ADVERTISEMENT

ಸಮ್ಮೇಳನಾಧ್ಯಕ್ಷರ ಅದ್ಧೂರಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2017, 8:24 IST
Last Updated 31 ಡಿಸೆಂಬರ್ 2017, 8:24 IST

ಬಸವಕಲ್ಯಾಣ: ತಾಲ್ಲೂಕಿನ ಹುಲಸೂರನಲ್ಲಿ ಶನಿವಾರ ಲಿಂ.ಬಸವಕುಮಾರ ಶಿವಯೋಗಿಗಳ 42 ನೇ ಸ್ಮರಣೋತ್ಸವ ಮತ್ತು 16 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಅದ್ಧೂರಿ ಮೆರವಣಿಗೆ ನಡೆಯಿತು.

ಮನೆ ಮುಂಭಾಗ ರಂಗೋಲಿ ಮೂಲಕ ಮೆರವಣಿಗೆಗೆ ಹುಲಸೂರಿನ ಜನತೆ ಭವ್ಯ ಸ್ವಾಗತ ಕೋರಿದರು.

ಸಮ್ಮೇಳನಾಧ್ಯಕ್ಷ ಎಂ.ಜಿ.ದೇಶಪಾಂಡೆ, ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚೆನ್ನಶೆಟ್ಟಿ ಸಾರೋಟದಲ್ಲಿ ಕುಳಿತಿದ್ದರು. ತಳಿರು ತೋರಣಗಳಿಂದ ಸಿಂಗರಿಸಿದ್ದ 20 ಬಂಡಿಗಳು ಪಾಲ್ಗೊಂಡಿದ್ದು ವಿಶೇಷ. ಬಂಡಿಗಳಲ್ಲಿ ಕುವೆಂಪು, ದ.ರಾ.ಬೇಂದ್ರೆ ಒಳಗೊಂಡು ವಿವಿಧ ಸಾಹಿತಿಗಳ ವೇಷಧಾರಿ ಮಕ್ಕಳು ಕುಳಿತಿದ್ದರು.

ADVERTISEMENT

ಇದುವರೆಗೆ ನಡೆದ ಬೀದರ್ ಜಿಲ್ಲಾ ಸಮ್ಮೇಳನಾಧ್ಯಕ್ಷರ ಭಾವಚಿತ್ರಗಳನ್ನು ಒಂದೊಂದು ಬಂಡಿಯಲ್ಲಿ ಇಡಲಾಗಿತ್ತು. ಶಿಕಾರಿಪುರದ ವೀರಗಾಸೆ ತಂಡದವರು, ತುಮಕೂರಿನ ಪೂಜಾ ಕುಣಿತದವರು, ಹಣಮಂತವಾಡಿಯ ಡೊಳ್ಳು ಕುಣಿತದವರು, ಬೇಲೂರ, ಹುಲಸೂರ ಮತ್ತಿತರೆಡೆಯ ಭಜನಾ ತಂಡಗಳು, ಅಕ್ಕನ ಬಳಗದವರು, ಬಸವಕುಮಾರೇಶ್ವರ ಪ್ರಾಥಮಿಕ ಶಾಲೆ, ರಘುನಾಥ ಮಹಾರಾಜ ಪ್ರಾಥಮಿಕ ಶಾಲೆ, ಇಕ್ಬಾಲ್ ಪ್ರಾಥಮಿಕ ಶಾಲೆ ಮಕ್ಕಳು ಲೇಜೀಮ್ ಪ್ರದರ್ಶಿಸಿದರು.

ಯುವಕರು ಕುಣಿಯುವ ಮೂಲಕ ಮೆರವಣಿಗೆಗೆ ಮತ್ತಷ್ಟು ಮೆರುಗು ತಂದರು. ಎಲ್ಲೆಲ್ಲೂ ಸಂಭ್ರಮದ ವಾತಾವರಣ ಎದ್ದು ಕಂಡಿತು. ಮಹಿಳೆಯರು, ಮಕ್ಕಳು ಸಹ ಪಾಲ್ಗೊಂಡಿದ್ದರು.

ಗ್ರಾಮದ ಪೂರ್ವಕ್ಕಿರುವ ಚೌಕಿಮಠದಿಂದ ಗುರುಬಸವೇಶ್ವರ ಸಂಸ್ಥಾನ ಮಠದವರೆಗೂ ಮೆರವಣಿಗೆ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜಶೇಖರ ವಟಗೆ ಉದ್ಘಾಟಿಸಿದರು. ಉಪ ವಿಭಾಗಾಧಿಕಾರಿ ಶರಣಬಸಪ್ಪ ಕೊಟ್ಟಪ್ಪಗೋಳ, ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚೆನ್ನಶೆಟ್ಟಿ, ಗೌರವಾಧ್ಯಕ್ಷ ಬಸವರಾಜ ಬಲ್ಲೂರ, ದೇವೇಂದ್ರ ಕರಂಜೆ, ಶಿವಲೀಲಾ ಮಠಪತಿ, ಬಸವರಾಜ ಕೌಠೆ, ಜಿಲ್ಲಾ ಪಂಚಾಯಿತಿ ಸದಸ್ಯ ಸುಧೀರ ಕಾಡಾದಿ, ಮಾಜಿ ಸದಸ್ಯರಾದ ಅನಿಲಕುಮಾರ ಭೂಸಾರೆ, ಲತಾ ಹಾರಕೂಡೆ, ತಾಲ್ಲೂಕು ಪಂಚಾಯಿತಿ ಸದಸ್ಯ ಗೋವಿಂದರಾವ ಸೋಮವಂಶಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಲಾ ಡೊಣಗಾಪುರೆ, ಉಪಾಧ್ಯಕ್ಷ ಮಲ್ಲಾರಿ ವಾಘಮಾರೆ, ರಾಜಕುಮಾರ ನಿಡೋದೆ, ಶಾಂತಲಿಂಗ ಮಠಪತಿ, ಎಂ.ಜಿ.ರಾಜೋಳೆ, ಚಂದ್ರಕಾಂತ ದೇಟ್ನೆ, ಶಂಕರ ಕುಕ್ಕಾ ಪಾಟೀಲ, ಜಗನ್ನಾಥ ಚಿಲ್ಲಾಬಟ್ಟೆ, ಚಂದ್ರಶೇಖರ ಕಾಡಾದಿ ಮುಂತಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.