ADVERTISEMENT

ಶಿವಾಜಿ ಜಯಂತಿ 19ರಂದು ಆಚರಿಸಲಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2012, 8:55 IST
Last Updated 23 ಫೆಬ್ರುವರಿ 2012, 8:55 IST

ಬಸವಕಲ್ಯಾಣ: ಸರ್ಕಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಫೆಬ್ರುವರಿ 19 ರಂದು ಆಚರಿಸಬೇಕು. ಏಪ್ರಿಲ್ 24 ರಂದು ಆಚರಿಸಲು ನಿರ್ಧರಿಸಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಆನಂದ ದೇವಪ್ಪ ಅಭಿಪ್ರಾಯಪಟ್ಟಿದ್ದಾರೆ.

ತಾಲ್ಲೂಕಿನ ಗಡಿರಾಯಪಳ್ಳಿಯಲ್ಲಿ ಶಿವಸಂಗ್ರಾಮ ಮತ್ತು ನವಯುವಕ ತರುಣ ಮಂಡಳ ವತಿಯಿಂದ ಮಂಗಳವಾರ ಹಮ್ಮಿಕೊಂಡ ಶಿವಾಜಿ ಮಹಾರಾಜರ ಜಯಂತ್ಯುತ್ಸವದಲ್ಲಿ ಮಾತನಾಡಿದರು.

ಮಹಾರಾಷ್ಟ್ರ ಸರ್ಕಾರ ಫೆಬ್ರುವರಿ 19 ರಂದೇ ಜಯಂತಿ ಆಚರಿಸುತ್ತದೆ. ತಜ್ಞರ ಪ್ರಕಾರ ಈ ದಿನವೇ ಶಿವಾಜಿ ಹುಟ್ಟಿದ ದಿನವಾಗಿದೆ. ಆದ್ದರಿಂದ ಸಾರ್ವಜನಿಕರು ಸಹ ಅಂದೇ ಕಾರ್ಯಕ್ರಮ ನಡೆಸುವುದು ಒಳ್ಳೆಯದು ಎಂದರು. ಇವರ ಚರಿತ್ರೆ ಎಲ್ಲರಿಗೂ ಗೊತ್ತಿರಬೇಕು. ಆದ್ದರಿಂದ ಈ ಬಗ್ಗೆ ಅಧ್ಯಯನ ನಡೆಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ರವೀಂದ್ರರೆಡ್ಡಿ ಗೋಕುಳ ಮಾತನಾಡಿ ಶೂರ, ವೀರರಾಗಿದ್ದ ಶಿವಾಜಿ ಮಹಾರಾಜರು ಜಾತಿ, ಧರ್ಮದ ಬಗ್ಗೆ ಭೇದಭಾವ ಮಾಡುತ್ತಿರಲಿಲ್ಲ. ಅವರು ಸಾಮಾನ್ಯ ಜನರ ಹಿತೈಷಿ ಆಗಿದ್ದರು. ರೈತರ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದರು ಎಂದರು.

ಮಹಾರಾಷ್ಟ್ರದ ಮರಾಠಾ ಸೇವಾ ಸಂಘದ ಕಾರ್ಯಾಧ್ಯಕ್ಷ ಪ್ರಶಾಂತ ಪಾಟೀಲ, ಶಿವಸಂಗ್ರಾಮ ಸಂಘಟನೆ ಪ್ರಮುಖ ಡಾ. ಶಾಮ ಮೋರೆ, ಜಿಲ್ಲಾಧ್ಯಕ್ಷ ಸಂದೀಪ ತೇಲಗಾಂವಕರ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಶಬ್ಬೀರಪಾಶಾ ಮುಜಾವರ್, ತಾಲ್ಲೂಕು ಪಂಚಾಯಿತಿ ಸದಸ್ಯ ನಾಮಾನಂದ ಜಾಧವ ಮಾತನಾಡಿದರು.

ಪ್ರಮುಖರಾದ ಮಹಾದೇವ ಹಸೂರೆ, ವಿಷ್ಣು ಪವಾರ, ದಿನಾನಾಥ ಜಾಧವ, ಪ್ರಹ್ಲಾದ್ ಬಿರಾದಾರ, ದತ್ತಾ ಪಾಟೀಲ, ಮಹಾದೇವ ಸ್ವಾಮಿ, ಜಗದೀಶ ಬಿರಾದಾರ, ಸಂತೋಷ, ಶಿವಲಿಂಗ ಬಿರಾದಾರ, ನಿವೃತ್ತಿ ಜಾಧವ, ಗೋವಿಂದ ಜಗತಾಪ ಉಪಸ್ಥಿತರಿದ್ದರು. ಉದ್ಧವರಾವ ಪಾಟೀಲ ನಿರೂಪಿಸಿದರು. ಸಂಭಾಜಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.