ಬಸವಕಲ್ಯಾಣ: ಹುತಾತ್ಮ ಶರಣರಾದ ಹರಳಯ್ಯ ಮತ್ತು ಮಧುವಯ್ಯನವರ ಸ್ಮರಣೋತ್ಸವ ಅಂಗವಾಗಿ ಶನಿವಾರ ಇಲ್ಲಿ ಹಿಂದೆಂದೂ ಇಂಥದನ್ನು ಕಂಡಿಲ್ಲ ಎನ್ನುವಷ್ಟು ಅಭೂತಪೂರ್ವ, ಅದ್ದೂರಿ ಮತ್ತು ಅರ್ಥಪೂರ್ಣ ಮೆರವಣಿಗೆ ನಡೆಯಿತು. ಎಲ್ಲೆಲ್ಲೂ ಭಕ್ತಿಭಾವ, ಹಬ್ಬದ ವಾತಾವರಣ ಎದ್ದು ಕಂಡಿತು.
ಐತಿಹಾಸಿಕ ಕೋಟೆಯಿಂದ ಆರಂಭವಾದ ಮೆರವಣಿಗೆಯಲ್ಲಿ ಆನೆಯ ಮೇಲೆ ಹರಳಯ್ಯನವರ ಭಾವಚಿತ್ರ ಇಡಲಾಗಿತ್ತು. ಅದರ ಮುಂದೆ ಶರಣರ ವೇಷಧಾರಿಗಳು ಕುಳಿತ 11 ಒಂಟೆ, ಕುದುರೆಗಳ ಮತ್ತು ವಾಹನಗಳ ಸಾಲು. ಛತ್ರಿ ಚಾಮರಗಳಿರುವ ಅಲಂಕೃತವಾದ ಸಾರೋಟದಲ್ಲಿ ಬಸವಣ್ಣನವರ ಭಾವಚಿತ್ರ ಇಡಲಾಗಿತ್ತು. ಸಾವಿರಾರು ಮಹಿಳೆಯರು ತಲೆಮೇಲೆ ವಚನ ಸಾಹಿತ್ಯವನ್ನು ಹೊತ್ತುಕೊಂಡು ಸಾಲಾಗಿ ಮತ್ತು ಶಿಸ್ತಾಗಿ ಸಾಗಿದರು. ‘ಕಲ್ಯಾಣ ಕ್ರಾಂತಿಗೆ ಜಯವಾಗಲಿ’ ‘ವಿಶ್ವಗುರು ಬಸವಣ್ಣನವರಿಗೆ ಜಯವಾಗಲಿ’ ಎನ್ನುವ ಘೋಷಣೆಗಳನ್ನು ಮೆರವಣಿಗೆಯುದ್ದಕ್ಕೂ ಕೂಗಲಾಯಿತು. ಎಲ್ಲೆಲ್ಲೂ ವಚನ ಸಂಗೀತದ ಝೇಂಕಾರ ಕೇಳಿಸಿತು.
ಡೊಳ್ಳುಕುಣಿತ, ವೀರಗಾಸೆ ನೃತ್ಯ, ಏಕತಾರಿ ನೃತ್ಯ, ಭಜನೆ, ನಗಾರಿ ಮತ್ತು ಶಹನಾಯಿ ವಾದನ, ಪುರವಂತರ ಶಕ್ತಿ ಪ್ರದರ್ಶನ, ಲೇಜಿಮ ಕುಣಿತದಿಂದ ಮೆರವಣಿಗೆಗೆ ಹೆಚ್ಚಿನ ಮೆರುಗು ಪ್ರಾಪ್ತವಾಗಿತ್ತು. ರಸ್ತೆಯಲ್ಲಿ ಅಲ್ಲಲ್ಲಿ ಮಾಳಿಗೆಯ ಮೇಲಿನಿಂದ ವಚನಸಾಹಿತ್ಯದ ಗ್ರಂಥಗಳ ಮೇಲೆ ಹೂಮಳೆ ಸುರಿಸಲಾಯಿತು. ಕಾರ್ಯಕರ್ತರಲ್ಲಿ ಸಂಭ್ರಮ, ಉಲ್ಲಾಸ ತುಂಬಿ ತುಳಕುತ್ತಿತ್ತು. ಹರ್ಷಗೊಂಡ ಯುವಕರು ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರನ್ನು ಹೆಗಲಮೇಲೆ ಹೊತ್ತುಕೊಂಡು ಕುಣಿದರು. ಶಾಸಕರಾದ ಈಶ್ವರ ಖಂಡ್ರೆ, ಬಸವರಾಜ ಪಾಟೀಲ ಅಟ್ಟೂರ್ ಅವರು ಭಲ್ಲೆ ಭಲ್ಲೆ ಎನ್ನುತ್ತ ಕುಣಿದರು. ಇಲ್ಲಿನ ವಿವಿಧ ಶಾಲಾ ಕಾಲೇಜುಗಳ ಹಾಗೂ ಭಾಲ್ಕಿಯ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ನಾಗರಿಕರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಸುಮಾರು 3 ಕಿ.ಮೀ ದೂರದವರೆಗೆ ನಡೆದ ಮೆರವಣಿಗೆಯಲ್ಲಿ ಬಿಸಿಲಿನ ಶಾಖವನ್ನು ಲೆಕ್ಕಿಸದೆ ಅನೇಕ ಗಣ್ಯರು ಹಾಗೂ ಮಠಾಧೀಶರು ಪಾಲ್ಗೊಂಡಿದ್ದರು. ಚಿತ್ರದುರ್ಗ ಶಿವಮೂರ್ತಿ ಮುರುಘರಾಜೇಂದ್ರ ಶರಣರು, ಭಾಲ್ಕಿ ಬಸವಲಿಂಗ ಪಟ್ಟದ್ದೇವರು, ಭಾತಂಬ್ರಾ ಶಿವಯೋಗೇಶ್ವರ ಸ್ವಾಮಿ, ಅಖಿಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷ ಭೀಮಣ್ಣ ಖಂಡ್ರೆ, ಹಿರಿಯ ಮುಖಂಡ ಎನ್.ತಿಪ್ಪಣ್ಣ, ಬಸವಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಶಾಸಕರಾದ ಬಸವರಾಜ ಪಾಟೀಲ ಅಟ್ಟೂರ್, ಈಶ್ವರ ಖಂಡ್ರೆ, ಅಕ್ಕ ಅನ್ನಪೂರ್ಣ, ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಅನಿಲಕುಮಾರ ರಟಗೆ, ಜಿಪಂ ಸದಸ್ಯ ಸಂಜೀವ ಕಾಳೇಕರ್, ಪ್ರಮುಖರಾದ ದಿಲೀಪಕುಮಾರ ತಾಳಂಪಳ್ಳಿ, ವೈಜನಾಥ ಕಾಮಶೆಟ್ಟಿ, ಶಶಿಕಾಂತ ದುರ್ಗೆ, ದಯಾನಂದ ಖಳಾಳೆ, ಸುನಿಲ ಪಾಟೀಲ, ಶಾಂತಪ್ಪ ಪಾಟೀಲ, ಅರ್ಜುನ ಕನಕ, ರಾಜಶೇಖರ ಪಾಟೀಲ ಸಸ್ತಾಪುರ, ರಾಜೀವ ಮಂಠಾಳೆ, ಶಿವರಾಜ ಕನಶೆಟ್ಟಿ ಮುಂತಾದವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.