ADVERTISEMENT

ಹಣಕುಣಿಯಲ್ಲಿ ಅಭಿವೃದ್ದಿ ಕುಂಠಿತ

ಶಶಿಕಾಂತ ಭಗೋಜಿ
Published 28 ನವೆಂಬರ್ 2017, 6:41 IST
Last Updated 28 ನವೆಂಬರ್ 2017, 6:41 IST
ಹುಮನಾಬಾದ್ ತಾಲ್ಲೂಕು ಹಣಕುಣಿ ಗ್ರಾಮದ ಪ್ರಮುಖ ಮಾರ್ಗದಲ್ಲಿ ಚರಂಡಿ ಸೌಲಭ್ಯ ಇಲ್ಲದ ಕಾರಣ ತ್ಯಾಜ್ಯ ರಸ್ತೆಬದಿ ಸಂಗ್ರಹಗೊಂಡಿರುವುದು
ಹುಮನಾಬಾದ್ ತಾಲ್ಲೂಕು ಹಣಕುಣಿ ಗ್ರಾಮದ ಪ್ರಮುಖ ಮಾರ್ಗದಲ್ಲಿ ಚರಂಡಿ ಸೌಲಭ್ಯ ಇಲ್ಲದ ಕಾರಣ ತ್ಯಾಜ್ಯ ರಸ್ತೆಬದಿ ಸಂಗ್ರಹಗೊಂಡಿರುವುದು   

ಹುಮನಾಬಾದ್: ಗ್ರಾಮದ ಮುಖ್ಯ ರಸ್ತೆ ಸೇರಿದಂತೆ ಬಹುತೇಕ ಓಣಿಗಳಲ್ಲಿ ಹರಡಿರುವ ತ್ಯಾಜ್ಯ, ಹೂಳುತುಂಬಿಕೊಂಡ ಚರಂಡಿಯಿಂದಾಗಿ ರಸ್ತೆಯ ಮಧ್ಯೆಯೇ ಹರಿಯುವ ಚರಂಡಿ ನೀರು, ಉರಿಯದ ಬೀದಿ ದೀಪ, ಇವು ತಾಲ್ಲೂಕಿನ ಸಿಂಧನಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹಣಕುಣಿ ಗ್ರಾಮದಲ್ಲಿ ಕಂಡು ಬರುವ ಸಮಸ್ಯೆಗಳು.

ರಸ್ತೆಬದಿ ಯಥೇಚ್ಛವಾಗಿ ಸಂಗ್ರಹಗೊಳ್ಳುವ ತ್ಯಾಜ್ಯದ ಸಂಗ್ರಹದಿಂದಾಗಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಿಸುತ್ತಿದ್ದಾರೆ ಗ್ರಾಮಸ್ಥರು. ಈ ಗ್ರಾಮದಲ್ಲಿ ಪಶುಗಳಿಗೆ ಕಾಯಿಲೆ ಬಂದರೆ 7 ಕಿ.ಮೀ ದೂರದ ಇಟಗಾ ಅಥವಾ ಅಷ್ಟೇ ಅಂತರದಲ್ಲಿನ ಹುಮನಾಬಾದ್‌ ತಾಲ್ಲೂಕು ಕೇಂದ್ರಕ್ಕೆ ಹೋಗಬೇಕಾದ ಅನಿವಾರ್ಯತೆ ಇದೆ. ಇಂಥ ಹತ್ತು ಹಲವು ಸಮಸ್ಯೆಗಳನ್ನು ಗ್ರಾಮಸ್ಥರು ಎದುರಿಸುತ್ತಿದ್ದಾರೆ,

