ADVERTISEMENT

`ವ್ಯಕ್ತಿ, ಪಕ್ಷ ವರ್ಚಸ್ಸಿನ ನಡುವೆ ಕಳೆದುಹೋಗುವ ಸಮಸ್ಯೆ'

ಉ.ಮ.ಮಹೇಶ್
Published 6 ಏಪ್ರಿಲ್ 2013, 6:40 IST
Last Updated 6 ಏಪ್ರಿಲ್ 2013, 6:40 IST

ಬೀದರ್: ರಾಷ್ಟ್ರೀಯ ಹೆದ್ದಾರಿ 9 ಹಾದು ಹೋಗುವ ಕಾರಣ ವಾಣಿಜ್ಯ ಚಟುವಟಿಕೆಗಳು ನಿರೀಕ್ಷೆಗೂ ಮೀರಿ ಗರಿಗೆದರಬಹುದಾಗಿದ್ದ ಪ್ರದೇಶ ಅದು. ಇದೇ ಹೆದ್ದಾರಿ ಸಂಪರ್ಕ ಕಲ್ಪಿಸುವ ನೆರೆ ರಾಜ್ಯದ ಜಹೀರಾಬಾದ್‌ನಲ್ಲಿ ಆಗಿರುವಷ್ಟು ಕೈಗಾರಿಕಾ ಪ್ರಗತಿ ಕಂಡಿಲ್ಲ ಎಂಬುದು ಇಲ್ಲಿ ಕೇಳಿಬರುವ ಮಾತು. ಇದು, ಹುಮನಾಬಾದ್ ಕ್ಷೇತ್ರ.

ಹುಮನಾಬಾದ್ ಮತ್ತು ಚಿಟಗುಪ್ಪಾ ಪುರಸಭೆ ವ್ಯಾಪ್ತಿ, ಹುಮನಾಬಾದ್ ತಾಲ್ಲೂಕಿನ ದುಬಲಗುಂಡಿ, ಚಿಟಗುಪ್ಪಾ, ಹುಮನಾಬಾದ್ ಮತ್ತು ಹಳ್ಳಿಖೇಡ್(ಬಿ) ವೃತ್ತಗಳು ಮತ್ತು ಬಸವಕಲ್ಯಾಣ ತಾಲ್ಲೂಕಿನ ರಾಜೇಶ್ವರ ವೃತ್ತದ ವ್ಯಾಪ್ತಿಯಲ್ಲಿನ ಗ್ರಾಮಗಳು ಈ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ.

1952ರಲ್ಲಿ ಹೈದರಾಬಾದ್ ರಾಜ್ಯದ ವ್ಯಾಪ್ತಿಯಲ್ಲಿದ್ದ ಈ ಕ್ಷೇತ್ರ ದ್ವಿಸದಸ್ಯತ್ವವನ್ನು ಹೊಂದಿದ್ದು, ಕಾಂಗ್ರೆಸ್‌ನ ಶ್ರೀನಿವಾಸರಾವ್ ಎಖ್ಖೆಳ್ಳಿಕರ್ ಮತ್ತು ಶಂಕರದೇವ್ ಆಯ್ಕೆಯಾಗಿದ್ದರು. ಇದುವರೆಗೂ 13 ಬಾರಿ ಕ್ಷೇತ್ರ ಚುನಾವಣೆಯನ್ನು ಕಂಡಿದ್ದು, ನಾಲ್ಕು ಅವಧಿಯನ್ನು ಹೊರತುಪಡಿಸಿ ಉಳಿದಂತೆ ಕಾಂಗ್ರೆಸ್ ಪ್ರತಿನಿಧಿಸಿದೆ.

1957ರಲ್ಲಿ ರಾಜ್ಯ ವಿಧಾನಸಭೆಗೆ ಸದಸ್ಯರ ಆಯ್ಕೆಗೆ ನಡೆದ ಮೊದಲ ಚುನಾವಣೆಯಲ್ಲಿ ಮತದಾರರ ಸಂಖ್ಯೆ 40,504. ಆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮುರಳೀಧರರಾವ್ ಆಯ್ಕೆಯಾಗಿದ್ದರು. ಪ್ರಸ್ತುತ ಕ್ಷೇತ್ರದ ಮತದಾರರ ಸಂಖ್ಯೆ ಜನವರಿ 16, 2013ರಲ್ಲಿ ಇದ್ದಂತೆ 2,02,220. ಮಹಿಳಾ ಮತದಾರರು 96,259. ಜಿಲ್ಲೆಯಲ್ಲಿ ಅತ್ಯಧಿಕ ಮತದಾರರು ಇರುವ ಕ್ಷೇತ್ರವೂ ಹೌದು. ಮುಸಲ್ಮಾನರು ಗಣನೀಯ ಸಂಖ್ಯೆಯಲ್ಲಿ ಇದ್ದಾರೆ.

