ADVERTISEMENT

ಸಂತಪುರ: ರಸ್ತೆ ಮೇಲೆ ಸಂತೆ!

​ಪ್ರಜಾವಾಣಿ ವಾರ್ತೆ
Published 3 ಜುಲೈ 2013, 5:57 IST
Last Updated 3 ಜುಲೈ 2013, 5:57 IST

ಔರಾದ್: ತಾಲ್ಲೂಕಿನ ಸಂತಪುರ ಹೋಬಳಿ ಕೇಂದ್ರದಲ್ಲಿ ಭಾನುವಾರದ ಸಂತೆ ರಸ್ತೆ ಮೇಲೆ ನಡೆಯುತ್ತಿರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.

ಬಸವೇಶ್ವರ ವೃತ್ತದಿಂದ ನಾರಾಯಣಖೇಡ್‌ಗೆ ಹೋಗುವ ಮಾರ್ಗದಲ್ಲಿ ನಡೆಯುವ ವಾರದ ಸಂತೆ ದಿನ ರಸ್ತೆ ಕಾಣದಷ್ಟು ಜನಜಂಗುಳಿ ನೆರೆದಿರುತ್ತದೆ.

ತರಕಾರಿ, ಕಿರಾಣಿ, ಹಣ್ಣು ಇತರೆ ದಿನಬಳಕೆ ವಸ್ತುಗಳ ವ್ಯಾಪಾರಸ್ಥರು ರಸ್ತೆ ಎರಡೂ ಬದಿಗೂ ಅಂಗಡಿ ಹಾಕಿಕೊಂಡಿರುವುದರಿಂದ ಒಬ್ಬರಿಗೊಬ್ಬರು ಮೈಗೆ ತಾಗಿಕೊಂಡೇ ನಡೆಯಬೇಕಾಗಿದೆ.

ಈ ನಡುವೆ ನಾರಾಯಣಖೇಡ್, ಜಮಗಿ, ವಡಗಾಂವ್ ಕಡೆಗೆ ಹೋಗಿ ಬರುವ ಬಸ್ ಮತ್ತು ಇತರೆ ವಾಹನಗಳಿಗೆ ದಾರಿ ಸಿಗದೆ ತೊಂದರೆಯಾಗಿದೆ. ಈ ಜನಜಂಗುಳಿಯಲ್ಲಿ ಪ್ರತಿವಾರ ಒಂದಿಲ್ಲ ಒಂದು ಅವಘಡ ಸಂಭವಿಸುತ್ತಿರುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ. ವಾರದ ಸಂತೆ ನಡೆಸಲೆಂದು ಸಂತಾಜಿ ಸ್ಮಾರಕದ ಬಳಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಮಿನಿ ಮಾರುಕಟ್ಟೆ ನಿರ್ಮಿಸಲಾಗಿದೆ. ಆದರೆ, ಅಲ್ಲಿಗೆ ಹೋಗಲು ದಾರಿ ಇಲ್ಲದೆ ಅದರ ಉಪಯೋಗವಾಗುತ್ತಿಲ್ಲ.

ದಾರಿ ನಿರ್ಮಿಸಲು ಕ್ರಿಯಾ ಯೋಜನೆಯಲ್ಲಿ 2 ಲಕ್ಷ ಅನುದಾನ ಇಡಲಾಗಿದೆ. ರಸ್ತೆ ಆದ ನಂತರ ತರಕಾರಿ  ಮಾರುಕಟ್ಟೆ ಅಲ್ಲಿಗೆ ಸ್ಥಳಾಂತರಿಸಲಾಗುವುದು ಎಂದು ಎಪಿಎಂಸಿ ಕಾರ್ಯದರ್ಶಿ ರವಿ ರಾಠೋಡ ತಿಳಿಸಿದ್ದಾರೆ. ಮಿನಿ ಮಾರುಕಟ್ಟೆ ಮತ್ತು ಸಂತಾಜಿ ಸ್ಮಾರಕಕ್ಕೆ ಹೋಗಿ ಬರಲು ದಾರಿ ಮಾಡಿಕೊಡುವಂತೆ ಸಂಬಂಧಿಸಿದವರಿಗೆ ಸಾಕಷ್ಟು ಸಲ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ ಎಂದು ಅಲ್ಲಿಯ ಪ್ರಜ್ಞಾವಂತ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ಸಂತಪುರದಿಂದ ಸ್ವಲ್ಪ ಮುಂದೆ ಔರಾದ್‌ಗೆ ಹೋಗುವ ಮಾರ್ಗದಲ್ಲಿ ಹೊಸದಾಗಿ ನಿರ್ಮಾಣಗೊಂಡ ಬಸ್ ನಿಲ್ದಾಣ ಪ್ರಯಾಣಿಕರ ಉಪಯೋಗಕ್ಕೆ ಬಳಸಿಕೊಳ್ಳುವಂತೆ ಜೈ ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.