ಬೀದರ್: ಕೈದಿಗಳಿಗೆ ಎಳ್ಳು-ಬೆಲ್ಲ ಹಂಚುವ ಮೂಲಕ ಕರ್ನಾಟಕ ಲೇಖಕಿಯರ ಸಂಘವು ನಗರದ ಜಿಲ್ಲಾ ಕಾರಾಗೃಹದಲ್ಲಿ ಶನಿವಾರ ಸಂಕ್ರಾಂತಿ ಆಚರಿಸಿತು.
ಕಾರಾಗೃಹದಲ್ಲಿ ಇರುವ ಕೈದಿಗಳಿಗೆ ಹಬ್ಬದ ಪ್ರಯುಕ್ತ ಎಳ್ಳು- ಬೆಲ್ಲ ಹಂಚಲಾಯಿತು. ಸಾಮೂಹಿಕವಾಗಿ ಸಿಹಿ ತಿನ್ನುವ ಮೂಲಕ ಹಬ್ಬದ ಸಂಭ್ರಮ ಆಚರಿಸಲಾಯಿತು. ಸಂಘವು `ಮಹಿಳಾ ಕೈದಿಗಳಿಗೆ ಅರಿವು ಕಾರ್ಯಕ್ರಮ~ವನ್ನೂ ಏರ್ಪಡಿಸಿತ್ತು.
ಅಸಮಾನತೆಯೇ ಅಪರಾಧಗಳಿಗೆ ಕಾರಣ ಎಂದು ಜಿಲ್ಲಾ ಸತ್ರ ನ್ಯಾಯಾಧೀಶ ವೆಂಕಟೇಶ ಅಭಿಪ್ರಾಯಪಟ್ಟರು. ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಲಾಗಿದೆ. ಹೀಗಾಗಿ ಅಸಮಾನತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯಬೇಕಿದೆ ಎಂದು ಹೇಳಿದರು.
ಕೈದಿಗಳು ತಪ್ಪಿಂದ ಆದ ತಪ್ಪಿಗೆ ಪಶ್ಚಾತಾಪಪಟ್ಟು ಜೈಲಿನಿಂದ ಹೊರ ಬಂದ ನಂತರ ಒಳ್ಳೆಯ ನಾಗರಿಕರಾಗಿ ಬದುಕಬೇಕು ಎಂದು ವಿಶೇಷ ಉಪನ್ಯಾಸ ನೀಡಿದ ಮಾರ್ಕೇಟ್ ಠಾಣೆಯ ಮಹಿಳಾ ಪೇದೆ ಮಲ್ಲೇಶ್ವರಿ ಉದಯಗಿರಿ ಕಿವಿಮಾತು ಹೇಳಿದರು.
ಪತ್ರಕರ್ತೆ ಬಿ.ಎಂ. ಶಶಿಕಲಾ ಮಾತನಾಡಿದರು. ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಅಧ್ಯಕ್ಷೆ ಡಾ. ವಜ್ರಾ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.
ಬೀದರ್: ಸಂಕ್ರಾಂತಿ ಹಬ್ಬವನ್ನು ನಗರದಲ್ಲಿ ಭಾನುವಾರ ಸಂಭ್ರಮ ಸಡಗರಿಂದ ಆಚರಿಸಲಾಯಿತು. ಮಕ್ಕಳು, ಯುವಕರು, ಮಹಿಳೆಯರಾದಿಯಾಗಿ ಎಲ್ಲರು ಪರಸ್ಪರ ಎಳ್ಳು ಬೆಲ್ಲ ಹಂಚುವ ಮೂಲಕ ಸಂತಸ ಹಂಚಿಕೊಂಡದರು.
ಯುವಕರು ಗುಂಪು ಕಟ್ಟಿಕೊಂಡು ಸ್ನೇಹಿತರು ಹಾಗೂ ಸಂಬಂಧಿಕರ ಮನೆಗಳಿಗೆ ತೆರಳಿ ಎಳ್ಳು- ಬೆಲ್ಲ ಹಂಚಿದರು. ಸ್ನೇಹಿತರು ಎಳ್ಳು- ಬೆಲ್ಲ ವಿನಿಮಯ ಮಾಡಿಕೊಂಡು ಪರಸ್ಪರ ಅಪ್ಪಿಕೊಂಡು ಶುಭಾಶಯ ಕೋರಿದರು.
ಬೆಳಿಗ್ಗೆ `ಟಿಕ್ಸಾ~ ಹಚ್ಚಿಕೊಂಡು ಸ್ನಾನ ಮಾಡುವುದು ಸಂಪ್ರದಾಯ. ಹಾಗೆಯೇ ಶೇಂಗಾ ಹೋಳಿಗೆ ವಿಶೇಷ ಖಾದ್ಯಗಳಲ್ಲಿ ಒಂದಾಗಿತ್ತು. ಮಕ್ಕಳು ಹೊಸ ಬಟ್ಟೆ ಧರಿಸಿ ಸಂಭ್ರಮಿಸಿದರು. ಸಂಜೆ ಪರಸ್ಪರರ ಮನೆಗಳಿಗೆ ತೆರಳಿ ಎಳ್ಳು- ಬೆಲ್ಲ ಹಂಚುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.