ADVERTISEMENT

ಸಕಾಲಕ್ಕೆ ಬೀಜ, ಗೊಬ್ಬರ ಪೂರೈಸಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2011, 8:00 IST
Last Updated 3 ಜೂನ್ 2011, 8:00 IST

ಹುಮನಾಬಾದ್: ಕ್ಷೇತ್ರದ ರೈತರಿಗೆ ಬೀಜ, ಗೊಬ್ಬರ ಸಕಾಲಕ್ಕೆ ಪೂರೈಕೆ ಆಗದಿದ್ದರೆ, ಅಧಿಕಾರಿಗಳೆ ಹೊಣೆ ಎಂದು ಶಾಸಕ ರಾಜಶೇಖರ ಪಾಟೀಲ ಎಚ್ಚರಿಸಿದರು. ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಬುಧವಾರ ಸುವರ್ಣಭೂಮಿ ಫಲಾನುಭವಿಗಳ ಆಯ್ಕೆಗೆ ಚಾಲನೆ ನೀಡಿ ಮಾತನಾಡಿದರು.

ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮಗಳಲ್ಲಿ ಸುವರ್ಣಭೂಮಿ ಯೋಜನೆ ಕೂಡಾ  ಒಂದಾಗಿದೆ. ಅತ್ಯಂತ ಕಡು ಬಡವ ರೈತರ ಪಾಲಿಗೆ ಸರ್ಕಾರ ನೀಡುತ್ತಿರುವ ರೂ. 10ಸಾವಿರ ಸಹಾಯಧನ ಸಣ್ಣ ಹಣವಲ್ಲ. ಅಗತ್ಯ ಬೀಜ, ಗೊಬ್ಬರ ಖರೀದಿಸಲು ಉಪಯುಕ್ತವಾಗಲಿದ್ದು. ರೈತ ಬಾಂಧವರು ಅದರಿಂದ ಪ್ರಯೋಜನ ಪಡೆಯಬೇಕು ಎಂದು ಶಾಸಕ ರಾಜಶೇಖರ ಪಾಟೀಲ ಸಲಹೆ ನೀಡಿದರು.

ಫಲಾನುಭವಿಗಳ ಆಯ್ಕೆ ಲಾಟರಿ ಚೀಟಿ ಮೂಲಕ ನಡೆಸಲು ನಿರ್ಧರಿಸಲಾದ ಸರ್ಕಾರದ ನಿರ್ಣಯದ ಹಿಂದೆ ಪಾರದರ್ಶಕತೆ ಕಾಯ್ದುಕೊಳ್ಳುವ ಉದ್ದೇಶ ಅಡಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಫಲಾನುಭವಿಗಳ ವಿಷಯದಲ್ಲಿ ಉಂಟಾದ ಗೊಂದಲ ಸರ್ಕಾರದ ಮಾರ್ಗಸೂಚಿ ಆಧರಿಸಿ ಬಗೆಹರಿಸಲಾಗುವುದು ಎಂದು  ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭು ಮೆಹೆಂಗಾ, ಸದಸ್ಯ ಚಂದ್ರಮ್ಮ ಗಂಗಶೆಟ್ಟಿ, ತಂಗುಬಾಯಿ ಪರಾಂಜಪೆ, ಜಗದೇವಿ ಝರಣಪ್ಪ. ವೀರಣ್ಣ ಪಾಟೀಲ, ಮಹಾಂತಯ್ಯ ತೀರ್ಥ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಹ್ಮದ್ ನೂರೋದ್ದೀನ್, ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟರೆಡ್ಡಿ, ಉಪಾಧ್ಯಕ್ಷ ಉಮಾದೇವಿ ಬಸವರಾಜ, ಸದಸ್ಯ ಗಜೇಂದ್ರ ಕನಕಟಕರ್, ಪಾಂಡುರಂಗ ಖಂಡಗೊಂಡ, ಎ.ಪಿ.ಎಂ.ಸಿ ಅಧ್ಯಕ್ಷ ನಾರಾಯಣರೆಡ್ಡಿ, ಉಪಾಧ್ಯಕ್ಷ ಶಿವಾಜಿ, ಕೃಷಿಕ ಸಮಾಜ ಅಧ್ಯಕ್ಷ ವಿಶ್ವನಾಥ ಪಾಟೀಲ ಮಾಡಗೂಳ್ ಮೊದಲಾದವರು ಇದ್ದರು.

ಪ್ರಾಸ್ತಾವಿಕ ಮಾತನಾಡಿದ ಸಹಾಯಕ ಕೃಷಿ ನಿರ್ದೇಶಕ ಸೂರ್ಯಕಾಂತ ಬಿರಾದಾರ ಯೋಜನೆ ಕುರಿತು ವಿವರಿಸಿದರು. ಸಿಬ್ಬಂದಿ ವೀರಶೆಟ್ಟಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.