ADVERTISEMENT

ವಸತಿ ನಿಲಯಗಳಿಗೆ ಕಳಪೆ ಆಹಾರ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 10:40 IST
Last Updated 21 ಸೆಪ್ಟೆಂಬರ್ 2011, 10:40 IST

ಬೀದರ್: ಮೊರಾರ್ಜಿ ದೇಸಾಯಿ ಮತ್ತು ಅಲ್ಪಸಂಖ್ಯಾತರ ವಸತಿ ನಿಲಯಗಳಿಗೆ ಕಳಪೆ ಗುಣಮಟ್ಟದ ಆಹಾರ ಪೂರೈಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟ (ಭೀಮವಾದ) ಕಾರ್ಯಕರ್ತರು ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.ಸದ್ಯ ಆಹಾರ ಸರಬರಾಜು ಮಾಡುತ್ತಿರುವವರ ಗುತ್ತಿಗೆ ರದ್ದುಪಡಿಸಿ ಟೆಂಡರ್ ಮೂಲಕ ಹೊಸಬರಿಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ವಸತಿ ನಿಲಯ ವಿದ್ಯಾರ್ಥಿಗಳನ್ನು ಸರ್ಕಾರದಿಂದ ಸಿಗುವ ಸೌಲಭ್ಯಗಳಿಂದ ವಂಚಿತಗೊಳಿಸಲಾಗುತ್ತಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಜಿಲ್ಲೆಯ ಎಲ್ಲ ವಸತಿನಿಲಯಗಳಲ್ಲಿ ಬಯೋ ಮೆಟ್ರಿಕ್ ಹಾಜರಾತಿ ಯಂತ್ರ ಅಳವಡಿಸಬೇಕು. ಪೊಲೀಸ್ ಪಾಯಿಂಟ್ ಸ್ಥಾಪಿಸಿ ರಾತ್ರಿ ವೇಳೆ ಎರಡು ಬಾರಿ ಪೊಲೀಸ್ ಗಸ್ತು ನಿಗದಿಪಡಿಸಬೇಕು. 5 ವರ್ಷದಿಂದ ನಿರಂತರ ಸೇವೆ ಸಲ್ಲಿಸುತ್ತಿರುವ ಮೇಲ್ವಿಚಾರಕರನ್ನು ವರ್ಗ ಮಾಡಬೇಕು. ಮೊರಾರ್ಜಿ ದೇಸಾಯಿ ವಸತಿನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸದ್ಯ ಇರುವ ರೂ. 850 ವಿದ್ಯಾರ್ಥಿ ವೇತನವನ್ನು ರೂ. 1,200ಕ್ಕೆ ಹೆಚ್ಚಿಸಬೇಕು. ವಸತಿ ನಿಲಯಗಳಿಗೆ ಸ್ವಂತ ಕಟ್ಟಡ ನಿರ್ಮಿಸಬೇಕು.

ಹಾಳಾಗಿರುವ ವಸತಿ ನಿಲಯಗಳನ್ನು ದುರಸ್ತಿ ಮಾಡಬೇಕು ಎಂಬ ಬೇಡಿಕೆಗಳನ್ನು ಮಂಡಿಸಿದ್ದಾರೆ.
ಸಮಿತಿಯ ಜಿಲ್ಲಾ ಸಂಚಾಲಕ ಕಲ್ಯಾಣರಾವ ಭೋಸ್ಲೆ, ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕ ಅಶೋಕ ಸಂಗಮ, ತಾಲ್ಲೂಕು ಸಂಚಾಲಕರಾದ ಮಡಿವಾಳೇಶ್ವರ ಸಿಂಧೆ, ಲಾಲಪ್ಪ ಅಲ್ಲಾಪುರೆ, ಗೌತಮ್, ಪ್ರಮುಖರಾದ ಸುಭಾಷ ತರನಳ್ಳಿ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.