ADVERTISEMENT

ವಸತಿ ನಿಲಯ ವಿದ್ಯಾರ್ಥಿಗಳಿಂದ ಧರಣಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2017, 6:42 IST
Last Updated 22 ನವೆಂಬರ್ 2017, 6:42 IST

ಬೀದರ್: ನೌಬಾದ್‌ನ ಸರ್ಕಾರಿ ಪ್ರಥಮ ದರ್ಜೆ ವಸತಿ ನಿಲಯದ ಹೊಸ ಕಟ್ಟಡದಲ್ಲಿ ಮೂಲಸೌಕರ್ಯ ಒದಗಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ವಸತಿ ನಿಲಯದ ಆವರಣದಲ್ಲಿ ಮಂಗಳವಾರ ಧರಣಿ ನಡೆಸಿದರು.

ವಸತಿ ನಿಲಯದಲ್ಲಿ ವಾಸವಾಗಿರುವ ವಿದ್ಯಾರ್ಥಿಗಳ ಪೈಕಿ ಸುಮಾರು 100 ವಿದ್ಯಾರ್ಥಿಗಳು ತರಗತಿಗೆ ಗೈರು ಹಾಜರಾಗಿ ಧರಣಿ ನಡೆಸುವ ಮೂಲಕ ಆಡಳಿತಕ್ಕೆ ಚುರುಕು ಮುಟ್ಟಿದರು.

ವಸತಿ ನಿಲಯದಲ್ಲಿ ಅಗತ್ಯ ಸೌಕರ್ಯಗಳು ಇಲ್ಲದ ಕಾರಣ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸಬೇಕಾಗಿದೆ. ಹಲವು ಬಾರಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಹಾಗೂ ತಾಲ್ಲೂಕು ಅಧಿಕಾರಿ ಗಮನ ಸೆಳೆದರೂ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ದೂರಿದರು.

ADVERTISEMENT

ಸ್ನಾತಕೋತ್ತರ ಪದವಿ, ಬಿ.ಇಡಿ ಹಾಗೂ ತಾಂತ್ರಿಕ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ 180 ವಿದ್ಯಾರ್ಥಿಗಳು ವಸತಿ ನಿಲಯದಲ್ಲಿ ವಾಸವಾಗಿದ್ದಾರೆ. ಆದರೆ ನಿಲಯದಲ್ಲಿ ವಿವಿಧ ಸೌಕರ್ಯಗಳಿಗಾಗಿ ಪರದಾಡುವಂತಹ ಸ್ಥಿತಿ ಇದೆ ಎಂದು ಆಪಾದಿಸಿದರು.

ಊಟದ ವ್ಯವಸ್ಥೆ ಸರಿಯಾಗಿಲ್ಲ. ಶೌಚಾಲಯ, ವಸತಿ ನಿಲಯ ಆವರಣದ ಸುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸದೇ ಇರುವುದರಿಂದ ದುರ್ವಾಸನೆ ಹರಡುತ್ತಿದೆ. ಸೊಳ್ಳೆಗಳ ಕಾಟ ವಿಪರೀತವಾಗಿದೆ ಎಂದು ಆರೋಪಿಸಿದರು.

ಅಗತ್ಯ ಇರುವ ಸ್ಥಳಗಳಲ್ಲಿ ಸೀಲಿಂಗ್ ಫ್ಯಾನ್, ವಿದ್ಯುತ್‌ ದೀಪಗಳನ್ನು ಅಳವಡಿಸಿಲ್ಲ. ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ಪೂರಕವಾದ ಪುಸ್ತಕಗಳು ಇಲ್ಲ. ದಿನಪತ್ರಿಗಳು, ಮ್ಯಾಗ್‌ಜಿನ್‌ ತರಿಸುತ್ತಿಲ್ಲ ಎಂದು ಆಪಾದಿಸಿದರು.

ಜನರೇಟರ್ ಅಳವಡಿಸಿ ಎರಡು ವರ್ಷವಾದರೂ ಪ್ರಯೋಜನ ಆಗುತ್ತಿಲ್ಲ. ಐದು ತಿಂಗಳ ಹಿಂದೆ ಕಂಪ್ಯೂಟರ್‌ಗಳನ್ನು ಅಳವಡಿಸಲಾಗಿದೆ. ಆದರೆ, ವಿದ್ಯಾರ್ಥಿಗಳ ಬಳಕೆಗೆ ಮುಕ್ತಗೊಳಿಸಿಲ್ಲ ಎಂದು ಅಳಲು ತೋಡಿಕೊಂಡರು.

ಆಟದ ಮೈದಾನವನ್ನು ಸ್ವಚ್ಛವಾಗಿ ಇಡುತ್ತಿಲ್ಲ. ಆಟವಾಡಲು ಯಾವುದೇ ಸಾಮಗ್ರಿಗಳೂ ಇಲ್ಲ. ವಿದ್ಯಾರ್ಥಿಗಳ ಮನರಂಜನೆಗೆ ಅವಕಾಶ ಇಲ್ಲದಾಗಿದೆ ಎಂದು ತಿಳಿಸಿದರು. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪ್ರೇಮಸಾಗರ ದಾಂಡೇಕರ್ ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು.

ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದ ಅವರು, ಶೀಘ್ರ ವಸತಿ ನಿಲಯಕ್ಕೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ವಿದ್ಯಾರ್ಥಿಗಳು ಧರಣಿ ವಾಪಸ್ ಪಡೆದರು.

ವಿದ್ಯಾರ್ಥಿಗಳಾದ ಮುಕೇಶ, ಸಚಿನ್, ಕಾಂತಪ್ಪ, ಬಂಡೆಪ್ಪ, ಆತೀಶ್, ಸಿದ್ದಪ್ಪ, ಶಾಲಿವಾನ್, ರಜನಿಕಾಂತ ಶಾಸ್ತ್ರಿ, ಲಕ್ಷ್ಮಣ, ಪ್ರೇಮದಾಸ, ಶಿವರಾಜ, ಮಾಣಿಕರಾಯ, ಸಂಗಮೇಶ ಕೆ, ಜೈರಾಮ, ಯೋಹನ್, ಸುಧಾಕರ, ಪ್ರವೀಣ ಧರಣಿಯಲ್ಲಿ ಪಾಲ್ಗೊಂಡಿದ್ದರು.

* * 

ಮೂಲಸೌಕರ್ಯಕ್ಕಾಗಿ ಅನಿವಾರ್ಯವಾಗಿ ಧರಣಿ ನಡೆಸಿದ್ದು, ಅಧಿಕಾರಿಗಳು ಆದಷ್ಟು ಬೇಗ ವಸತಿ ನಿಲಯಕ್ಕೆ ಅಗತ್ಯ ಸೌಕರ್ಯ ಒದಗಿಸುವ ಭರವಸೆ ನೀಡಿದ್ದಾರೆ.
ಮುಕೇಶ
ವಸತಿ ನಿಲಯ ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.