ADVERTISEMENT

ವೈದ್ಯರಿಗೆ ಬಿಸಿ ಮುಟ್ಟಿಸಿದ ಜಿಲ್ಲಾಧಿಕಾರಿ

ಜಿಲ್ಲಾ ಆಸ್ಪತ್ರೆ ಅವ್ಯವಸ್ಥೆಗೆ ಬೇಸರ, ಕಡತ ಪರಿಶೀಲನೆ, ರೋಗಿಗಳಿಂದ ಮಾಹಿತಿ ಸಂಗ್ರಹಣೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2018, 11:38 IST
Last Updated 3 ಜೂನ್ 2018, 11:38 IST

ಬೀದರ್‌: ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾದ ಚಿಕಿತ್ಸೆ ದೊರೆಯದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಆಡಳಿತವು ಆಸ್ಪತ್ರೆಯ ಪ್ರತಿಯೊಂದು ವಿಭಾಗದ ಮೇಲೆ ನಿಗಾ ಇಟ್ಟು, ಆಸ್ಪತ್ರೆಗೆ ಶಸ್ತ್ರಚಿಕಿತ್ಸೆ ಮಾಡಲು ಮುಂದಾಗಿದೆ.

ಈಗಾಗಲೇ ಎರಡು–ಮೂರು ಬಾರಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿರುವ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ ಅವರು ಆಸ್ಪತ್ರೆಯಲ್ಲಿ ತೆರೆಮರೆಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಸುಳಿವು ದೊರೆತ ನಂತರ ಪ್ರತಿಯೊಂದು ವಿಭಾಗಕ್ಕೂ ಭೇಟಿ ಕೊಡುತ್ತಿದ್ದಾರೆ. ಜಿಲ್ಲಾಧಿಕಾರಿಯ ಅನಿರೀಕ್ಷಿತ ಭೇಟಿಯಿಂದ ವೈದ್ಯರಿಗೆ ಬಿಸಿ ಮುಟ್ಟಿದೆ.

ಎಕ್ಸ್‌ರೆ ಮತ್ತು ಅಲ್ಟ್ರಾಸೌಂಡ್‌ ವಿಭಾಗದ ಟೆಕ್ನಿಷಿಯನ್‌ ಹಾಗೂ ಕೆಲ ವೈದ್ಯರು ಖಾಸಗಿ ಆಸ್ಪತ್ರೆಗಳೊಂದಿಗೆ ಕೈಜೋಡಿಸಿರುವ ದೂರುಗಳು ಬಂದ ಕಾರಣ ಶನಿವಾರ ಆಸ್ಪತ್ರೆಗೆ ಭೇಟಿ ಕೊಟ್ಟು ಮಾಹಿತಿ ಪಡೆದರು. ಅಲ್ಲಿಯ ಸಿಬ್ಬಂದಿಗೆ ಎಚ್ಚರಿಕೆಯನ್ನೂ ನೀಡಿದರು.

ADVERTISEMENT

ಐಸಿಇಒದಲ್ಲಿ ಮಾನಿಟರ್‌ಗಳು ಇರಲಿಲ್ಲ. ಅಗತ್ಯವಿಲ್ಲದಿದ್ದರೂ ಕೆಲ ರೋಗಿಗಳನ್ನು ಐಸಿಒದಲ್ಲಿ ದಾಖಲು ಮಾಡಿರುವುದನ್ನು ಕಂಡು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಎಲುಬು, ಕೀಲುಗಳ ವಿಭಾಗದ ವೈದ್ಯರು ಸರಿಯಾಗಿ ಕಾರ್ಯನಿರ್ವಹಿಸದಿರುವ ಬಗ್ಗೆ ರೋಗಿಗಳು ಜಿಲ್ಲಾಧಿಕಾರಿಗೆ ದೂರಿದರು.

‘ಜಿಲ್ಲಾ ಆಸ್ಪತ್ರೆಯಲ್ಲಿ ಹಲವು ಸಮಸ್ಯೆಗಳಿವೆ. ಪ್ರತಿಯೊಂದು ವಿಭಾಗಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದೇನೆ. ವಾರದಲ್ಲಿ ಒಮ್ಮೆ  ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸುವೆ. ಜಡ್ಡುಗಟ್ಟಿರುವ ವ್ಯವಸ್ಥೆ ಸರಿಪಡಿಸಲು ಕನಿಷ್ಠ ಎರಡು–ಮೂರು ತಿಂಗಳಾದರೂ ಬೇಕು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

‘ಆಸ್ಪತ್ರೆಯಲ್ಲಿನ ಏಸಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಐಸಿಒಗಳಲ್ಲಿ ಕೆಲ ಕಡೆ ಮೊನಿಟರ್‌ಗಳು ಇಲ್ಲ. ಯಾವ ಕಾಯಿಲೆಗೆ ಐಸಿಒದಲ್ಲಿ ಚಿಕಿತ್ಸೆ ಕೊಡಿಸಬೇಕು ಎನ್ನುವ ಕನಿಷ್ಠ ತಿಳಿವಳಿಕೆಯೂ ಸಿಬ್ಬಂದಿಗೆ ಇಲ್ಲ. ರೋಗಿಯ ಜತೆಗೆ ಬರುವ ಸಹಾಯಕರಿಗೆ ಉಳಿದುಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲ. ಅವರಿಗೆ ಶೌಚಾಲಯದ ವ್ಯವಸ್ಥೆಯೂ ಇಲ್ಲ’ ಎಂದು ಹೇಳಿದರು.

