ADVERTISEMENT

ಸರ್ಕಲ್ ಇನ್‌ಸ್ಪೆಕ್ಟರ್ ಬಸವೇಶ್ವರ ಹೀರಾ ವರ್ಗಾವಣೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2012, 7:30 IST
Last Updated 6 ಮಾರ್ಚ್ 2012, 7:30 IST

ಹುಮನಾಬಾದ್: ತಾಲ್ಲೂಕಿನ ಚಿಟಗುಪ್ಪದ ಪೊಲೀಸ್ ವೃತ್ತ ನಿರೀಕ್ಷಕ ಬಸವೇಶ್ವರ ಹೀರಾ ಅವರನ್ನು ತಕ್ಷಣ ವರ್ಗಾವಣೆ ಮಾಡಬೇಕು ಎಂದು ಚಿಟಗುಪ್ಪ ನಾಗರಿಕ ಸಮಿತಿ ಪದಾಧಿಕಾರಿಗಳು ಸೋಮವಾರ ಈಶಾನ್ಯ ವಲಯ ಪೊಲೀಸ್ ಮಹಾನಿರೀಕ್ಷಕ ಎಂ.ಡಿ.ವಜೀರ ಅಹ್ಮದ್ ಅವರನ್ನು ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಒತ್ತಾಯಿಸಿದರು.

ಹೀರಾ ಅವರು ತೊಂದರೆ ಕೊಡುತ್ತಿರುವುದು ಉಳ್ಳವರಿಗಲ್ಲ, ನಿತ್ಯ ಕಾಯಕ ಮಾಡಿ ಬಂದ ಹಣದಲ್ಲಿ ಉಪಜೀವನ ಸಾಗಿಸುವ ಕಡು ಬಡವರನ್ನು. ಆದರೇ ಇಲ್ಲಿ ಬಂದ ಸಮಿತಿ ಬಹುತೇಕ ಮಂದಿ ಉಳ್ಳವರೇ ಆಗಿದ್ದೇವೆ. ಬಡವರ ಮೇಲೆ ಪ್ರಹಾರ ನಡೆಸಿ, ಸಾವಿರಾರು ರೂಪಾಯಿ ಕೊಳ್ಳೆ ಹೊಡೆಯಲು
ಹೊರಟಿರುವ ಸರ್ಕಲ್ ಇನ್‌ಸ್ಪೆಕ್ಟರ್ ನಮಗೆ ಬೇಕಾಗಿಲ್ಲ. ಬಸವಣ್ಣ ನಾಡಿನಲ್ಲಿ ಬಸವೇಶ್ವರ ಹೀರಾ ಹೆಸರಿನಿಂದ ಸೇವೆ ಸಲ್ಲಿಸುತ್ತಿರುವ ಹೀರಾ ಆ ಹೆಸರಿಗೆ ಕಳಂಕ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪಿಸಿದರು.

ಚಿಟಗುಪ್ಪ ತಾಲ್ಲೂಕು ಅಥವಾ ಜಿಲ್ಲಾ ಕೇಂದ್ರವಲ್ಲ. ಪುರಸಭೆಯನ್ನು ಹೊಂದಿರುವ ಈ ಊರಿನಲ್ಲಿ ಮಹಾನಗರಗಳಂತೆ ಸಂಚಾರ ನಿಯಮ ಪಾಲಿಸುವುದು ಕಷ್ಟ. ಅದೂ ಉಳ್ಳವರಿಗೆ ಹೇರಿದರೆ ಹೇಗೋ ಕಟ್ಟಬಹುದು. ಎರಡು ಹೊತ್ತಿನ ಕೂಳಿಗೆ ದಿಕ್ಕಿಲ್ಲದ ಬಡವರು ಎಲ್ಲಿಂದ ಇವರ ಜೇಬು ತುಂಬಲು ಸಾಧ್ಯ ಎಂದು ಪುರಸಭೆ ಅಧ್ಯಕ್ಷ ದಿಲೀಪಕುಮಾರ ಬಗದಲ್, ಮಾಜಿ ಅಧ್ಯಕ್ಷ ಬಾಬಾ ಬುಖಾರಿ, ಶ್ರಿಕಾಂತರಾವ ಚಿಟಗುಪ್ಪಕರ್, ಅನೀಲ ಜೋಷಿ, ಬಸವರಾಜ ಪಾಟೀಲ, ಸೂರ್ಯಕಾಂತ ಮಠಪತಿ ಮೊದಲಾದವರು
ಐ.ಜಿ ಎಂ.ಡಿ.ವಜೀರ ಅಹ್ಮದ್ ಅವರನ್ನು ಪ್ರಶ್ನಿಸಿದರು.
 
