ADVERTISEMENT

ಹತ್ತರ್ಗಾದಲ್ಲಿ ನೀರಿನ ಭೀಕರ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2012, 10:20 IST
Last Updated 29 ಏಪ್ರಿಲ್ 2012, 10:20 IST
ಹತ್ತರ್ಗಾದಲ್ಲಿ ನೀರಿನ ಭೀಕರ ಸಮಸ್ಯೆ
ಹತ್ತರ್ಗಾದಲ್ಲಿ ನೀರಿನ ಭೀಕರ ಸಮಸ್ಯೆ   

ಬಸವಕಲ್ಯಾಣ: ತಾಲ್ಲೂಕಿನ ಮಹಾರಾಷ್ಟ್ರ ಗಡಿಯಲ್ಲಿನ ಹತ್ತರ್ಗಾ ಗ್ರಾಮದಲ್ಲಿ ಜನಪ್ರತಿನಿಧಿಗಳ, ಜಿಲ್ಲಾ ಪಂಚಾಯಿತಿ ಎಂಜಿನಿಯರ್‌ರ ಮತ್ತು ಗುತ್ತಿಗೆದಾರರ ನಿರ್ಲಕ್ಷದಿಂದಾಗಿ ನೀರಿನ ಭೀಕರ ಸಮಸ್ಯೆ ಉದ್ಭವವಾಗಿದೆ. ಸಮಸ್ಯೆ ಬಗೆಹರಿಸಲು ಗ್ರಾಮಸ್ಥರು ಒಂದು ವಾರದಿಂದ ಪರದಾಡುತ್ತಿದ್ದರೂ ಯಾರೂ ಲಕ್ಷ ಕೊಡುತ್ತಿಲ್ಲ ಎಂಬ ದೂರು ಕೇಳಿಬರುತ್ತಿದೆ.

ಈ ಗ್ರಾಮ ಬೆಣ್ಣೆತೊರೆ ನದಿ ದಂಡೆಯಲ್ಲಿದ್ದು, ಸಂಬಂಧಿತರ ನಿರ್ಲಕ್ಷತನದಿಂದಾಗಿ ಕೆಲ ದಿನಗಳಿಂದ ಇಲ್ಲಿನ ಜನರು ನದಿಯಲ್ಲಿ ತಗ್ಗು ತೋಡಿ ನೀರು ತರಬೇಕಾಗುತ್ತಿದೆ. ಗೃಹ ಬಳಕೆಗೆ ಅಷ್ಟೇ ಅಲ್ಲ: ಅಂತಹದ್ದೇ ನೀರು ಕುಡಿಯಬೇಕಾಗುತ್ತಿದೆ.

ಇಲ್ಲಿನ ನೀರು ಸರಬರಾಜು ಯೋಜನೆಯ ಕೊಳವೆ ಬಾವಿಗೆ ಸಾಕಷ್ಟು ಪ್ರಮಾಣದಲ್ಲಿ ನೀರಿಲ್ಲ. ಅಲ್ಲದೆ ಅದರ ಮೋಟರ್ ಕೆಟ್ಟಿದ್ದರಿಂದ ಸಮಸ್ಯೆಯಾಗಿದೆ. ಇಲ್ಲಿ ಕಳೆದ ವರ್ಷ ಕೊರೆದ ಕೊಳವೆ ಬಾವಿಗೆ ಸಾಕಷ್ಟು ನೀರಿದ್ದು ಅದರಿಂದ ಪೈಪಲೈನ್ ಮಾಡಿಸಿದರೆ ಸಮಸ್ಯೆ ಬಗೆಹರಿಯುತ್ತದೆ ಎಂದು ಗ್ರಾಮಸ್ಥರು ಅನೇಕ ಸಲ ಅಧಿಕಾರಿಗಳಿಗೆ ವಿನಂತಿಸಿದರೂ ಪ್ರಯೋಜನ ಆಗಿಲ್ಲ. ಅದಕ್ಕಾಗಿ ಹಣ ಮಂಜೂರು ಆಗಿಲ್ಲ ಎಂದು ಹೇಳಲಾಗುತ್ತಿದೆ ಎಂದು ಜನರು ತಿಳಿಸಿದ್ದಾರೆ.