ಕಬ್ಬು, ಭತ್ತ ಈ ಗ್ರಾಮದ ಮುಖ್ಯ ಬೆಳೆಗಳು. ಜೊತೆಗೆ ಚಿಕ್ಕ ಗ್ರಾಮದಲ್ಲಿ ಹೈನುಗಾರಿಕೆಯನ್ನೇ ನಂಬಿದ 50ಕ್ಕೂ ಅಧಿಕ ಮಂದಿ ನಿತ್ಯ ತಾಲ್ಲೂಕು ಕೇಂದ್ರಕ್ಕೆ ಹಾಲು ಸಾಗಿಸಿ ಉಪಜೀವನ ಸಾಗಿಸುತ್ತಾರೆ. ಗ್ರಾಮದಲ್ಲಿ ಪ್ರಾಥಮಿಕ ಶಾಲೆಗೆ ಕ್ರೀಡಾ ಮೈದಾನ ಕೊರತೆ ಕಾಡುತ್ತಿದೆ. ಸಮಪರ್ಕ ಬೀದಿ ದೀಪ ಅಳವಡಿಸದ ಕಾರಣ ಕೆಲ ಓಣಿಗಳಲ್ಲಿ ರಾತ್ರಿ ಹೊತ್ತು ಸಂಚರಿಸುವುದು ದುಸ್ತರವಾಗಿದೆ.

ADVERTISEMENT

‘ವಿವಿಧ ವಸತಿ ಯೋಜನೆ ಅಡಿಯಲ್ಲಿ ನಿರ್ಗತಿಕರಿಗೆ ಮನೆ ನೀಡದೇ ಅನರ್ಹರಿಗೆ ವಿತರಿಸಿದ್ದಾರೆ. ಹಣಕುಣಿ ಗ್ರಾಮದಲ್ಲಿ ಏಳು ಮಂದಿ ಗ್ರಾಮ ಪಂಚಾಯಿತಿ ಸದಸ್ಯರಿದ್ದರೂ ಅಭಿವೃದ್ದಿ ಬಗ್ಗೆ ಯಾರೊಬ್ಬರಿಗೂ ನೈಜ ಕಾಳಜಿ ಇಲ್ಲ. ಗ್ರಾಮದ ಅಭಿವೃದ್ದಿಗೆ ಒತ್ತು ನೀಡುತ್ತಿಲ್ಲ. ಇದರಿಂದ ಗ್ರಾಮದ ಬಹುತೇಕ ಅಭಿವೃದ್ದಿ ಕೆಲಸ ಕುಂಠಿತಗೊಂಡಿವೆ’ ಎಂದು ಗ್ರಾಮದ ಲಕ್ಷ್ಮಣರಾವ, ಶಿವಕುಮಾರ ಮತ್ತು ಸುಶೀಲಾಬಾಯಿ ಆರೋಪಿಸುತ್ತಾರೆ.

ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿರುವುದರಿಂದ ಗ್ರಾಮದ ಯುವಕರು ಮದ್ಯ ಸೇವಿಸಿ, ಬಾಟಲ್‌ಗಳನ್ನು ರಸ್ತೆಮಧ್ಯ ಬೀಸಾಡುತ್ತಿರುವ ಕಾರಣ ನಿತ್ಯ ಅದೆಷ್ಟೋ ದ್ವಿಚಕ್ರವಾಹನ ಪಂಕ್ಚರ್‌ ಆಗುತ್ತಿವೆ. ಬೇರೆ ಊರುಗಳಿಂದ ಬರುವ ಜನರು ಇದನ್ನು ಕಂಡು ಹಿಡಿಶಾಪ ಹಾಕುತ್ತಿದ್ದಾರೆ.

* * 

ಪಂಚಾಯಿತಿಗೆ ಬಿಡುಗಡೆ ಆಗುವ ಅನುದಾನ ಕುಡಿಯುವ ನೀರು, ಬೀದಿ ದೀಪ, ಚರಂಡಿ ಸ್ವಚ್ಛತೆಗೆ ಸರಿ ಹೋಗುತ್ತದೆ. ಹೊಸ ಚರಂಡಿ, ಸಿಸಿ ರಸ್ತೆ ನಿರ್ಮಾಣಕ್ಕೆ ಶಾಸಕರ ಅನುದಾನ ನೀಡುವಂತೆ ಮನವಿ ಮಾಡಲಾಗುವುದು.
ಡಾ.ಗೋವಿಂದ
ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.