ADVERTISEMENT

ವಿದ್ಯಾರ್ಥಿಗಳಿಂದ ಸೋಲಾರ್ ಬೈಸಿಕಲ್

ಔರಾದ್ ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ವಿನೂತನ ಕಾರ್ಯಕ್ಕೆ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2018, 11:36 IST
Last Updated 3 ಜೂನ್ 2018, 11:36 IST
ಔರಾದ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳು ತಯಾರಿಸಿದ ಸೌರಶಕ್ತಿ ಚಾಲಿತ ಬೈಸಿಕಲ್ ಉಪನ್ಯಾಸಕರು ಮತ್ತು ಸಾರ್ವಜನಿಕರು ಕುತೂಹಲದಿಂದ ನೋಡುತ್ತಿರುವುದು
ಔರಾದ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳು ತಯಾರಿಸಿದ ಸೌರಶಕ್ತಿ ಚಾಲಿತ ಬೈಸಿಕಲ್ ಉಪನ್ಯಾಸಕರು ಮತ್ತು ಸಾರ್ವಜನಿಕರು ಕುತೂಹಲದಿಂದ ನೋಡುತ್ತಿರುವುದು   

ಔರಾದ್: ಇಲ್ಲಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳು ಸೌರಶಕ್ತಿ (ಸೋಲಾರ್) ಚಾಲಿತ ಬೈಸಿಕಲ್ ತಯಾರಿಸಿದ್ದಾರೆ. ಎಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಷನ್ ವಿಭಾಗದ ವಿದ್ಯಾರ್ಥಿಗಳು ಈ ಸೌರಶಕ್ತಿ ಚಾಲಿತ ಬೈಸಿಕಲ್ ತಯಾರಿಸುವಲ್ಲಿ ಯಶಸ್ವಿಯಾಗಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮನೆಯಲ್ಲಿರುವ ಹಳೆ ಬೈಸಿಕಲ್ ತಂದು ಅದಕ್ಕೆ ಸೌರಶಕ್ತಿ ಫಲಕ ಮತ್ತು ಬ್ಯಾಟರಿ ಅಳವಡಿಸಲಾಗಿದೆ. ಸೌರಶಕ್ತಿ ಫಲಕಗಳು ಸೂರ್ಯನ ಕಿರಣಗಳು ಹೀರಿಕೊಂಡು ಕಂಟ್ರೋಲ್ ಪ್ಯಾನಲ್‌ಗೆ ಶಾಖ ವರ್ಗಾಯಿಸುತ್ತದೆ. ಕಂಟ್ರೋಲ್‌ ಪ್ಯಾನಲ್‌ನಿಂದ ಮೋಟಾರ್‌ಗೆ ಹೋಗಿ ಅದು ಚಕ್ರ ತಿರುಗಲು ಸಹಾಯ ಮಾಡುತ್ತದೆ.

24 ವೋಲ್ಟ್ ಡಿಸಿ ಬ್ಯಾಟರಿ ಇದ್ದು, ಅದನ್ನು ಸೂರ್ಯನ ಕಿರಣದಿಂದ ಚಾರ್ಜ್ ಮಾಡಿಕೊಳ್ಳಬಹುದು. ಬ್ಯಾಟರಿಯನ್ನು ಸುಲಭವಾಗಿ ತೆಗೆಯಬಹುದಾಗಿದೆ. ಒಂದು ವೇಳೆ ಬ್ಯಾಟರಿ ಖಾಲಿಯಾದರೆ ಪೆಡಲ್ ಮೂಲಕವೂ ಬೈಸಿಕಲ್ ಚಲಿಸಬಹುದು. ಒಂದು ಸಲ ಈ ಬ್ಯಾಟರಿ ಚಾರ್ಜ್ ಆದರೆ 22 ಕಿ.ಮೀ. ದೂರ ಹೋಗಬಹುದು’ ಎಂದು ಬೈಸಿಕಲ್ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ ವಿದ್ಯಾರ್ಥಿ ತೌಫಿಕ್ ವಿವರಿಸಿದರು.