ಜಿಲ್ಲೆಯ ಇತರೆ ತಾಲ್ಲೂಕು, ಕ್ಷೇತ್ರಗಳ ವ್ಯಾಪ್ತಿಯಲ್ಲಿ ಇರುವಂತೆ ಇಲ್ಲೂ ಕುಡಿವ ನೀರು ಸಮಸ್ಯೆ ಮತ್ತು ರಸ್ತೆಗಳ ದುಃಸ್ಥಿತಿಯ ಸಮಸ್ಯೆ ಸಹಜವಾಗಿದೆ. ಮನ್ನಾಏಖ್ಖೆಳ್ಳಿ ತಾಲ್ಲೂಕು ಕೇಂದ್ರ ಆಗಬೇಕು, ಉದ್ಯೋಗ ಸೃಷ್ಟಿಗೆ ಪೂರಕವಾಗಿ ಉದ್ಯಮಗಳ ಸ್ಥಾಪನೆ ಆಗಬೇಕು ಎಂಬ ಬೇಡಿಕೆಗಳಿವೆ. ಇಂಥ ಸ್ಥಿತಿಯ ನಡುವೆ ಬಂದಿರುವ ಚುನಾವಣೆ ಈಗ ಕುಟುಂಬದ ಸಾರಥ್ಯವೇ ಮುಂದುವರಿಯಲಿದೆಯೇ ಎಂಬ ಕಾರಣದಿಂದ ಕುತೂಹಲ ಮೂಡಿಸಿದೆ.

ಚುನಾವಣಾ ಹಿನ್ನೋಟ
ಕ್ಷೇತ್ರದಿಂದ 1962ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಗೋಪಾಲರಾವ್ ಮುಡಬಿ ಆಯ್ಕೆಯಾಗಿದ್ದರೆ; 1967 ಮತ್ತು 1972ರಲ್ಲಿ ಸಿಪಿಐ ಪಕ್ಷದ ಅಭ್ಯರ್ಥಿಯಾಗಿ ವಿ.ಎನ್.ಪಾಟೀಲ ಗೆದ್ದಿದ್ದರು. ನಂತರದ 1978ರಲ್ಲಿ ನಡೆದ ಚುನಾವಣೆಯಲ್ಲಿ ಬಸವರಾಜ ಪಾಟೀಲ್ ಅವರು ಜನತಾ ಪಕ್ಷದ ಅಭ್ಯರ್ಥಿಯಾಗಿ ಜಯಗಳಿಸಿ ಗೆಲುವಿನ ಓಟ ಮುಂದುವರಿಸಿದರು. ನಂತರ ಪಕ್ಷ ಬದಲಿಸಿ ಕಾಂಗ್ರೆಸ್ ಸೇರ್ಪಡೆಯಾದ ಅವರು ಇದೇ ಪಕ್ಷದಿಂದ 1983, 1985, 1989ರಲ್ಲಿ ಚುನಾಯಿತರಾಗಿದ್ದರು.

ಈ ಗೆಲುವಿನ ಓಟಕ್ಕೆ 1994ರಲ್ಲಿ ತಡೆ ಬಿದ್ದಿತ್ತು. ಆ ಚುನಾವಣೆಯಲ್ಲಿ ಜನತಾದಳ ಅಭ್ಯರ್ಥಿಯಾಗಿದ್ದ ಮೇರಾಜುದ್ದೀನ್ ಪಟೇಲ್ ಜಯಗಳಿಸಿದರು. ಬಳಿಕ 1999ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ತಂದೆ ಸ್ಥಾನದಲ್ಲಿ ಮಗ ರಾಜಶೇಖರ್ ಪಾಟೀಲ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದರು. ಆಗ ಕಾಂಗ್ರೆಸ್, ಜೆಡಿಎಸ್ ಎರಡೂ ಪಕ್ಷವನ್ನು ಹಿಂದಿಕ್ಕಿ ಗೆಲುವು ಸಾಧಿಸಿದ್ದು ಬಿಜೆಪಿ ಅಭ್ಯರ್ಥಿಯಾಗಿದ್ದ ಸುಭಾಷ್ ಕಲ್ಲೂರು ಅವರು.

