ADVERTISEMENT

ಸದ್ಗುರು: ಕನ್ನಡದ ‘ಕಾನ್ವೆಂಟ್‌’ ಶಾಲೆ

ಶೈಕ್ಷಣಿಕ ಅಂಗಳ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2014, 10:02 IST
Last Updated 19 ಮಾರ್ಚ್ 2014, 10:02 IST

ಭಾಲ್ಕಿ: ‘ಜ್ಞಾನಕ್ಕಿಂತ ಮಿಗಿಲಾದ ಸಂಪತ್ತು ಮತ್ತೊಂದಿಲ್ಲ. ನಿನ್ನೊಡವೆ ಎಂಬುದೇ ಜ್ಞಾನರತ್ನ ಎಂದು ಅನುಭವ ಜ್ಞಾನಿ ಅಲ್ಲಮಪ್ರಭುದೇವರು 12ನೇ ಶತಮಾನದಲ್ಲಿ ಹೇಳಿದ್ದಾರೆ. ಶಾಲಾ ಮಾಧ್ಯಮ ಯಾವುದಾದರೇನು? ಓದಿನಲ್ಲಿ ಆಸಕ್ತಿ ಹುಟ್ಟಿಸುವಂಥ ವಾತಾವರಣ ಅಗತ್ಯ...’ ಇಂತಹ ಹಲವು  ನುಡಿಮುತ್ತು ಹೊತ್ತ ಕನ್ನಡ ಮಾಧ್ಯಮದ ಶಾಲೆಯೊಂದು ಭಾಲ್ಕಿಯಲ್ಲಿ ಕೆಲವೇ ವರ್ಷಗಳಲ್ಲಿ ಜನರ ಗಮನ ಸೆಳೆದಿದೆ.

ಕನ್ನಡದ ಪಟ್ಟದ್ದೇವರೆಂದೇ ಖ್ಯಾತಿ ಪಡೆದಿದ್ದ ಶತಾಯುಷಿ ಲಿಂ.ಡಾ. ಚನ್ನಬಸವ ಪಟ್ಟದ್ದೇವರ ಭಾವಚಿತ್ರವುಳ್ಳ ಭಾಲ್ಕಿಯ ಸದ್ಗುರು ವಿದ್ಯಾಲಯದಲ್ಲಿ 1ರಿಂದ 5ನೇ ಮಾಧ್ಯಮದ ವರೆಗೆ ಮತ್ತು 8 ರಿಂದ 10ನೇ ವರೆಗೆ ನಡೆಯುತ್ತಿರುವ ಈ ಶಾಲೆಯಲ್ಲಿ ಪುಟ್ಟ ಪುಟ್ಟ ಮಕ್ಕಳಿಗೆ ಭಾಷಣ, ಹಾಡು, ನೃತ್ಯ, ಪ್ರಯೋಗ, ಪ್ರವಾಸ, ಕವಾಯತು, ಯೋಗ, ವ್ಯಾಯಾಮ  ಮುಂತಾದ ನಿರಂತರ ಚಟುವಟಿಕೆಗಳ ಮೂಲಕ ಪಾಠ ಪ್ರವಚನ ನಡೆಯುತ್ತವೆ.

‘ಶಾಲೆ ಚಿಕ್ಕದಿದ್ದರೂ ಸ್ನಾಕಕೋತ್ತರ ಪದವಿ ಪಡೆದ ಅನುಭವಿ ಶಿಕ್ಷಕಿಯರು ಇಲ್ಲಿದ್ದಾರೆ. ಪ್ರಾಯೋಗಿಕ ಪಾಠಗಳಿಂದಲೇ ಪರಿಣಾಮಕಾರಿ ಬೋಧನೆ ಮತ್ತು ಕಲಿಕೆ ಸಾಧ್ಯ. ಹೀಗಾಗಿ ನಮ್ಮಲ್ಲಿ ಚಟುವಟಿಕೆ ಆಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ’ ಎನ್ನುತ್ತಾರೆ ಈ ಶಾಲೆಯ ಮುಖ್ಯಗುರು ಸುಜಾತಾ ಪಾಟೀಲ.