ADVERTISEMENT

‘ನಮ್ಮ ಕಾಲೇಜು ವಿದ್ಯಾರ್ಥಿಗಳು ತಯಾರಿಸಿದ ಸೌರಶಕ್ತಿ ಬೈಸಿಕಲ್ ಕಳೆದ ತಿಂಗಳು ಸೋಲಾಪುರನಲ್ಲಿ ನಡೆದ ರಾಷ್ಟ್ರಮಟ್ಟದ ಸೆಮಿನಾರ್‌ನಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ’ ಕಾಲೇಜು ಎನ್‌ಎಸ್ಎಸ್ ಅಧಿಕಾರಿ ಅರುಣ ಮೊಕಾಶಿ ತಿಳಿಸಿದರು.

‘ಹೆಚ್ಚುತ್ತಿರುವ ಇಂಧನ ಬೆಲೆಗೆ ಪರ್ಯಾಯವಾಗಿ ಸೌರಶಕ್ತಿ ಚಾಲಿತ ವಾಹನಗಳು ಅನಿವಾರ್ಯವಾಗಿವೆ. ಸೋಲಾರ್ ಕಾರು, ಸ್ಕೂಟರ್ ಕೊಳ್ಳಲು ದುಬಾರಿ ಎನಿಸಿದವರಿಗೆ ಸೋಲಾರ ಸೈಕಲ್ ಸವಾರಿ ಅತ್ಯಂತ ಉಪಯುಕ್ತ. ಈ ಹಿನ್ನೆಲೆಯಲ್ಲಿ ನಮ್ಮ ವಿದ್ಯಾರ್ಥಿಗಳು ತಯಾರಿಸಿದ ಸೌರಶಕ್ತಿ ಚಾಲಿತ ಸೈಕಲ್ ಇನ್ನಷ್ಟು ಸರಳೀಕರಣಗೊಂಡು ಮಾರುಕಟ್ಟೆಗೆ ಬಂದರೆ ಸಾಮಾನ್ಯ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ’ ಎಂದು ಅವರು ತಿಳಿಸಿದರು.

‘ನಮ್ಮ ಕಾಲೇಜಿಗೆ ಬರುವ ವಿದ್ಯಾರ್ಥಿಗಳಲ್ಲಿ ಬಹುತೇಕರು ಬಡ ಮತ್ತು ಮಧ್ಯಮ ವರ್ಗದವರು. ಅವರಿಗೆ ಓದಿನ ಜತೆಗೆ ಕೌಶಲ ಅವಶ್ಯ. ಈ ನಿಟ್ಟಿನಲ್ಲಿ ಅವರಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ಮನೋಭಾವ ಮೂಡಿಸಲು ವೈವಿಧ್ಯಮಯ ಚಟುವಟಿಕೆ ಹಮ್ಮಿಕೊಳ್ಳಲಾಗುತ್ತದೆ. ಸ್ವತಃ ವಿದ್ಯಾರ್ಥಿಗಳೇ ಇಡೀ ಕಾಲೇಜಿಗೆ ಬೇಕಾಗುವಷ್ಟು ಸೌರಶಕ್ತಿ ವಿದ್ಯುತ್ ಉತ್ಪಾದಿಸಿ ಕೊಡುತ್ತಿದ್ದಾರೆ. ವಿವಿಧ ಕಂಪನಿಗಳ ಕ್ಯಾಂಪಸ್‌ ಸಂದರ್ಶನದಲ್ಲಿ ಪ್ರತಿ ವರ್ಷ ನಮ್ಮ ಕಾಲೇಜಿನ ನಾಲ್ಕೈದು ವಿದ್ಯಾರ್ಥಿಗಳು ಆಯ್ಕೆಯಾಗುತ್ತಾರೆ’ ಎಂದು ಪ್ರಾಂಶುಪಾಲ ಬಸವರಾಜ ಚಿಕ್ಲೆ  ತಿಳಿಸಿದರು.

**
ಜನರಿಗೆ ಸುಲಭ ದರದಲ್ಲಿ ಬೈಸಿಕಲ್ ಸಿಗಲಿ ಎಂಬ ಉದ್ದೇಶದಿಂದ ನಮ್ಮ ಕಾಲೇಜು ವಿದ್ಯಾರ್ಥಿಗಳು ಸೋಲಾರ್ ಬೈಸಿಕಲ್ ತಯಾರಿಸಿದ್ದಾರೆ. ಶೀಘ್ರ ಮಾರುಕಟ್ಟೆಗೂ ಬರಲಿದೆ
ಸಚಿನ್ ಜಿರೋಬೆ, ಉಪನ್ಯಾಸಕ 

–ಮನ್ಮಥಪ್ಪ ಸ್ವಾಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.