ADVERTISEMENT

ಸದಸ್ಯರಿಂದ ಸಾಮಾನ್ಯ ಸಭೆ ಬಹಿಷ್ಕಾರ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 7:30 IST
Last Updated 25 ಫೆಬ್ರುವರಿ 2012, 7:30 IST

ಬೀದರ್: ಬೀದರ್ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ನಡೆಯುತ್ತಿದೆ ಎನ್ನಲಾದ ಅವ್ಯವಹಾರದ ಕುರಿತು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಸಮಿತಿಯ 15 ಜನ ಸದಸ್ಯರು ಸಾಮಾನ್ಯ ಸಭೆ ಬಹಿಷ್ಕರಿಸಿದ ಪ್ರಸಂಗ ನಗರದಲ್ಲಿ ಗುರುವಾರ ನಡೆದಿದೆ.

ಸಮಿತಿಯಿಂದ ಹಲವು ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಆದರೆ, ಕಾಮಗಾರಿಯ ಗುಣಮಟ್ಟದ ಪರಿಶೀಲಿಸದೇ ಹಣ ಮಂಜೂರು ಮಾಡಲಾಗುತ್ತಿದೆ. ಈ ಕುರಿತು ಸಮಸ್ಯೆಯ ಸದಸ್ಯರಿಗೆ ಸಹ ಮಾಹಿತಿ ನೀಡುತ್ತಿಲ್ಲ ಎಂದು ಗಾದಗಿ ಕ್ಷೇತ್ರದ ಸದಸ್ಯ ರಾಜಕುಮಾರ ಕರಂಜಿ ಆರೋಪಿಸಿದರು.

ಸಮಿತಿಯ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಪರ್ಸೆಂಟೇಜ್ ಪಡೆದು ಕಾಮಗಾರಿ ಗುತ್ತಿಗೆ ನೀಡುತ್ತಿದ್ದಾರೆ. ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದ್ದರೂ ಪರಿಶೀಲನೆ ನಡೆಸುತ್ತಿಲ್ಲ ಎಂದು ಆಪಾದಿಸಿದರು.
 ಹೈದರಾಬಾದ್ ರಸ್ತೆಯಲ್ಲಿರುವ ಹಳ್ಳದಕೇರಿ ಬಳಿ ನಿರ್ಮಿಸಲಾದ ಮಾರುಕಟ್ಟೆ ಕಾಮಗಾರಿಗೆ 1. 67 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಮೂರು ತಿಂಗಳ ಹಿಂದೆ 94 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ದೂರಿದರು.

ಅವ್ಯವಹಾರ ನಡೆಯುತ್ತಿದ್ದರೂ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆಪಾದಿಸಿ ಸದಸ್ಯರಾದ ರಾಜಕುಮಾರ ಕರಂಜಿ, ರಾಜರೆಡ್ಡಿ, ಸೂರ್ಯಕಾಂತ ಪಾಟೀಲ್, ಚಂದ್ರಶೇಖರ, ಶಿವರಾಜ ಕುದರೆ, ಚೆನ್ನಮಲ್ಲಪ್ಪ ಸೇರಿದಂತೆ 15 ಜನ ಸದಸ್ಯರು ಸಭೆಯಿಂದ ಹೊರನಡೆದರು.

ದನಗಳಿಗೆ ನೀರು ಕುಡಿಯಲು ನೀರಿನ ತೊಟ್ಟಿ ಹಾಗೂ ರಾಶಿ ಮಾಡುವ ಖಳ ನಿರ್ಮಿಸಲಾಗುತ್ತಿಲ್ಲ. ಮಾರುಕಟ್ಟೆ ಸಮಿತಿಯಿಂದ ನಿರ್ಮಿಸಲಾದ ಮಳಿಗೆಗಳು ಕಳೆದ 5 ವರ್ಷಗಳಿಂದ ಕೃಷಿಯೇತರ ಉದ್ದೇಶಕ್ಕೆ ಬಳಕೆ ಆಗುತ್ತಿವೆ. ಇಂತಹ ಮಳಿಗೆಗಳನ್ನು ಗುರುತಿಸಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿದರು.

ಗಾಂಧಿಗಂಜ್‌ನಲ್ಲಿ ಸಮಿತಿಯಿಂದ ನಿರ್ಮಿಸಲಾಗಿರುವ ಮಳಿಗೆಗಳಲ್ಲಿ ಮಾಲೀಕರು ಕಾನೂನು ಬಾಹೀರವಾಗಿ ನಿರ್ಮಾಣ ಕೆಲಸ ಕೈಗೆತ್ತಿಕೊಳ್ಳುತ್ತಿದ್ದಾರೆ. 17 ರಿಂದ 24(8)ರ ವರೆಗಿನ ಮಳಿಗೆಗಳನ್ನು ಕಾನೂನು ಬಾಹೀರವಾಗಿ ನಿರ್ಮಿಸಲಾಗಿದೆ. ಅದಾಗಿಯು ಈ ಕುರಿತು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆಪಾದಿಸಿದರು. ಹಳೆಯ ನಗರದ ತರಕಾರಿ ಮಾರುಕಟ್ಟೆಯಲ್ಲಿ ಚಿಲ್ಲರೆ ವ್ಯಾಪಾರಿಗಳು ತೂಕದಲ್ಲಿ ರೈತರಿಗೆ ಮೋಸ ಮಾಡುತ್ತಿದ್ದಾರೆ ಎಂದು ಸದಸ್ಯರಾದ ರಾಜರೆಡ್ಡಿ ಸಿರ್ಸೆ ಹಾಗೂ ಜಗನ್ನಾಥರೆಡ್ಡಿ ಆರೋಪಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯದರ್ಶಿಗಳು, ಸಮಿತಿಯಿಂದ ಓರ್ವ ಸಿಬ್ಬಂದಿಯನ್ನು ನೇಮಿಸಿ ಅವ್ಯವಹಾರ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.