್ ತರುವಲ್ಲಿ ತಾವು ಅವ್ಯವಹಾರ ನಡೆಸಿರುವುದು ಸಾಬೀತುಪಡಿಸಿದರೆ ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಎಂ.ಜಿ. ಮುಳೆ ಸವಾಲು ಹಾಕಿದರು.
ನಿರ್ದೇಶಕ ಸಂಜಯ ಖೇಣಿ ಅವರು ಕಾರ್ಖಾನೆಯಲ್ಲಿ 3 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ. ಇದರಲ್ಲಿ ನಾನೂ ಸಹ ಶಾಮೀಲಾಗಿದ್ದೇನೆ ಎಂದು ಆರೋಪ ಮಾಡಿದ್ದಾರೆ.  ನಾನು ಎಷ್ಟು ಹಣ ತಿಂದಿದ್ದೇನೆ ಎನ್ನುವುದನ್ನು ಸಾಬೀತುಪಡಿಸಿದ್ದಲ್ಲಿ ಉಪಾಧ್ಯಕ್ಷ ಹಾಗೂ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಇಲ್ಲದಿದ್ದರೆ ಖೇಣಿ ಅವರು ನಿರ್ದೇಶಕ ಸ್ಥಾನ ತ್ಯಜಿಸಬೇಕು ಎಂದರು.
ಕಬ್ಬು ಕಟಾವು ಗ್ಯಾಂಗ್‌ಗಳನ್ನು ತಂದವರು ಮತ್ತು ಅವರಿಗೆ ಹಣ ನೀಡಿದವರು ಸಂಜಯ ಖೇಣಿ ಅವರೇ ಆಗಿದ್ದಾರೆ. ಹೀಗಾಗಿ ಅವ್ಯವಹಾರವಾಗಿದ್ದಲ್ಲಿ ಅವರೇ ಅದರಲ್ಲಿ ಭಾಗಿಯಾಗಿದ್ದಾರೆ ಎಂದು ಪ್ರತಿ ಆರೋಪ ಮಾಡಿದರು.
ನಿರ್ದೇಶಕರಾಗಿರುವುದು ಕಾರ್ಖಾನೆಯನ್ನು ನಡೆಸುವುದಕ್ಕಾಗಿಯೇ ಹೊರತು ಬಂದ್ ಮಾಡಿಸುವುದಕ್ಕಲ್ಲ ಎಂದರು. ಮುಂಗಡ ಪಡೆದು ಹಾಜರಾಗದ ಕಟಾವು ಗ್ಯಾಂಗ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.