ADVERTISEMENT

ಶಾಲೆಯಲ್ಲಿ ಕಂಪ್ಯೂಟರ್, ಜಿಮ್ ಸೌಲಭ್ಯ

ಮನ್ನಥಪ್ಪ ಸ್ವಾಮಿ
Published 28 ಫೆಬ್ರುವರಿ 2018, 9:06 IST
Last Updated 28 ಫೆಬ್ರುವರಿ 2018, 9:06 IST
ಸಂತಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿನಿಯರು ಜಿಮ್ ಸೌಲಭ್ಯ ಬಳಕೆ ಮಾಡುತ್ತಿರುವುದು
ಸಂತಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿನಿಯರು ಜಿಮ್ ಸೌಲಭ್ಯ ಬಳಕೆ ಮಾಡುತ್ತಿರುವುದು   

ಔರಾದ್: ತಾಲ್ಲೂಕಿನ ಸಂತಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಂಪ್ಯೂಟರ್, ಜಿಮ್‌ ಆಧುನಿಕ ಶೈಕ್ಷಣಿಕ ಸೌಲಭ್ಯ ಹೊಂದಿದೆ. ಬೀದರ್-ಔರಾದ್ ಮುಖ್ಯ ರಸ್ತೆಗೆ ಹೊಂದಿಕೊಂಡು 12 ಎಕರೆ ವಿಶಾಲ ಪ್ರದೇಶದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹೆಸರು ಮಾಡಿದೆ.

6ರಿಂದ 10ನೇ ತರಗತಿ ವರೆಗಿನ ಈ ಶಾಲೆಯಲ್ಲಿ ಒಟ್ಟು 237 ವಿದ್ಯಾರ್ಥಿಗಳಿದ್ದಾರೆ. ಇವರಲ್ಲಿ ಅರ್ಧದಷ್ಟು ವಿದ್ಯಾರ್ಥಿನಿಯರು. ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ಮತ್ತು ಊಟದ ಕೋಣೆ ವ್ಯವಸ್ಥೆ ಇದೆ. ಶುದ್ಧ ಕುಡಿಯುವ ನೀರು, ಸ್ನಾನ ಮಾಡಲು ಬಿಸಿ ನೀರಿನ ವ್ಯವಸ್ಥೆ ಮತ್ತು ವಿದ್ಯುತ್‌ ಹೋದರೆ ಜನರೇಟರ್ ಸೌಲಭ್ಯವೂ ಇದೆ.

'ಎಲ್ಲ ತರಗತಿ ವಿದ್ಯಾರ್ಥಿಗಳಿಗೆ ಈಗ ಇಂಗ್ಲಿಷ್ ಶಿಕ್ಷಣ ಕೊಡಲಾಗುತ್ತಿದೆ. ಇಂಗ್ಲಿಷ್ ಮತ್ತು ಸಮಾಜ ವಿಜ್ಞಾನ ವಿಷಯದ ಶಿಕ್ಷಕರ ಕೊರತೆ ಇದೆ. ಸದ್ಯ ಅತಿಥಿ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಪ್ರಭಾರ ಮುಖ್ಯ ಶಿಕ್ಷಕ ತುಕಾರಾಮ ಯಾತಪ್ಪ ಹೇಳಿದರು.

ADVERTISEMENT

2016-17ರಲ್ಲಿ ಶೇ 88ರಷ್ಟು ಎಸ್ಸೆಸ್ಸೆಲ್ಸಿ ಫಲಿತಾಂಶ ಬಂದಿದೆ. ಆರು ವಿದ್ಯಾರ್ಥಿಗಳು ಅಗ್ರಶ್ರೇಣೆಯಲ್ಲಿ ಉತ್ತೀರ್ಣರಾಗಿದ್ದಾರೆ. ಫಾರುಕ್ ಗಣಿತದಲ್ಲಿ 100ಕ್ಕೆ ನೂರು ಅಂಕ ಗಳಿಸಿದ್ದಾರೆ. 2015-16ರ ಶೇ92ರಷ್ಟು ಫಲಿತಾಂಶ ಬಂದಿದೆ. ಕಳೆದ ಐದು ವರ್ಷಗಳಲ್ಲಿ ಆರು ವಿದ್ಯಾರ್ಥಿಗಳು ವೈದ್ಯಕೀಯ ಕೋರ್ಸ್‌ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ. ಶಾಲೆಯಲ್ಲಿ ಕಲಿತ ವಿದ್ಯಾರ್ಥಿಯೊಬ್ಬರು ಈಗ ಸೂರತ್‌ನಲ್ಲಿ ವಿಜ್ಞಾನಿಯಾಗಿದ್ದಾರೆ. ಮತ್ತೊಬ್ಬ ವಿದಾರ್ಥಿ ತೋಟಗಾರಿಕೆ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದಾರೆ' ಎಂದು ಹೆಮ್ಮೆಯಿಂದ ತಿಳಿಸಿದರು.

