ADVERTISEMENT

ಸಮ್ಮೇಳನ ಯಾವ ಪುರುಷಾರ್ಥಕ್ಕೆ?

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2011, 5:30 IST
Last Updated 14 ಮಾರ್ಚ್ 2011, 5:30 IST

ಬೀದರ್: ರಾಜ್ಯದ 14 ಜಿಲ್ಲೆಗಳಲ್ಲಿ ನೆರೆ ಹಾವಳಿಯಿಂದ ಸಂತ್ರಸ್ತರಾದ ಜನ ಟಿನ್ ಶೆಡ್‌ಗಳಲ್ಲಿ ವಾಸಿಸುತ್ತಿರುವಾಗ ಸರ್ಕಾರ 37 ಕೋಟಿ ರೂಪಾಯಿ ಖರ್ಚು ಮಾಡಿ ವಿಶ್ವ ಕನ್ನಡ ಸಮ್ಮೇಳನ ಮಾಡಿದ್ದು ಯಾವ ಪುರುಷಾರ್ಥಕ್ಕಾಗಿ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿ. ಪರಮೇಶ್ವರ ಪ್ರಶ್ನಿಸಿದರು.ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಭಾನುವಾರ ಬೀದರ್‌ನಲ್ಲಿ ಏರ್ಪಡಿಸಿದ್ದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಶತಮಾನೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.


ವಿಶ್ವ ಕನ್ನಡ ಸಮ್ಮೇಳನಕ್ಕೆ ಖರ್ಚು ಮಾಡಿದ ಹಣವನ್ನೇ ಸಂಕಷ್ಟದಲ್ಲಿ ಇರುವ ಬಡವರಿಗೆ, ನಿರಾಶ್ರಿತರಿಗೆ ಮನೆ ಕಟ್ಟಿ ಕೊಡುವುದಕ್ಕಾಗಿ ಬಳಸುವುದಾಗಿದ್ದರೆ ಅದಕ್ಕೊಂದು ಅರ್ಥ ಇರುತ್ತಿತ್ತು ಎಂದ ಅವರು ಈ ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿ ಇಲ್ಲ ಎಂದು ತರಾಟೆಗೆ ತೆಗೆದುಕೊಂಡರು.ರಾಜ್ಯದಲ್ಲಿ ವಿತರಿಸಲಾಗಿರುವ 95 ಲಕ್ಷ ಬಿಪಿಎಲ್ ಕಾರ್ಡ್‌ಗಳ ಪೈಕಿ 40 ಲಕ್ಷ ಕಾರ್ಡ್‌ಗಳು ನಕಲಿ ಎಂದು ಸರ್ಕಾರವೇ ಒಪ್ಪಿಕೊಂಡಿದೆ. ರಾಜ್ಯದಲ್ಲಿ ಅರ್ಹರಿಗೆ ಬಿಪಿಎಲ್ ಕಾರ್ಡ್ ವಿತರಿಸುವುದು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ಅವರು ಆರೋಪಿಸಿದರು.

ಬೆಕ್ಕಿಗೇ ಹಾಲು ಕಾಯಲು ಹೇಳಿದಂತೆ:ರಾಜ್ಯದಲ್ಲಿ ಯಡಿಯೂರಪ್ಪನವರಿಗೆ ಅಧಿಕಾರ ನೀಡಿರುವುದು ಬೆಕ್ಕಿಗೇ ಹಾಲು ಕಾಯಲು ಹಚ್ಚಿದಂತಾಗಿದೆ ಎಂದು ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ. ಪ್ರಭಾ ಠಾಕೂರ್ ಕುಟುಕಿದರು.

ಬಡವರ ಬೆವರಿನ ಫಲದಿಂದ ಬಂದ ಫಲ ಹಾಲು. ಅಧಿಕಾರದಲ್ಲಿ ಇರುವ ಬೆಕ್ಕುಗಳ ಪಾಲಾದರೆ ಹೇಗೆ? ಬಡವರ ಮತ್ತು ಮಹಿಳೆಯರ ಗತಿ ಏನು? ಎಂದು ಅವರು ಪ್ರಶ್ನಿಸಿದರು.
ಕೇಂದ್ರದಲ್ಲಿ 2ಜಿ ಹಗರಣಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಿರುವ ಬಿಜೆಪಿ ಸ್ವಜನ ಪಕ್ಷಪಾತ, ಅಕ್ರಮ ಮಾಡುತ್ತಿರುವ ಯಡಿಯೂರಪ್ಪನವರನ್ನು ಬೆಂಬಲಿಸುತ್ತಿದೆ. ಬಿಜೆಪಿಗೇನು ಎರಡು ನಾಲಿಗೆ ಇದೆಯಾ? ಎಂದು ತರಾಟೆಗೆ ತೆಗೆದುಕೊಂಡರು.ಕೇಂದ್ರದ ಹಣವನ್ನೇ ಖರ್ಚು ಮಾಡಲಾಗದ ರಾಜ್ಯ ಸರ್ಕಾರ ಸುಳ್ಳುಗಳನ್ನೇ ನಂಬುವಂತೆ ಹೇಳುವುದರಲ್ಲಿ ನಿರತವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.

