ADVERTISEMENT

ಸಂಭ್ರಮದ ಅಮರೇಶ್ವರ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2011, 8:50 IST
Last Updated 5 ಮಾರ್ಚ್ 2011, 8:50 IST
ಸಂಭ್ರಮದ ಅಮರೇಶ್ವರ ರಥೋತ್ಸವ
ಸಂಭ್ರಮದ ಅಮರೇಶ್ವರ ರಥೋತ್ಸವ   

ಔರಾದ್: ಇಲ್ಲಿಯ ಅಮರೇಶ್ವರ ಜಾತ್ರಾ ಉತ್ಸವ ನಿಮಿತ್ತವಾಗಿ ಶುಕ್ರವಾರ ಬೆಳಗಿನ ಜಾವ ಸಡಗರ ಸಂಭ್ರಮದ ನಡುವೆ ರಥೋತ್ಸವ ನಡೆಯಿತು.

ಮೂರು ರಾಜ್ಯಗಳ ಗಡಿ ಭಾಗದ ಆರಾಧ್ಯ ದೇವರಾದ ಅಮರೇಶ್ವರ ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಭಕ್ತಿ ಭಾವ ಮೆರೆದರು. ವಾರಗಳ ಕಾಲ ನಡೆಯುವ ಜಾತ್ರಾ ಉತ್ಸವದ ನಿಮಿತ್ತವಾಗಿ ಐದು ದಿನಗಳ ಕಾಲ ಪ್ರತಿ ದಿನ ಅಮರೇಶ್ವರ ಪ್ರತಿಮೆಯ ಮೆರವಣಿಗೆ ನಡೆಯುತ್ತದೆ. ಭಕ್ತರ ಹರ್ಷೋಲ್ಲಾಸದ ನಡುವೆ ಬಣ್ಣ ಬಣ್ಣದ ಹೂ ಮತ್ತು ದೀಪಾಲಂಕಾರ ಮಾಡಲಾದ ರಥೋತ್ಸವ ಅಮರೇಶ್ವರ ದೇವಸ್ಥಾನದಿಂದ ಹೊರಟಿತು. ಓಂ ಭಲಾ... ಶಂಕರ ಭಲಾ...ಎಂಬ ಘೋಷಣೆಯೊಂದಿಗೆ ಭಕ್ತರು ರಥ ಎಳೆದು ಸಂಭ್ರಮಿಸಿದರು.

ಮಕ್ಕಳು, ಮುದುಕರೆನ್ನದೆ ಮೈಮರೆತು ಭಕ್ತ ಸಮೂಹ ಕುಣಿದು ಕುಪ್ಪಳಿಸಿತು. ಯುವಕರ ಕೋಲಾಟ, ಡೊಳ್ಳು ಕುಣಿತ ರಥ ನೋಡಲು ಬಂದವರಿಗೆ ಮನೋರಂಜನೆ ನೀಡುತು. ದಾರಿ ಉದ್ದಕ್ಕೂ ಮಹಿಳೆಯರು ತಮ್ಮ ತಮ್ಮ ಮನೆಯ ಮುಂದೆ ರಂಗೋಲಿ ಹಾಕಿ ದೀಪ ಹಚ್ಚಿ ರಥಕ್ಕೆ ಸ್ವಾಗತಿಸಿಕೊಂಡರು. ಅಮರೇಶ್ವರ ಪ್ರತಿಮೆಗೆ ಶಲ್ಯೆ, ಟೋಪಿ ತೊಡಿಸಿ, ಕಾಯಿ ಒಡೆದು ತಮ್ಮ ಹರಕೆ ತೀರಿಸಿದರು.

 ನಾಟಕ, ಜಾನಪದ ಕಲೆ ಪ್ರದರ್ಶನ, ಮಕ್ಕಳ ಅಟೋಟಗಳು ಇಡೀ ರಾತ್ರಿ ಭಕ್ತ ಸಮೂಹಕ್ಕೆ ಮನರಂಜನೆ ನೀಡಿದವು. ಎಲ್ಲೆಡೆ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.