ADVERTISEMENT

ಹಿಂದು ಭಯೋತ್ಪಾದಕ ಆಗಲಾರ

​ಪ್ರಜಾವಾಣಿ ವಾರ್ತೆ
Published 13 ಜನವರಿ 2011, 7:10 IST
Last Updated 13 ಜನವರಿ 2011, 7:10 IST

ಹುಮನಾಬಾದ್: ಹಿಂದುಗಳನ್ನು ಭಯೋತ್ಪಾದಕ ಗುಂಪಿಗೆ ಸೇರಿಸುವ ದುಷ್ಟ ಶಕ್ತಿಗಳ ವಿರುದ್ದ ಈ ದೇಶದ ಪ್ರತಿಯೊಬ್ಬ ಹಿಂದು ಸಿಡಿದೇಳಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗೀಯ ಬೌದ್ಧಿಕ ಪ್ರಚಾರಕ ವಿ.ನಾಗರಾಜ ಸಲಹೆ ನೀಡಿದರು. 

  ಹನುಮಾನ ಶಕ್ತಿ ಜಾಗರಣ ಸಮಿತಿ ಇಲ್ಲಿನ ಥೇರಮೈದಾನದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ಬಹಿರಂಗ ಸಭೆ ಉದ್ದೇಶಿಸಿ, ಅವರು ಮಾತನಾಡಿದರು.ದೇಶ ಆಳುವ ದೊಡ್ಡ ವ್ಯಕ್ತಿಗಳು ಕುರ್ಚಿ ಆಸ್ತಿಗಾಗಿ ನಿಜವಾದ ಭಯೋತ್ಪಾದಕರನ್ನು ಶಿಕ್ಷಿಸದೇ ಬಿಡುತ್ತಿದೆ. ಇನ್ನೂ ಪ್ರಾಣದ ಹಂಗು ತೊರೆದು ದೇಶ ರಕ್ಷಣೆಗೆ ಹೋರಾಡುವ ವ್ಯಕ್ತಿಗಳನ್ನು ದೇಶ ಆಳುವವರು ಭಯೋತ್ಪಾದಕ ಎಂದು ಕರೆಯಲು ಹೊರಟಿರುವುದು ನೋವಿನ ಸಂಗತಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾಣಿಕಪ್ಪ ಗಾದಾ ಮಾತನಾಡಿ, ನೋಟಿಗಾಗಿ ಓಟು ಮಾರಿಕೊಳ್ಳುವ ಮತದಾರ ಚುನಾವಣೆಯ ಬಳಿಕ ಕ್ಷೇತ್ರದ ಚುನಾಯಿತ ಪ್ರತಿನಿಧಿಯಿಂದ ಅಭಿವೃದ್ದಿ ನಿರೀಕ್ಷಿಸಲು ಸಾಧ್ಯವೆ ಇಲ್ಲ. ದೇಶ ಹಾಳಾದರೂ ಚಿಂತೆ ಇಲ್ಲ. ತಮ್ಮಕುರ್ಚಿ ಭದ್ರವಾಗಿರಬೇಕು ಎನ್ನುವ ಹೊಲಸು ರಾಜಕಾರಣಿಗಳ ರಾಜಕೀಯ ನಮಗೆ ಅನಿವಾರ್ಯವೇ? ಎಂದು ಪ್ರಶ್ನಿಸಿದ ಅವರು, ದುಷ್ಟ ಹಾಗೂ ಭ್ರಷ್ಟ ರಾಜಕಾರಣಿಗಳನ್ನು ಬುಡಸಮೇತ ಕಿತ್ತೆಸೆ ಹಾಕಲು ದೇಶದ ಯುವಜನಾಂಗ ಪ್ರಾಣದ ಹಂಗುತೊರೆದು ಹೋರಾಟಕ್ಕೆ ಸನ್ನದ್ದರಾಗಬೇಕು ಎಂದು ಸಲಹೆ ನೀಡಿದರು.

ಸಾನಿಧ್ಯ ವಹಿಸಿ ಮಾತನಾಡಿದ ಬೆಮಳಖೇಡಾ ಚಂದ್ರಶೇಖರ ಸ್ವಾಮಿ ತಮ್ಮ ಅಧಿಕಾರ ಉಳಿಸಿಕೊಳ್ಳಲು ಈ ದೇಶದ ರಾಜಕಾರಣಿಗಳು ದೇಶವನ್ನು ಮಾರಾಟ ಮಾಡಲು ಮುಂದಾಗುತ್ತಾರೆ ಎಂದರು. ಹುಡಗಿ ವಿರಕ್ತ ಮಠದ ಚನ್ನಮಲ್ಲಸ್ವಾಮಿ ವೇದಿಕೆಯಲ್ಲಿದ್ದರು.

ಶಿವಾನಂದ ಮಂಠಾಳಕರ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಶಿವಶಂಕರ ತರನಳ್ಳಿ ಸ್ವಾಗತಿಸಿದರು. ಆರ್.ಎಸ್.ಎಸ್ ಪ್ರಮುಖ ದಾಮೋದರಜಿ ಸಂಕಲ್ಪ ಭೋದಿಸಿದರು. ದುರ್ಯೋಧನ ಹೂಗಾರ ವಂದಿಸಿದರು. ನಾಗಶೆಟ್ಟಿ ನಿರೂಪಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.