ADVERTISEMENT

ಹುತಾತ್ಮ ಶರಣರ ಸ್ಮರಣೋತ್ಸವಕ್ಕೆ ಭರದ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2011, 5:30 IST
Last Updated 1 ಮಾರ್ಚ್ 2011, 5:30 IST

ಬಸವಕಲ್ಯಾಣ: ‘ಇವನಾರವ ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯಾ..’ ಎಂದವರು ಬಸವಣ್ಣನವರು. ಇವರ ನೇತೃತ್ವದಲ್ಲಿ 12 ನೇ ಶತಮಾನದಲ್ಲಿ ಅಂತರ್ಜಾತಿ ವಿವಾಹ ನೆರವೆರುತ್ತದೆ. ಆಗ ಕೆಲ ಶರಣರಿಗೆ ಶಿಕ್ಷೆಯಾಗುತ್ತದೆ. ಕೆಲವರ ಹತ್ಯೆ ನಡೆಯುತ್ತದೆ. ಅಂದು ಪ್ರಾಣ ಕಳೆದುಕೊಂಡ ಶರಣರ ಸ್ಮರಣೆಗಾಗಿ ಇಲ್ಲಿ ಹುತಾತ್ಮ ಶರಣರ ಸ್ಮರಣೋತ್ಸವ ಹಮ್ಮಿಕೊಳ್ಳಲಾಗಿದೆ.

ಅಖಿಲ ಭಾರತ ವೀರಶೈವ ಮಹಾಸಭೆಯಿಂದ ಮಾರ್ಚ್ 5 ಮತ್ತು 6 ರಂದು ಇಲ್ಲಿ ಇಂಥ ಅಪರೂಪದ ಮತ್ತು ಅಭೂತಪೂರ್ವ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ಇಲ್ಲಿನ ರಥ ಮೈದಾನದಲ್ಲಿ ಬೃಹತ್ ಮಂಟಪ, ಆಕರ್ಷಕ ವೇದಿಕೆ ನಿರ್ಮಿಸಲಾಗುತ್ತಿದೆ. ಇತರೆ ಸಿದ್ಧತೆಗಳು ಭರದಿಂದ ಸಾಗಿದ್ದು ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಅಂದು ಸಮಗಾರ ಕಾಯಕದ ಹರಳಯ್ಯನವರ ಮಗ ಶೀಲವಂತ ಮತ್ತು ಬ್ರಾಹ್ಮಣನಾದ ಮಧುವಯ್ಯನ ಮಗಳು ನೀಲಮ್ಮನವರು ಶರಣ ಧರ್ಮವನ್ನು ಒಪ್ಪಿಕೊಂಡು ಮದುವೆ ಆಗುತ್ತಾರೆ. ಇದರಿಂದ ಕೋಪಗೊಂಡ ಬಿಜ್ಜಳ ರಾಜನು ಬಸವಣ್ಣನವರಿಗೆ ಗಡಿಪಾರು ಶಿಕ್ಷೆ ವಿಧಿಸುತ್ತಾನೆ. ಹರಳಯ್ಯ ಮಧುವಯ್ಯಗೆ ಆನೆ ಕಾಲಿಗೆ ಕಟ್ಟಿ ಎಳೆಯುವ ಶಿಕ್ಷೆ ಕೊಡುತ್ತಾನೆ. ಇದರಿಂದ ಸಂಘರ್ಷ ನಡೆಯುತ್ತದೆ. ಅನೇಕ ಶರಣರು ಕಲ್ಯಾಣ ಬಿಟ್ಟು ಅತ್ತಿತ್ತ ಚದುರಿ ಹೋಗುತ್ತಾರೆ. ಆ ಘಟನೆ ‘ಕಲ್ಯಾಣಕ್ರಾಂತಿ’ ಎಂದೇ ಇತಿಹಾಸದಲ್ಲಿ ನಮೂದಾಗಿದೆ.

ಸಮಾಜ ಸುಧಾರಣೆಗಾಗಿ ಶರಣರು ಕೊಟ್ಟ ಬಲಿದಾನ ವ್ಯರ್ಥ ಹೋಗಬಾರದು. ಅವರು ಬಯಸಿದಂತೆ ಜಾತಿ ಜನಾಂಗಗಳಲ್ಲಿ ಸಾಮರಸ್ಯ ಮೂಡಬೇಕು. ಮಾನವ ಸಮಾನತೆ ಕುರಿತು ಎಲ್ಲರಲ್ಲಿ ಜಾಗೃತಿ ಬರಬೇಕು ಎಂಬುದೇ ಕಾರ್ಯಕ್ರಮದ ಉದ್ದೇಶವಾಗಿದೆ. ಮಾನವೀಯ ಸಂಬಂಧ ಬಲಪಡಿಸಲು ಇದು ಪ್ರೇರಣೆ ನೀಡಲಿ. ಶರಣತತ್ವ ಎಲ್ಲೆಡೆ ಪ್ರಸಾರವಾಗಲಿ ಎಂಬುದೇ ಆಶಯವಾಗಿದೆ ಎಂದು ವೀರಶೈವ ಮಹಾಸಭೆ ಪದಾಧಿಕಾರಿಗಳು ಹೇಳುತ್ತಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಕೇಂದ್ರ ಸಚಿವರಾದ ವೀರಪ್ಪ ಮೊಯಿಲಿ, ಮಲ್ಲಿಕಾರ್ಜುನ ಖರ್ಗೆ, ಸುಶೀಲಕುಮಾರ ಸಿಂಧೆ ಆಗಮಿಸುವರು. ರಾಜ್ಯದ ಪ್ರಮುಖ ಮಠಾಧಿಪತಿಗಳು, ಗಣ್ಯರು ಪಾಲ್ಗೊಳ್ಳಲಿದ್ದಾರೆ. ವಿವಿಧ ಗೋಷ್ಠಿಗಳು, ಸಾಂಸ್ಕೃತಿಕ ಚಟುವಟಿಕೆಗಳು ಸಹ ನಡೆಯಲಿವೆ ಎಂದು ತಿಳಿಸಲಾಗಿದೆ
         

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.