‘ಕಳೆದ ಕೆಲ ವರ್ಷಗಳಲ್ಲಿ ಶಾಲೆಗೆ ಖಾಸಗಿ ಕಾನ್ವೆಂಟ್ ಶಾಲೆಗಳನ್ನು ಮೀರಿಸುವಷ್ಟು ಸೌಲಭ್ಯ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತಿದೆ. ಯೋಗ ಮತ್ತು ಕರಾಟೆ ತರಬೇತಿ ವ್ಯವಸ್ಥೆ ಇದೆ. ಈ ಎಲ್ಲದರ ಸದ್ಬಳಕೆ ಮಾಡುಕೊಂಡ ಮಕ್ಕಳ ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಿದ್ದಾರೆ. ಅಥ್ಲೆಟಿಕ್ಸ್, ಕುಸ್ತಿ, ಕಬಡ್ಡಿ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ವಿಭಾಗ ಮತ್ತು ರಾಜ್ಯ ಮಟ್ಟದಲ್ಲಿ ಆಡಿದ್ದಾರೆ. ವಿದ್ಯಾರ್ಥಿ ರೇಷ್ಮಾ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸಂಗೀತದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ ಎಂದರು. ಶಾಲೆ ಆವರಣದಲ್ಲಿ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಲಾಗಿದೆ.

ಇಡೀ ಶಾಲಾ ಪರಿಸರದಲ್ಲಿ ಹುಡುಕಾಡಿದರೂ ಒಂದು ಕಾಗದ ಚೂರು ಸಿಗುವುದಿಲ್ಲ. ಸ್ವತಃ ವಿದ್ಯಾರ್ಥಿಗಳೇ ಸ್ವಚ್ಛತೆ ಕಡೆ ಗಮನ ಹರಿಸುತ್ತಾರೆ. ಚೂರು ಕಸ ಕಂಡರೂ ಅದನ್ನು ಎತ್ತಿ ತೊಟ್ಟಿಗೆ ಹಾಕುವ ರೂಢಿ ಮಾಡಿಕೊಂಡಿದ್ದಾರೆ' ಎಂದು ಶಿಕ್ಷಕ ಸಿಬ್ಬಂದಿ ಹೇಳುತ್ತಾರೆ.

ಮೊರಾರ್ಜಿ ಪ್ರತಿಮೆ: ಹಳೆ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಮಾಜಿ ಪ್ರಧಾನಿ ದಿವಂಗತ ಮೊರಾರ್ಜಿಿ ದೇಸಾಯಿ ಅವರ ಪ್ರತಿಮೆ ಪ್ರತಿಷ್ಠಾಪಿಸಿದ್ದಾರೆ. ಶಾಲಾ ಸಿಬ್ಬಂದಿ ಸುಂದರ ಸರಸ್ವತಿ ಪ್ರತಿಮೆ ಕೂಡಿಸಿದ್ದು, ಪ್ರತಿ ಶುಕ್ರವಾರ ವಿದ್ಯಾರ್ಥಿಗಳು ಪೂಜೆ ಮಾಡುತ್ತಾರೆ.

ತಡೆಗೋಡೆ ಸಮಸ್ಯೆ: ಸಂತಪುರ ಗ್ರಾಮದ ಹಿರಿಯರೊಬ್ಬರು ಶಾಲೆಗೆ 12 ಎಕರೆ ಜಮೀನು ದಾನ ಮಾಡಿದ್ದಾರೆ. ಶಾಲೆ ಹೆಸರಿನಲ್ಲಿ ಅಧಿಕೃತ ಪಹಣಿ ಮತ್ತು ದಾಖಲೆಗಳಿವೆ. ಆದರೆ, ಕೆಲವರು ತಡೆಗೋಡೆ ಕಟ್ಟಡಲು ಆಕ್ಷೇಪ ಮಾಡುತ್ತಿದ್ದಾರೆ. ಈ ಕಾರಣ ಅನುದಾನ ಬಂದರೂ ಒಂದು ವರ್ಷದಿಂದ ಕಾಮಗಾರಿ ನನೆಗುದಿಗೆ ಬಿದ್ದಿದೆ.ತಡೆಗೋಡೆ ಆದರೆ ಸುರಕ್ಷತೆ ಇರುತ್ತದೆ ಎಂದು ಶಿಕ್ಷಕ ಸಿಬ್ಬಂದಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.