ADVERTISEMENT

ಸೇವೆ ಕಾಯಂಗೆ ಆಗ್ರಹಿಸಿ ಅಂಚೆ ಸಿಬ್ಬಂದಿ ಧರಣಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2012, 7:50 IST
Last Updated 17 ಅಕ್ಟೋಬರ್ 2012, 7:50 IST

ಬೀದರ್: ಸೇವೆ ಕಾಯಂಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮೀಣ ಅಂಚೆ ಸೇವಕರು ಅಖಿಲ ಭಾರತ ಅಂಚೆ ಇಲಾಖೆಯೇತರ ನೌಕರರ ಸಂಘದ ನೇತೃತ್ವದಲ್ಲಿ ನಗರದ ಪ್ರಧಾನ ಅಂಚೆ ಕಚೇರಿ ಎದುರು ಮಂಗಳವಾರ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಆರಂಭಿಸಿದರು.

ಗ್ರಾಮೀಣ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂಚೆ ನೌಕರರನ್ನು ಕಾಯಂಗೊಳಿಸುವವರೆಗೆ ಮುಷ್ಕರ ನಡೆಸಲಾಗುವುದು ಎಂದು ತಿಳಿಸಿದ್ದಾರೆ.ನ್ಯಾಯಮೂರ್ತಿ ತಲ್ವಾರ್ ಸಮಿತಿ ವರದಿ ಹಾಗೂ ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಅಂಚೆ ಇಲಾಖೆಯಲ್ಲಿ ಐದು ತಾಸಿಗೂ ಅಧಿಕ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಕಾಯಂ ಮಾಡಬೇಕು. ಇಲಾಖೆ ನೌಕರರಂತೆ ರೂ. 3,500 ಬೋನಸ್ ನೀಡಬೇಕು.

ಸದ್ಯ ಜಾರಿಯಲ್ಲಿ ಇರುವ ಅನುಕಂಪ ಆಧಾರಿತ ನೇಮಕಾತಿ ಪದ್ಧತಿಯನ್ನು ಕೈಬಿಟ್ಟು ಹಿಂದಿನಂತೆ ವಾರಸುದಾರರನ್ನೇ ನೇಮಕ ಮಾಡಬೇಕು. ಖಾಲಿ ಇರುವ ಗ್ರಾಮೀಣ ಅಂಚೆ ಸೇವಕ ಹುದ್ದೆಗಳನ್ನು ತುಂಬಬೇಕು. ವೇತನ ಕಡಿತ ನಿಲ್ಲಿಸಬೇಕು. ತಡೆ ಹಿಡಿಯಲಾದ ವೇತನ ಬಿಡುಗಡೆ ಮಾಡಬೇಕು.

ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ ಜಾರಿಗೆ ಕೇಂದ್ರ ಸಚಿವ ಸಂಪುಟದ ಅನುಮೋದನೆ ಪಡೆಯಬೇಕು. 2006 ರಿಂದ ಅನ್ವಯವಾಗುವಂತೆ ದಿನಗೂಲಿ ನೌಕರರ ವೇತನ ಪರಿಷ್ಕರಿಸಬೇಕು ಎಂಬುದು ಪ್ರಮುಖ ಬೇಡಿಕೆಗಳಾಗಿವೆ.ಸಂಘದ ಅಧ್ಯಕ್ಷ ಸಂತೋಷ್ ಎಸ್. ಪಾಟೀಲ್, ಉಪಾಧ್ಯಕ್ಷ ಶರಣಯ್ಯ ಸ್ವಾಮಿ, ಕಾರ್ಯದರ್ಶಿ ಶ್ರೀನಿವಾಸ ಕುಲಕರ್ಣಿ ಮೊದಲಾದವರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.