ADVERTISEMENT

ಹದಗೆಟ್ಟ ರಸ್ತೆ: ನಾಗರಿಕರ ಹಿಡಿ ಶಾಪ!

​ಪ್ರಜಾವಾಣಿ ವಾರ್ತೆ
Published 25 ಜನವರಿ 2011, 12:15 IST
Last Updated 25 ಜನವರಿ 2011, 12:15 IST

ಭಾಲ್ಕಿ: 50ಸಾವಿರ ಜನಸಂಖ್ಯೆ ವಾಸಿಸುವ ಭಾಲ್ಕಿ ಪಟ್ಟಣದ ಯಾವ ರಸ್ತೆಗೆ ಹೋದ್ರೂ ಮೊಳಕಾಲುದ್ದದ ಗುಂಡಿಗಳು ಸ್ವಾಗತಿಸುತ್ತಿವೆ.! ಹತ್ತಾರು ಅಡಿಗಳಷ್ಟು ಬಾಯ್ದೆರೆದ ಡಾಂಬರ್ ರಸ್ತೆಗಳಲ್ಲಿ ವಾಹನಗಳು ಚಲಿಸಲು ಪರದಾಡುತ್ತಿವೆ. ಹದಗೆಟ್ಟಿರುವ ರಸ್ತೆಗಳಿಗೆ ನಾಗರಿಕರು ನಿತ್ಯವೂ ಹಿಡಿ ಶಾಪ ಹಾಕುತ್ತಿದ್ದಾರೆ.

ಆದರೂ ಇಲ್ಲಿನ ಸ್ಥಳೀಯ ಅಡಳಿತವಾಗಲಿ, ಜನಪ್ರತಿನಿಧಿಗಳಾಗಲಿ ತಲೆ ಕೆಡಿಸಿಕೊಳ್ಳದೇ ಇರುವದಕ್ಕೆ ನಾಗರಿಕರು ರೋಸಿ ಹೋಗಿದ್ದಾರೆ. ಭಾಲ್ಕಿ ಪಟ್ಟಣದ ಸುಭಾಷ ವೃತ್ತದಲ್ಲಿ ಕಳೆದ ವರ್ಷವೇ ಮಾಡಿದ ಡಾಂಬರೀಕರಣದ ರಸ್ತೆ ಕಿತ್ತು ಹೋಗಿದೆ. ಸದಾ ಗಿಜಿಗುಡುವ ಗಾಂಧಿ ವೃತ್ತದ ಸುತ್ತಲೂ ಗುಂಡಿಗಳು, ಬಸವೇಶ್ವರ ವೃತ್ತ, ಡಾ.ಅಂಬೇಡ್ಕರ್ ಚೌಕ್, ಬೊಮ್ಮಗೊಂಡೇಶ್ವರ, ಶಿವಾಜಿ ವೃತ್ತ, ಮಹಾತ್ಮ ಫುಲೆ ಚೌಕ್‌ಗಳಲ್ಲೂ ರಸ್ತೆಗಳು ಹದಗೆಟ್ಟು ನಿತ್ಯವೂ ಒಂದಿಲ್ಲೊಂದು ಅವಾಂತರ ಸೃಷ್ಟಿಸುತ್ತಿವೆ.
ರೋಗಗಳ ಆಗರ: ಹಳೆ ಸರ್ವಿಸ್ ಸ್ಟ್ಯಾಂಡ್ ಮತ್ತು ಬಸ್‌ಸ್ಟಾಪ್ ಮುಂದಂತೂ ಮೂಗು ಮುಚ್ಚಿಕೊಂಡು ಓಡಾಡುವಷ್ಟು ದುರ್ನಾತ ಬೀರುತ್ತಿದೆ. ರೋಗಗಳ ಆಗರವಾಗಿದೆ.ಹದಗೆಟ್ಟ ರಸ್ತೆ ಮಧ್ಯದ ಗುಂಡಿಗಳಲ್ಲಿ ಚರಂಡಿ, ಬಾರ್, ರೆಸ್ಟಾರೆಂಟ್, ಹೊಟೇಲ್ ಮತ್ತು ಶೌಚಾಲಯಗಳ ಹೊಲಸು ನೀರು ಹಲವು ತಿಂಗಳುಗಳಿಂದ ಹರಿದಾಡುತ್ತಿದೆ. ಮಿನಿ ವಿಧಾನ ಸೌಧದ ಎದುರಿಗೆ ಪ್ರತಿ ದಿನ ರಸ್ತೆ ಗುಂಡಿಗಳ ಮಧ್ಯದಲ್ಲಿ ವಾಹನಗಳು ಜಂಪ್ ಆಗಿ ಅಪಘಾತಗಳು ಸಂಭವಿಸುತ್ತಿವೆ.

ಹಳೆಯ ಬಡಾವಣೆಯಲ್ಲಿ ರಸ್ತೆ ತೆರವು ಕಾರ್ಯಾಚರಣೆ ನಡೆಯುತ್ತಿರುವದರಿಂದ ಧೋಳೋ ಧೂಳು. ನಳದ ನೀರು ಬಂದರೆ ರಸ್ತೆಗೆ ಹರಿದು ಮಳೆಗಾಲದ ಕೆಸರಿನಂತೆ ಭಾಸವಾಗುತ್ತಿದೆ. ಪಟ್ಟಣದ ಈ ಅವ್ಯವಸ್ಥೆಗೆ ನಾಗರಿಕರು ಸಾಕಷ್ಟು ಕಿರಿಕಿರಿ ಅನುಭವಿಸುವಂತಾಗಿದೆ. ಈ ಬಗ್ಗೆ ಶಾಸಕರನ್ನು ವಿಚಾರಿಸಿದರೆ ಮಾರ್ಚ್‌ದೊಳಗೆ ಸರಿಪಡಿಸುವದಾಗಿ ಭರವಸೆ ನೀಡುತ್ತಿದ್ದಾರೆ. ಭರವಸೆಗಿಂತಲೂ ಕಾರ್ಯದಲ್ಲಿ ಚುರುಕು ಅಗತ್ಯವಾಗಿದೆ ಎಂಬುದು ಪ್ರಜ್ಞಾವಂತರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.