ಅವರ ಸೇವೆ ಬಗ್ಗೆ ತಮಗೆ ವಿಶ್ವಾಸ ಇದ್ದರೇ ಬಡ್ತಿನೀಡಿ ಬೇರೆ ಊರಿಗೆ ಕಳಿಸಿ, ನಮಗೆ ಇಂಥ ಅಧಿಕಾರಿ ಬೇಕಾಗಿಲ್ಲ ಎಂದು ಮನವಿ ಮಾಡಿದರು. ಅದೇ ಹುಮನಾಬಾದ್ ಸಂಚಾರ ಠಾಣೆ ಸಬ್ ಇನ್‌ಸ್ಪೆಕ್ಟರ್ ಖಾಜಾ ಹುಸೇನ್ ಜನರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ ಎಂದು ಗುತ್ತಿಗೆದಾರ ಫಯಾಜ್ ಅವರು ಐ.ಜಿಗೆ ತಿಳಿಸಿದರು.

15ದಿನ ಕಾಲಾವಕಾಶ: ಮನವಿ ಆಲಿಸಿದ ವಲಯ ಪೊಲೀಸ್ ಮಹಾನಿರ್ದೇಶಕರು- ಚಿಟಗುಪ್ಪ ಚಿಕ್ಕ ಪಟ್ಟಣದ ಹೆಚ್ಚಿನ ಸಂಚಾರ ದಟ್ಟಣಿಯೂ ಇಲ್ಲ. ನೀವು ಹೇಳುವ ಹಾಗೆ ಹೀರಾ ವರ್ತನೆ ಸರಿ ಎಂಬುದು ಸಾಬೀತಾದಲ್ಲಿ ವಿಚಾರಣೆ ನಡೆಸುತ್ತೇನೆ. ಅದಕ್ಕೆ 15ದಿನ ಕಾಲಾವಕಾಶ ನೀಡಿ, ಎಂದರು. ಅವರನ್ನು ವರ್ಗಾವಣೆ ಮಾಡುವ ಅಧಿಕಾರ ನನಗೆ ಇಲ್ಲ. ಜನತೆ ಆರೋಪ ಸತ್ಯ ಎಂದು ಕಂಡುಬಂದಲ್ಲಿ ಅಗತ್ಯ ಬಿದ್ದರೇ ಅಮಾನತ್ತಿನಲ್ಲಿ ಇಡುವ ಅಧಿಕಾರ ನನಗೆ ಇದೆ. ಯಾವುದಕ್ಕೂ ವಿಚಾರಣೆ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

ಮಲ್ಲಿಕಾರ್ಜುನ ಪಾಟೀಲ, ವಿಜಯಕುಮಾರ ಬಮ್ಮಣ್ಣಿ, ಸುರೇಶ ಕುಂಬಾರ, ರೇವಣಪ್ಪ ಹೋಗಾರ, ಮುಜಾಫರ್ ಪಟೇಲ ಸೇರಿ ನಾಗರಿಕ ಸಮಿತಿಯ 30ಕ್ಕೂ ಅಧಿಕ ಮಂದಿ ಐ,ಜಿ ಅವರಿಗೆ ಸಲ್ಲಿಸಲಾದ ಮನವಿಪತ್ರಕ್ಕೆ ಸಹಿ ಹಾಕಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.