ADVERTISEMENT

ಶಾಸಕರ ಊರಲ್ಲಿ ನೆಮ್ಮದಿಗೆ ಭಂಗ

​ಪ್ರಜಾವಾಣಿ ವಾರ್ತೆ
Published 7 ಜೂನ್ 2011, 10:00 IST
Last Updated 7 ಜೂನ್ 2011, 10:00 IST

ಔರಾದ್: ಶಾಲಾ ಕಾಲೇಜು ಪ್ರವೇಶಕ್ಕಾಗಿ ಜಾತಿ ಆದಾಯ ಪ್ರಮಾಣ ಪತ್ರ ಪಡೆಯಲು ಮತ್ತು ಸುವರ್ಣ ಭೂಮಿ ಫಲಾನುಭವಿ ರೈತರು ಪಹಣಿ ಹಾಗೂ ಬಾಂಡ್ ಪಡೆಯಲು ಪರದಾಡಬೇಕಾಗಿದೆ.

ಗ್ರಾಮೀಣ ಭಾಗದ ಜನರಿಗೆ ಅನಗತ್ಯ ತೊಂದರೆ ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ ಪ್ರತಿವೊಂದು ಹೋಬಳಿಯಲ್ಲಿ ನೆಮ್ಮದಿ ಕೇಂದ್ರ ಸ್ಥಾಪಿಸಿದೆ. ಜಾತಿ ಆದಾಯ ಪ್ರಮಾಣ ಪತ್ರ, ಪಹಣಿ ಪತ್ರ ಈ ಕೇಂದ್ರಗಳ ಮೂಲಕ ವಿತರಿಸುವ ವ್ಯವಸ್ಥೆ ಮಾಡಲಾಗಿದೆ. ಆದರೆ,  ಕೆಲ ಹೋಬಳಿಯಲ್ಲಿನ ನೆಮ್ಮದಿ ಕೇಂದ್ರಗಳು ಇದ್ದೂ ಇಲ್ಲವಾಗಿದೆ ಎಂಬ ದೂರುಗಳಿವೆ.

ಶಾಸಕ ಪ್ರಭು ಚವ್ಹಾಣ್  ವಾಸಿಸುವ ದಾಬಕಾ ಹೋಬಳಿ ಕೇಂದ್ರದಲ್ಲಿ ಕಳೆದ ಕೆಲ ದಿನಗಳಿಂದ ನೆಮ್ಮದಿ ಕೇಂದ್ರ ಬಂದ್ ಆಗಿದೆ. ಆದರೂ ಯಾರು ಕೇಳುವವರು ಹೇಳುವವರು ಇಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ಈ ಭಾಗದ ಜನ ಗೋಳಾಡುತ್ತಿದ್ದಾರೆ.
 
ಈಗ ಬಿತ್ತನೆ ಸಿದ್ಧತೆ ಮಾಡಿಕೊಳ್ಳುವ ದಿನಗಳು. ಇಂಥದರಲ್ಲಿ ನಾವು ಪಹಣಿ ಮತ್ತು ಬಾಂಡ್‌ಗಾಗಿ ಕಳೆದ ನಾಲ್ಕೈದು ದಿನಗಳಿಂದ ಔರಾದ್‌ಗೆ ಬಂದು ಹೋಗುತ್ತಿದ್ದೇವೆ ಎಂದು ದಾಬಕಾ ಹೋಬಳಿ ಹಂಗರಗಾ ಗ್ರಾಮದ ರಾಮ ದಶರಥ ಗೋಳು ತೋಡಿಕೊಂಡಿದ್ದಾರೆ. ಸಂಬಂಧಿತರು ಕಾಳಜಿ ವಹಿಸಿ ದಾಬಕಾ ನೆಮ್ಮದಿ ಕೇಂದ್ರದ ಕೆಲಸ ಆರಂಭಿಸಿ ಈ ಭಾಗದ ಹತ್ತಾರು ಗ್ರಾಮಗಳ ಜನರಿಗೆ ಅನುಕೂಲ ಮಾಡಿಕೊಡುವಂತೆ ಬಾದಲಗಾಂವ್ ಗ್ರಾಮದ ವಾಮನ ರಾಠೋಡ ಆಗ್ರಹಿಸಿದ್ದಾರೆ.

ಹೆಚ್ಚಿದ ಒತ್ತಡ: ದಾಬಕಾ ನೆಮ್ಮದಿ ಕೇಂದ್ರ ಬಂದ್ ಆಗಿರುವ ಹಿನ್ನೆಲೆಯಲ್ಲಿ ಅಲ್ಲಿಯ ರೈತರು ವಿದ್ಯಾರ್ಥಿಗಳು ಔರಾದ್ ನೆಮ್ಮದಿ ಕೇಂದ್ರಕ್ಕೆ ಬರುತ್ತಿದ್ದಾರೆ. ಹೀಗಾಗಿ ಇಲ್ಲಿ ಕೆಲಸದ ಒತ್ತಡ ಜಾಸ್ತಿಯಾಗಿದೆ ಎಂದು ಇಲ್ಲಿಯ ನೆಮ್ಮದಿ ಕೇಂದ್ರದ ಸಿಬ್ಬಂದಿ ಹೇಳುತ್ತಾರೆ. ಮಳೆ ಸಿಡಿಲಿನಿಂದ ಆಗಾಗ ಇಂಟರ್‌ನೆಟ್ ಕಡಿತದಿಂದಾಗಿ ಕೆಲಸದಲ್ಲಿ ತೊಂದರೆಯಾಗುತ್ತಿದೆ ಎಂದು ತಿಳಿಸಿದ್ದಾರೆ.

ಬಾಂಡ್‌ಗಾಗಿ ಪರದಾಟ: ಔರಾದ್‌ನಲ್ಲಿ ತಾಲ್ಲೂಕಿನ ಏಕೈಕ ಬಾಂಡ್ ವಿತರಣಾ ಕೇಂದ್ರವಿದೆ. ಹೀಗಾಗಿ ಇಲ್ಲಿ ನಿತ್ಯ ಬಾಂಡ್‌ಗಾಗಿ ಜನ ಸರದಿಗಾಗಿ ನಿಲ್ಲುವುದು ಸಾಮಾನ್ಯವಾಗಿದೆ. ಹೋಬಳಿ ಮಟ್ಟದಲ್ಲೂ ಬಾಂಡ್ ವಿತರಣೆ ವ್ಯವಸ್ಥೆ ಮಾಡಿದರೆ ಜನಸಾಮಾನ್ಯರ ಅನಗತ್ಯ ಓಡಾಟ ಮತ್ತು ಖರ್ಚು ತಪ್ಪುತ್ತದೆ ಎಂಬುದು ಪ್ರಜ್ಞಾವಂತರ ಬೇಡಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.