ADVERTISEMENT

`ವಚನ ಮಹತ್ವ ಸಾರಿದ ಹಳಕಟ್ಟಿ'

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 5:02 IST
Last Updated 7 ಸೆಪ್ಟೆಂಬರ್ 2013, 5:02 IST

ಕಮಲನಗರ: 12ನೇ ಶತಮಾನದಲ್ಲಿ ಬಸವಣ್ಣ, ಅಕ್ಕಮಹಾದೇವಿ, ಚೆನ್ನಬಸವಣ್ಣ ಮೊದಲಾದ ಶರಣರು ಬರೆದ ವಚನಗಳ ಕಟ್ಟುಗಳು ಮನೆ ಮನೆಗಳಲ್ಲಿ ಧೂಳು ಹಿಡಿದು ಅವಸಾನದ ಅಂಚಿನಲ್ಲಿದ್ದ ಕಾಲಘಟ್ಟದಲ್ಲಿ ಅವುಗಳನ್ನು ಸಂರಕ್ಷಿಸಿ, ವಚನಗಳ ಮಹತ್ವವನ್ನು ನಾಡಿಗೆ ಪ್ರಚುರಪಡಿಸಿ, ವಚನ ಸಾಹಿತ್ಯಕ್ಕೆ ಮರುಜನ್ಮ ನೀಡಿದ ಕೀರ್ತಿ ಡಾ.ಫ.ಗು.ಹಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದು ವಿಜಾಪುರ ಫ.ಗು.ಹಳಕಟ್ಟಿ ವಚನ ಪಿತಾಮಹ ಕೇಂದ್ರದ ಸಂಯೋಜಕ ಡಾ.ಎಂ.ಎಸ್.ಮದಭಾವಿ ಹೇಳಿದರು.

ಇಲ್ಲಿನ ಡಾ.ಚನ್ನಬಸವ ಪಟ್ಟದ್ದೇವರ ಪ್ರೌಢ ಶಾಲೆಯಲ್ಲಿ ಶುಕ್ರವಾರ ಶ್ರಾವಣ ಮಾಸದ ವಚನ ಪ್ರವಚನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಡಾ.ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಅವರು ತಮ್ಮ ಜೀವಿತಾವಧಿಯ 10 ವರ್ಷಗಳ ಕಾಲ ವಚನಗಳ ಕಟ್ಟುಗಳ ಸಂಗ್ರಹ ಕಾರ್ಯ ನಡೆಸಿ, ಬದುಕಿನುದ್ದಕ್ಕೂ ವಚನಗಳ ತತ್ವ ಪಾಲಿಸಿದ ಶರಣ ಸದೃಶ ಬದುಕು ಅವರದ್ದಾಗಿತ್ತು ಎಂದರು.

ಸಾನಿಧ್ಯ ವಹಿಸಿದ್ದ ಭಾಲ್ಕಿ ಹಿರೇಮಠ ಸಂಸ್ಥಾನದ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಒಂದು ವಿಶ್ವವಿದ್ಯಾಲಯ ಮಾಡದ ಘನ ಕಾರ್ಯವನ್ನು ಡಾ.ಫ.ಗು.ಹಳಕಟ್ಟಿ ಅವರು ಮಾಡಿ ತೋರಿಸಿದ್ದಾರೆ ಎಂದರು.

ವಿಜಾಪುರದ ಸಾಹಿತಿ ಎಸ್.ಎಸ್. ಕನಮಡಿ ಮಾತನಾಡಿದರು. ಸಾಹಿತಿ ಸಿ.ಎಂ.ಹಿರೇಮಠ, ಎಸ್.ಬಿ. ಜಾಂತೆ, ಮುಖ್ಯಗುರು ಪ್ರಕಾಶ ಮಾನಕರಿ, ಬಾ.ನಾ.ಸೋಲ್ಲಾಪುರೆ,  ಚಂದ್ರಕಾಂತ ಸಂಗಮೆ, ರಾಜಕುಮಾರ ವಡ್ಡೆ, ಬಸವರಾಜ ಚಿಕಮುರ್ಗೆ, ಸೂರ್ಯಕಾಂತ ಮಿರ್ಚೆ, ಅಮೃತ್ ವಡಗಾವೆ ಇದ್ದರು.

ಸವಿತಾ ಹಿರೇಮಠ ಸ್ವಾಗತಿಸಿದರು. ಮಹಾನಂದಾ ಧರಣೆ ವಂದಿಸಿದರು. ಹಾವಗಿರಾವ್ ಮಠಪತಿ  ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.