ಇದಲ್ಲದೆ ಸುಮಾರು 2500 ಜನಸಂಖ್ಯೆ ಹೊಂದಿರುವ ಈ ಗ್ರಾಮ, ನೀರಿನ ಸೌಲಭ್ಯ ಕಲ್ಪಿಸಲು ಜಿಲ್ಲಾ ಪಂಚಾಯಿತಿಯಿಂದ 15 ಲಕ್ಷ ರೂಪಾಯಿ ಅನುದಾನ ಒದಗಿಸಿ ಟೆಂಡರ್ ಪ್ರಕ್ರಿಯೆ ಸಹ ಪುರ್ಣಗೊಳಿಸಲಾಗಿದೆ. ಆದರೆ ಗುತ್ತಿಗೆದಾರರು ಕಾಮಗಾರಿ ಕೈಗೊಳ್ಳದೆ ಉದ್ಧಟತನದಿಂದ ವರ್ತಿಸುತ್ತಿದ್ದಾರೆ ಮತ್ತು ದಿನಕ್ಕೊಂದು ಸಬೂಬು ಹೇಳುತ್ತಿದ್ದಾರೆ.

ಜಿಲ್ಲಾ ಪಂಚಾಯಿತಿ ಎಂಜಿನಿಯರ್‌ರಿಗೆ ಸಮಸ್ಯೆ ಬಗೆಹರಿಸಲು ವಿನಂತಿಸಿದರೆ ಟೆಂಡರ್ ಕರೆದಿದ್ದರಿಂದ ಬೇರೆ ವ್ಯವಸ್ಥೆ ಕಲ್ಪಿಸಲು ಬರುವುದಿಲ್ಲ ಎನ್ನುತ್ತಾರೆ. ಗುತ್ತಿಗೆದಾರರಿಗೆ ಕೇಳಿದರೆ ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ಇತರರು ಕಾಮಗಾರಿಗೆ ತಡೆಯೊಡ್ಡಿದ್ದಾರೆ ಎನ್ನುತ್ತಾರೆ ಎಂದು ಗ್ರಾಮದ ಪ್ರಮುಖರು ಹೇಳುತ್ತಾರೆ.

ಹೀಗಾಗಿ ತಂದೆ ತಾಯಿ ಜಗಳದಲ್ಲಿ ಕೂಸು ಬಡವ ಎನ್ನುವಂತಾಗಿದೆ ಜನರ ಪರಿಸ್ಥಿತಿ. ಆದ್ದರಿಂದ ಈ ಕಡೆ ಲಕ್ಷ ವಹಿಸಿ ಜನರಿಗೆ ಶೀಘ್ರ ನೀರಿನ ವ್ಯವಸ್ಥೆ ಮಾಡಿಕೊಡಬೇಕು. ಟೆಂಡರ್ ಪ್ರಕ್ರಿಯೆ ಮುಗಿದರೂ ಕೆಲಸ ನಡೆಸದ ಗುತ್ತಿಗೆದಾರರ ವಿರುದ್ಧ ಮತ್ತು ಈ ಸಂಬಂಧ ನಿರ್ಲಕ್ಷ ವಹಿಸಿರುವ ಎಂಜಿನಿಯರ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿ ಒತ್ತಾಯಿಸಿದ್ದಾರೆ.

ಒಂದುವೇಳೆ ಕೂಡಲೇ ಸಮಸ್ಯೆ ಬಗೆಹರಿಸದಿದ್ದರೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದೂ ಗ್ರಾಮದ ಜನರು ಎಚ್ಚರಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.