‘ಎಕ್ಸ್‌ರೆ  ವಿಭಾಗದಲ್ಲಿರುವ ಐದು ಪೈಕಿ ಎರಡು ಯಂತ್ರಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಇಸಿಜಿ, ಅಲ್ಟ್ರಾಸೌಂಡ್‌ ಮಷಿನ್‌ ಸರಿ ಇಲ್ಲ. ವೋಲ್ಟೇಜ್‌ ಸಮಸ್ಯೆ ಇದೆ. ಯಂತ್ರಗಳನ್ನು ದುರಸ್ತಿ ಮಾಡಿಸುವಂತೆ ಜಿಲ್ಲಾ ಸರ್ಜನ್‌ ಹಾಗೂ ವೈದ್ಯಕೀಯ ನಿರ್ದೇಶಕರಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು. ಜಿಲ್ಲಾ ಸರ್ಜನ್‌ ಡಾ.ಸಿ.ಎಸ್‌.ರಗಟೆ ಇದ್ದರು.

7ರಂದು ಸಭೆ: ‘ಜಿಲ್ಲಾ ಆಸ್ಪತ್ರೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ ಜೂನ್‌ 7ರ ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಕರೆಯಲಾಗಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

‘ಜಿಲ್ಲಾ ಸರ್ಜನ್‌ ಆರೋಗ್ಯ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ಆರೋಗ್ಯ ಇಲಾಖೆಯ ಮಟ್ಟದಲ್ಲಿ ಕೆಲವು ಕೆಲಸಗಳು ಆಗಬೇಕಿದೆ. ಕೆಲಸ ಮಾಡದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕಿದೆ. ಕೆಲವರು ವೈದ್ಯರು ನೈತಿಕತೆ ಕಡೆಗಣಿಸಿರುವುದು ವಿಷಾದನೀಯ’ ಎಂದರು.

7 ರಂದು ಆರೋಗ್ಯ ಸಮಿತಿ ಸಭೆ

ಬೀದರ್: ‘ಜಿಲ್ಲಾ ಆಸ್ಪತ್ರೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ ಜೂನ್‌ 7ರ ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಕರೆಯಲಾಗಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು. ‘ಜಿಲ್ಲಾ ಸರ್ಜನ್‌ ಆರೋಗ್ಯ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ಆರೋಗ್ಯ ಇಲಾಖೆಯ ಮಟ್ಟದಲ್ಲಿ ಕೆಲವು ಕೆಲಸಗಳು ಆಗಬೇಕಿದೆ. ಕೆಲಸ ಮಾಡದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕಿದೆ. ಕೆಲವರು ವೈದ್ಯರು ನೈತಿಕತೆ ಕಡೆಗಣಿಸಿರುವುದು ವಿಷಾದನೀಯ’ ಎಂದು ಹೇಳಿದರು.

ನಾಮಫಲಕ ಅಳವಡಿಕೆಗೆ ಸೂಚನೆ

ಬೀದರ್: ‘ಒಂದು ವಿಭಾಗದ ವೈದ್ಯರು ರೋಗಿಯ ತಪಾಸಣೆ ನಡೆಸಿ ಬೇರೆ ವಿಭಾಗದ ವೈದ್ಯರ ಬಳಿ ಚಿಕಿತ್ಸೆ ಪಡೆಯುವಂತೆ ಸೂಚಿಸಿದ ಮೇಲೆ ರೋಗಿಗಳು ವೈದ್ಯರನ್ನು ಹುಡುಕುವಂತಹ ಸ್ಥಿತಿ ಇದೆ. ಆಸ್ಪತ್ರೆಯಲ್ಲಿನ ಪ್ರತಿ ವಿಭಾಗಕ್ಕೂ ನಾಮಫಲಕ ಅಳವಡಿಸಬೇಕು’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

‘ಕೆಲಸದಲ್ಲಿ ನಿರ್ಲಕ್ಷ್ಯ ತೋರಿದ ಕೆಲವರನ್ನು ಅಮಾನತು ಮಾಡಲಾಗಿದೆ. ವೈದ್ಯರು ಹಾಗೂ ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮಕ್ಕಾಗಿ ಆರೋಗ್ಯ ಇಲಾಖೆಗೆ ವರದಿ ಕಳಿಸಲಾಗುವುದು’ ಎಂದು ತಿಳಿಸಿದರು. ‘ಎಲುಬು, ಕೀಲುಗಳ ವಿಭಾಗದಲ್ಲಿ ವಾರದಲ್ಲಿ 4ರಿಂದ 6 ಜನರಿಗೆ ಮಾತ್ರ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಇಲ್ಲಿ ಸರಿಯಾಗಿ ಚಿಕಿತ್ಸೆ ದೊರೆಯದ ಕಾರಣ ರೋಗಿಗಳು ಬೇರೆ ಕಡೆಗೆ ಹೋಗುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ’ ಎಂದು ಹೇಳಿದರು.

**
ಜಿಲ್ಲಾ ಆಸ್ಪತ್ರೆಯ ಹೊರ ಗುತ್ತಿಗೆ ಸಿಬ್ಬಂದಿಗೆ ಆಸ್ಪತ್ರೆಯಿಂದ ಸಮಯಕ್ಕೆ ಸರಿಯಾಗಿ ವೇತನ ಪಾವತಿಯಾಗುತ್ತಿಲ್ಲ ಎನ್ನುವ ದೂರುಗಳು ಬಂದಿವೆ
ಅನಿರುದ್ಧ ಶ್ರವಣ, ಜಿಲ್ಲಾಧಿಕಾರಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.