ಪ್ರತಿ ಶುಕ್ರವಾರ ಮಧ್ಯಾಹ್ನ ಮಕ್ಕಳಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ. ಪ್ರತಿವರ್ಷ ಮಕ್ಕಳ ಶೈಕ್ಷಣಿಕ ಪ್ರವಾಸ, ಕೃಷಿ ತಾಣಗಳ ಭೇಟಿ, ತೋಟದಲ್ಲಿ ಊಟ, ಮಕ್ಕಳ ಆರೋಗ್ಯ ತಪಾಸಣೆ, ರಾಷ್ಟ್ರೀಯ ಹಬ್ಬಗಳ ಆಚರಣೆ, ಅದ್ದೂರಿ ವಾರ್ಷಿಕೋತ್ಸವ, ಕ್ರೀಡಾ ಸ್ಪರ್ಧೆಗಳು, ಕ್ವಿಜ್‌, ವಾರದ ಟೆಸ್ಟ್‌, ಮಾಸಿಕ ಪರೀಕ್ಷೆ ಹೀಗೆ ಎಲ್ಲದರಲ್ಲೂ ಪಠ್ಯವನ್ನು ಜೋಡಿಸುವುದು ಈ ಶಾಲೆಯ ವಿಶೇಷತೆ.

ಇಂದಿನ  ಸ್ಪರ್ಧಾ ಜಗತ್ತಿನಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಗೆ ಇಂಗ್ಲಷ್‌ ಪಬ್ಲಿಕ್‌ ಸ್ಕೂಲ್‌ಗಳು ಭಾರಿ ಪೈಪೋಟಿ ನೀಡಿವೆ. ಶಾಲಾ ಶುಲ್ಕ ಎಷ್ಟಾದರೂ ಚಿಂತೆ ಇಲ್ಲ ಎಂಬ ಧೋರಣೆಯುಳ್ಳ ಪಾಲಕರು ಶಾಲೆಯ ನಿಗದಿತ ಶುಲ್ಕವನ್ನು ಸಕಾಲಕ್ಕೆ ತುಂಬುತ್ತಾರೆ. ಆದರೆ ಕನ್ನಡ ಮಾಧ್ಯಮದ ಶಾಲೆಗಳು ಗುಣಮಟ್ಟದಲ್ಲಿ ಎಷ್ಟೇ ಮುಂದಿದ್ದರೂ ಆರ್ಥಿಕ ತೊಂದರೆಯಲ್ಲಿ ನರಳುವ ಪರಿಸ್ಥಿತಿ ಇದೆ.

ಆದರೂ ಗ್ರಾಮೀಣ ಭಾಗದ ಮಧ್ಯಮ ಮತ್ತು ಕೆಳವರ್ಗದ ಮಕ್ಕಳಿಗೆ ಗುಣಮಟ್ಟದ, ಮೌಲ್ಯಾಧಾರಿತ ಶಿಕ್ಷಣ ನೀಡಬೇಕು ಎನ್ನುವ ಗುರಿಯೊಂದಿಗೆ ಸದ್ಗುರು ಶಾಲೆ ನಡೆಸುತ್ತಿದ್ದೇವೆ ಎನ್ನುತ್ತಾರೆ ಸಂಸ್ಥೆಯ ಕಾರ್ಯದರ್ಶಿ ಎಂ.ಎಸ್‌ ಲಕ್ಷ್ಮಿ .  380 ಮಕ್ಕಳು ಈ ಶಾಲೆಯಲ್ಲಿ ಓದುತ್ತಿದ್ದಾರೆ. ಪ್ರತಿ ತಿಂಗಳೂ ಒಂದೊಂದು ಗ್ರಾಮದಲ್ಲಿ ಪಾಲಕರ ಸಭೆ ಕರೆದು ಮಕ್ಕಳ ಕಲಿಕಾ ಪ್ರಗತಿಯ ಬಗ್ಗೆ ಚರ್ಚಿಸಿ ಜನರ ಸಹಭಾಗಿತ್ವ ಹೊಂದಿರುವುದು ಇಲ್ಲಿನ ವಿಶೇಷ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.