ಲಾಭದಾಯಕ ಹುದ್ದೆ ಕುರಿತ ವಿವಾದ ಕೋರ್ಟ್ ಮೆಟ್ಟಿಲೇರಿದ ಪರಿಣಾಮ ಕಲ್ಲೂರು ಅವಧಿಯನ್ನು ಪೂರ್ಣಗೊಳಿಸಲಾಗಲಿಲ್ಲ. 2003ರಲ್ಲಿ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಾಗ ರಾಜಶೇಖರ್ ಪಾಟೀಲ್ ಶಾಸಕರಾಗಿ ಮೊದಲ ಯಶಸ್ಸು ಕಂಡರು. ಬಳಿಕ 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್‌ನ ಮೇರಾಜುದ್ದೀನ್ ಪಟೇಲ್ ಜಯಗಳಿಸಿದ್ದು, ಅಲ್ಪಾವಧಿಯಲ್ಲಿಯೇ ರಾಜಶೇಖರ್ ಪಾಟೀಲ್ ಮಾಜಿ ಆದರು. ಮತ್ತೆ 2008ರಲ್ಲಿ ಸಾರ್ವತ್ರಿಕ ಚುನಾವಣೆ ನಡೆದಾಗ ಪಾಟೀಲ್‌ಗೆ ಮತ್ತೆ ಗೆಲುವು ಅರಸಿ ಬಂದಿತು.

ಈ ಹಿನ್ನಲೆ ನೋಡಿದರೆ, ಶಾಸಕ ಸ್ಥಾನ ಕಳೆದ ಎರಡು ಮೂರು ಚುನಾವಣೆಗಳಲ್ಲಿ ಜೆಡಿಎಸ್-ಕಾಂಗ್ರೆಸ್‌ನ ನಡುವೆ ಅದಲು ಬದಲಾಗುತ್ತಿದೆ. ಕ್ಷೇತ್ರದಲ್ಲಿ ಏನು ಬದಲಾಗಿದೆಯೋ ಆದರೆ, ರಾಜಕೀಯವಾಗಿ ಕಳೆದ ಅವಧಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಮೇರಾಜುದ್ದೀನ್ ಪಟೇಲ್ ಅವರು ಮರೆಯಾಗಿದ್ದಾರೆ. ಮಾಜಿ ಸಚಿವರು ಆಗಿದ್ದ ಬಸವರಾಜ ಪಾಟೀಲರು ಕಾಂಗ್ರೆಸ್‌ನಿಂದ ಬಿಜೆಪಿಗೆ ಪಕ್ಷಾಂತರಗೊಂಡಿದ್ದಾರೆ.

ದಿ. ಮೇರಾಜುದ್ದೀನ್ ಅವರ ಸಹೋದರ ನಸಿಮುದ್ದೀನ್ ಪಟೇಲ್ ಅವರು ಪಕ್ಷ ಮತ್ತು ಕ್ಷೇತ್ರ ಎರಡನ್ನೂ ಬದಲಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಬೀದರ್ ದಕ್ಷಿಣದಿಂದ ಬಿಎಸ್‌ಪಿ ಅಭ್ಯರ್ಥಿಯಾಗಿದ್ದ ಅವರು ಈ ಚುನಾವಣೆಯಲ್ಲಿ ಹುಮನಾಬಾದ್‌ನಲ್ಲಿ  ಜೆಡಿಎಸ್ ಅಭ್ಯರ್ಥಿ. ಹೀಗಾಗಿ, ಪಕ್ಷಗಳು ಬದಲಾದರೂ ಒಂದೇ ಕುಟುಂಬದ ಸದಸ್ಯರೇ ಹೆಚ್ಚು ಅವಧಿ ಪ್ರತಿನಿಧಿಸಿರುವ ಕ್ಷೇತ್ರ  ಇದು.

ADVERTISEMENT

ಪಕ್ಷಕ್ಕಿಂತಲೂ ಅಭ್ಯರ್ಥಿಯ ಕೌಟುಂಬಿಕ, ವ್ಯಕ್ತಿಗತ ವರ್ಚಸ್ಸೇ ಹೆಚ್ಚು ಪ್ರಮುಖವಾಗುವ ಕ್ಷೇತ್ರವು ಹೌದು. ಇದೇ ಕಾರಣದಿಂದ ಮತ್ತು ಜೊತೆಗೆ ಕಣದಲ್ಲಿರುವ ಇತರ ಪಕ್ಷಗಳು ಎಷ್ಟರ ಮಟ್ಟಿಗೆ ಫಲಿತಾಂಶ ಮತ್ತು ಮತದಾರರ ಮೇಲೆ ಪ್ರಭಾವ ಬೀರಲಿವೆ ಎಂಬ ಕಾರಣದಿಂದ ಈ ಚುನಾವಣೆ ಗಮನ ಸೆಳೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.