ಬೀದರ್ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ ಮೀನಾಕ್ಷಿ ಸಂಗ್ರಾಮ ಅವರು ಜಿಲ್ಲೆಯಲ್ಲಿ ಮಹಿಳಾ ಸಹಕಾರ ಬ್ಯಾಂಕ್ ತೆರೆಯಲು ಉದ್ದೇಶಿಸಲಾಗಿದೆ ಎಂದು ಹೇಳಿದರು. ಸಂಸದ ಎನ್. ಧರಂಸಿಂಗ್, ಶಾಸಕರಾದ ರಹೀಮ್‌ಖಾನ್, ಕಾಜಿ ಅರ್ಷದ್ ಅಲಿ, ರಾಜ್ಯ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ನಾಯ್ಡು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಎಐಸಿಸಿ ಸದಸ್ಯೆ ಗುರಮ್ಮ ಸಿದ್ಧಾರೆಡ್ಡಿ ಸ್ವಾಗತಿಸಿದರು.

ಚಿದಂಬರಂ ಹೇಳಿಕೆ ವೈಯಕ್ತಿಕ: ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವುದಕ್ಕಾಗಿ ಸಂವಿಧಾನದ 371ನೇ ವಿಧಿಗೆ ತಿದ್ದುಪಡಿ ತರುವುದು ಸಾಧ್ಯವಿಲ್ಲ ಎಂದು ಹೇಳಿರುವ ಕೇಂದ್ರ ಗೃಹಸಚಿವ ಚಿದಂಬರಂ ಅವರ ಹೇಳಿಕೆ ಸ್ವಂತ ಅಭಿಪ್ರಾಯವೇ ಹೊರತು ಕೇಂದ್ರ ಸಚಿವ ಸಂಪುಟದ ತೀರ್ಮಾನ ಎಂದು ಜಿ.ಪರಮೇಶ್ವರ ಅವರು ಪತ್ರಿಕಾಗೋಷ್ಠಿಯಲ್ಲಿ ಸಮರ್ಥಿಸಿಕೊಂಡರು.

ಹಿಂದುಳಿದ ಪ್ರದೇಶದ ಅಭಿವೃದ್ಧಿಗೆ ಸಂವಿಧಾನದ ತಿದ್ದುಪಡಿ ಅತ್ಯಗತ್ಯವಾಗಿದ್ದು ಈ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯುವುದಕ್ಕಾಗಿ ಪ್ರಧಾನಿ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಲಾಗುತ್ತದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಯಡಿಯೂರಪ್ಪ ನೇತೃತ್ವದ ಸರ್ಕಾರವು 371ನೇ ವಿಧಿ ತಿದ್ದುಪಡಿಗೆ ಸಂಬಂಧಿಸಿದಂತೆ ಸರ್ವಪಕ್ಷಗಳ ನಿಯೋಗ ತೆಗೆದುಕೊಂಡು ಹೋಗದೇ ಇರುವುದು ಬಹುದೊಡ್ಡ ಲೋಪ. ಕೇಂದ್ರ ಸರ್ಕಾರದ ಗಮನ ಸೆಳೆಯುವಲ್ಲಿ ರಾಜ್ಯ ಸರ್ಕಾರ ವಿಫಲ ಆಗಿರುವುದರಿಂದಲೇ ಈ ರೀತಿ ಆಗುತ್ತಿದೆ. ಕೇಂದ್ರದ ಜೊತೆಗೆ ರಾಜ್ಯದ ಸಂಬಂಧ ಸರಿ ಇಲ್ಲ ಎನ್ನುವುದನ್ನು ಇದು ತೋರಿಸುತ್ತದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT