ADVERTISEMENT

ಹಸಿರು ಬೀದರ್ ಅಭಿವೃದ್ಧಿ ಗುರಿ

ಬೀದರ್‌ ಶಾಸಕ ರಹೀಂಖಾನ್‌ ಸಂದರ್ಶನ

​ಪ್ರಜಾವಾಣಿ ವಾರ್ತೆ
Published 12 ಜೂನ್ 2018, 10:41 IST
Last Updated 12 ಜೂನ್ 2018, 10:41 IST
ರಹೀಂ ಖಾನ್
ರಹೀಂ ಖಾನ್   

ಜನವಾಡ: ಶಾಸಕ ರಹೀಂಖಾನ್‌ ಬೀದರ್ ವಿಧಾನಸಭಾ ಕ್ಷೇತ್ರದಿಂದ ಮೂರನೇ ಬಾರಿ ಆಯ್ಕೆಯಾಗಿದ್ದಾರೆ. ಎರಡು ಬಾರಿ ಉಪ ಚುನಾವಣೆಗಳಲ್ಲೇ ಗೆದ್ದಿದ್ದ ಅವರಿಗೆ ಮತದಾರರು ಈ ಬಾರಿ ಪೂರ್ಣಾವಧಿ ಕರುಣಿಸಿದ್ದಾರೆ. ಬೀದರ್ ನಗರವನ್ನು ಹಸಿರು ನಗರವನ್ನಾಗಿ ಮಾಡುವುದು ಸೇರಿದಂತೆ ಐದು ವರ್ಷದ ಅವಧಿಗೆ ಹಾಕಿಕೊಂಡಿರುವ ಯೋಜನೆಗಳ ಕುರಿತು ಅವರು ‘ಪ್ರಜಾವಾಣಿ’ಯೊಂದಿಗೆ ಮನ ಬಿಚ್ಚಿ ಮಾತನಾಡಿದ್ದಾರೆ.

ನೀವು ಗೆದ್ದಿದ್ದಾಗಿದೆ, ತಕ್ಷಣಕ್ಕೆ ಮಾಡುವ ಅಭಿವೃದ್ಧಿ ಕೆಲಸಗಳೇನು?

ನಗರದಲ್ಲಿ ಉತ್ತಮ ರಸ್ತೆಗಳನ್ನು ನಿರ್ಮಿಸಲು ಮೊದಲ ಆದ್ಯತೆ ಕೊಡುವೆ. ಮಾರ್ಕೆಟ್ ಪೊಲೀಸ್ ಠಾಣೆಯಿಂದ ಶಹಾಪುರ ಗೇಟ್ ವರೆಗಿನ ರಸ್ತೆ ಕೆಲಸ ಈಗಾಗಲೇ ಮುಗಿದಿದೆ. ಚಿದ್ರಿಯ ಶಾಸಕರ ಕಚೇರಿಯಿಂದ ಮೈಲೂರು, ಗುಂಪಾ, ಶಹಾಪುರ ಗೇಟ್ ರಿಂಗ್ ರಸ್ತೆ ಕಾಮಗಾರಿ ಶೀಘ್ರ ಆರಂಭವಾಗಲಿದೆ. ಆಂತರಿಕ ರಸ್ತೆಗಳ ಅಭಿವೃದ್ಧಿ ಕಾರ್ಯವನ್ನೂ ಶುರು ಮಾಡಿಸುವೆ. ನಗರದಲ್ಲಿ ಪ್ರಗತಿಯಲ್ಲಿ ಇರುವ ದಿನದ 24 ಗಂಟೆ ಕುಡಿಯುವ ನೀರು ಯೋಜನೆ ಹಾಗೂ ಒಳಚರಂಡಿ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಪ್ರಯತ್ನಿಸುವೆ.

ADVERTISEMENT

ಐದು ವರ್ಷಗಳ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಹಾಕಿಕೊಂಡಿ ರುವ ನೀಲನಕ್ಷೆ ಏನು?

ಐತಿಹಾಸಿಕ ಬೀದರ್ ನಗರವನ್ನು ಹಸಿರು ನಗರವನ್ನಾಗಿ ಮಾಡುವುದು ನನ್ನ ಗುರಿ. ನಗರದಲ್ಲಿ ಇರುವ ಎಲ್ಲ ಉದ್ಯಾನಗಳನ್ನು ಅಭಿವೃದ್ಧಿ ಪಡಿಸಲಾಗುವುದು. ರಸ್ತೆ ಬದಿ, ಖಾಲಿ ಸ್ಥಳಗಳಲ್ಲಿ ಸಸಿಗಳನ್ನು ನೆಟ್ಟು ಹಸಿರು ನಳ ನಳಿಸುವಂತೆ ಮಾಡಲಾಗುವುದು. ಕುಡಿಯುವ ನೀರು, ರಸ್ತೆ, ಚರಂಡಿಯಂತಹ ಮೂಲಸೌಕರ್ಯಗಳಿಗೆ ಒತ್ತು ನೀಡುವುದರ ಜತೆಗೆ ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಣೆಗೂ ಆದ್ಯತೆ ಕೊಡಲಾಗುವುದು. ಕ್ಷೇತ್ರ ವ್ಯಾಪ್ತಿಯ ಚಿಲ್ಲರ್ಗಿ, ಶ್ರೀಮಂಡಲ್ ಬಳಿ ಮಾಂಜ್ರಾ ನದಿಗೆ ಅಡ್ಡಲಾಗಿ ಬ್ರಿಜ್ ಕಂ ಬ್ಯಾರೇಜ್ ನಿರ್ಮಿಸಿ ರೈತರಿಗೆ ಅನುಕೂಲ ಮಾಡಿಕೊಡಲು ಶ್ರಮಿಸಲಾಗುವುದು.

ಹಿಂದಿನ ಹಾಗೂ ಈಗಿನ ಅವಧಿಯ ಕಾರ್ಯವೈಖರಿಯಲ್ಲಿ ಏನಾದರೂ ಬದಲಾವಣೆ ಆಗಿದೆಯೇ?

ಹಿಂದಿನ ಎರಡು ಅವಧಿಗಳಿಗಿಂತಲೂ ತ್ವರಿತಗತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಆದ್ಯತೆ ನೀಡುವೆ. ಜನರ ಸಮಸ್ಯೆಗಳನ್ನು ಕಾಲಮಿತಿಯೊಳಗೆ ಪರಿಹರಿಸುವೆ. ಅಧಿಕಾರಿಗಳಿಗೆ ಚುರುಕು ಮುಟ್ಟಿಸುವೆ. ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ವಿಳಂಬ ಮಾಡುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ.

ಬೀದರ್‌ನಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಯಾವಾಗ ಆರಂಭವಾಗಲಿದೆ?

ನಗರದಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಆರಂಭ ಆಗುವುದರಿಂದ ಜಿಲ್ಲೆಯ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಕಾಲೇಜು ಕಟ್ಟಡಕ್ಕೆ ಸ್ಥಳ ಗುರುತಿಸಲಾಗಿದೆ. ಕಟ್ಟಡ ನಿರ್ಮಾಣ ಪ್ರಕ್ರಿಯೆ ಆರಂಭವಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಕಾಲೇಜು ಪ್ರಾರಂಭಿಸಲು ಸರ್ಕಾರದ ಮೇಲೆ ಒತ್ತಡ ತರಲಾಗುವುದು.

ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣ ಕಟ್ಟಡ ನಿರ್ಮಾಣ ಕಾಮಗಾರಿ ಯಾವಾಗ ಶುರುವಾಗಲಿದೆ?

ಆರು ತಿಂಗಳ ಹಿಂದೆಯೇ ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣ ನಿರ್ಮಾಣದ ಕುರಿತು ಚರ್ಚೆ ನಡೆದಿದೆ. ನಗರದಲ್ಲಿನ ಈಗಿನ ಜಿಲ್ಲಾಧಿಕಾರಿ ಕಚೇರಿ ಸ್ಥಳದಲ್ಲಿಯೇ ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣ ನಿರ್ಮಾಣ ಮಾಡುವ ಕುರಿತು ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಹಣ ಮಂಜೂರಾಗಿದೆ. ಆದಷ್ಟು ಬೇಗ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು.

ಮಹಮೂದ್ ಗವಾನ್ ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರ ಆರಂಭಿಸಲು ಕೈಗೊಂಡ ಕ್ರಮಗಳೇನು?

ಮಹಮ್ಮದ್ ಗವಾನ್ ಮದರಸಾದ ಅಧ್ಯಯನ ಕೇಂದ್ರ ಆರಂಭಿಸುವ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಈಗಾಗಲೇ ಕೇಂದ್ರ ಶುರು ಮಾಡಲು ಅಗತ್ಯ ಪ್ರಕ್ರಿಯೆ ಆರಂಭವಾಗಿದೆ. ಶೀಘ್ರ ಕೇಂದ್ರ ಪ್ರಾರಂಭಿಸಲು ಸರ್ವ ಪ್ರಯತ್ನ ನಡೆಸುವೆ.

ಕ್ಷೇತ್ರದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಾಧ್ಯವೇ?

ಕ್ಷೇತ್ರದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಯೋಜನೆ ರೂಪಿಸುವೆ. ಕ್ಷೇತ್ರವನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳಲ್ಲಿ ನಿರುದ್ಯೋಗ ಪ್ರಮುಖವಾಗಿದೆ. ಉದ್ಯೋಗಕ್ಕಾಗಿ ಜನ ನೆರೆ ರಾಜ್ಯದ ನಗರಗಳಿಗೆ ಗುಳೆ ಹೋಗುವುದು ಈಗಲೂ ತಪ್ಪಿಲ್ಲ. ಜನರಿಗೆ ಸ್ಥಳೀಯವಾಗಿಯೇ ಉದ್ಯೋಗ ದೊರಕಿಸಿಕೊಡುವ ದಿಸೆಯಲ್ಲಿ ನಗರದಲ್ಲಿ ಹೆಸರಾಂತ ಕಂಪನಿಗಳ ಘಟಕಗಳನ್ನು ಆರಂಭಿಸಲು ಪ್ರಯತ್ನಿಸುವೆ.

– ನಾಗೇಶ ಪ್ರಭಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.