ADVERTISEMENT

ಸಕ್ಕರೆ ಕಾರ್ಖಾನೆ ಶೀಘ್ರ ಸಾಲಮುಕ್ತ: ಕಲ್ಲೂರ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 10:25 IST
Last Updated 21 ಸೆಪ್ಟೆಂಬರ್ 2011, 10:25 IST

ಹುಮನಾಬಾದ್: ಕಬ್ಬು ಉತ್ಪಾದಕರು ಹಾಗೂ ಸದಸ್ಯರು ಸಹಕರಿಸಿದಲ್ಲಿ ಕಾರ್ಖಾನೆ ಶೀಘ್ರ ಸಾಲಮುಕ್ತಗೊಳಿಸುವುದಾಗಿ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸುಭಾಷ ಕಲ್ಲೂರ ತಿಳಿಸಿದರು.

ಕಾರ್ಖಾನೆ ವತಿಯಿಂದ ತಾಲ್ಲೂಕಿನ ಕನಕಟ್ಟಾ ಗ್ರಾಮದಲ್ಲಿ ಮಂಗಳವಾರ ನಡೆದ ಕಬ್ಬು ಉತ್ಪಾದಕರು, ಸದಸ್ಯರ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ ರೈತರ ಜೀವನಾಡಿ ಹಾಗೂ ಅತ್ಯಂತ ಹಳೆಯ ಕಾರ್ಖಾನೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಇದನ್ನು ಸದಸ್ಯ ರೈತರು ಈಚೆಗೆ ಆರಂಭಗೊಂಡ ಮಹಾತ್ಮ ಗಾಂಧಿ ಮತ್ತು ನಾರಂಜಾ ಸಹಕಾರ ಕಾರ್ಖಾನೆ ಜೊತೆ ಹೋಲಿಕೆ ಮಾಡಬೇಡಿ. ನೀವು ಉಳಿದು, ಜೀವಂತ ಇರಿಸಬೇಕು ಎಂದರು.

ಆರ್ಥಿಕ ನೆರವು ನೀಡುವುದಕ್ಕೆ ಸಾಕಷ್ಟು ಜನ ಮುಂದೆ ಬಂದಿದ್ದು, ನೆರವು ಪಡೆದು ಸಹ ಉತ್ಪಾದನೆ ಮೂಲಕ ಕಾರ್ಖಾನೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಪ್ರಾಮಾಣಿಕ ಪ್ರಯತ್ನಿಸುತ್ತಿದ್ದು ಸಹಕರಿಸಬೇಕು ಎಂದು ಕಲ್ಲೂರ ರೈತರಿಗೆ ಮನವಿ ಮಾಡಿದರು.

ಕಾರ್ಖಾನೆ ಮಾಜಿ ನಿರ್ದೇಶಕ ಪರಮೇಶ್ವರ ಪಾಟೀಲ ಕಾರ್ಖಾನೆ ಈ ಬಾರಿ ಲಾಭದಲ್ಲಿ ಇರುವುದರಿಂದ ಕಬ್ಬಿಗೆ ಹೆಚ್ಚಿನ ಬೆಲೆ ನೀಡಬೇಕು ಎಂದು ರೈತರ ಪರವಾಗಿ ಕಾರ್ಖಾನೆಯ ಆಡಳಿತ ಮಂಡಳಿಯನ್ನು ಆಗ್ರಹಿಸಿದರು. ಅಧ್ಯಕ್ಷತೆ ವಹಿಸಿದ್ದ ಕಾರ್ಖಾನೆ ನಿರ್ದೇಶಕ ವೀರಣ್ಣ ಎಚ್.ಪಾಟೀಲ ಅತ್ಯಂತ ಹಳೆಯದಾದ ಈ ಕಾರ್ಖಾನೆ ಜೀವಂತಿಕೆಗೆ ಸಹಕಾರ ಅವಶ್ಯಕ. ಈ ನಿಟ್ಟಿನಲ್ಲಿ ಎಲ್ಲ ಸದಸ್ಯರು ವೈಯಕ್ತಿಕ ಭಿನ್ನಾಭಿಪ್ರಾಯ ಬದಿಗೊತ್ತಿ ಅಭಿವೃದ್ಧಿಗೆ ಶ್ರಮಿಸಲು ಸಿದ್ಧರಿರುವುದಾಗಿ ತಿಳಿಸಿದರು. ಹೆಚ್ಚಿನ ಇಳುವರಿ ಸಂಬಂಧ ಗುಣಮಟ್ಟದ ಕಬ್ಬು ಬೆಳೆಯಲು ಸಲಹೆ ನೀಡಿದರು.

ಉಪಾಧ್ಯಕ್ಷ ಎಂ.ಜಿ.ಮುಳೆ, ನಿರ್ದೇಶಕ ಬಸವರಾಜ ಆರ್ಯ, ಡಾ.ಪ್ರಕಾಶ ಪಾಟೀಲ, ಗ್ರಾಮ ಪ್ರಮುಖ ಮಲ್ಲಿಕಾರ್ಜುನ ಮುಸ್ತಾಪೂರೆ ಉಪಸ್ಥಿತರಿದ್ದರು. ಕಾರ್ಖಾನೆ ಅಭಿವೃದ್ಧಿ ಅಧಿಕಾರಿ ಬಾಬುರಾವ ಹುಲಸೂರೆ ಸ್ವಾಗತಿಸಿದರು. ವ್ಯವಸ್ಥಾಪಕ ನಿರ್ದೇಶಕ ಬಿ.ಆರ್.ಓಂಪ್ರಕಾಶ ಪ್ರಾಸ್ತಾವಿಕ ಮಾತನಾಡಿದರು. ಝೆರೆಪ್ಪ ಮಣಿಗಿರೆ ನಿರೂಪಿಸಿದರು. ಶಿವಾಜಿ ಗೌಳಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.