ADVERTISEMENT

ಹುಲಸೂರ ಪುರಸಭೆಯಾಗಿ ಮೇಲ್ದರ್ಜೆಗೆ

ತಾಲ್ಲೂಕು ಉದ್ಘಾಟನಾ ಕಾರ್ಯಕ್ರಮ: ಜಿಲ್ಲಾ ಉಸ್ತುವಾರಿ ಸಚಿವಈಶ್ವರ ಖಂಡ್ರೆ ಭರವಸೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2018, 6:18 IST
Last Updated 16 ಮಾರ್ಚ್ 2018, 6:18 IST
ಬಸವಕಲ್ಯಾಣ ತಾಲ್ಲೂಕಿನ ಹುಲಸೂರನಲ್ಲಿ ಗುರುವಾರ ಹೊಸ ತಾಲ್ಲೂಕನ್ನು ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಿದರು. ಶಾಸಕ ಮಲ್ಲಿಕಾರ್ಜುನ ಖೂಬಾ ಇದ್ದರು
ಬಸವಕಲ್ಯಾಣ ತಾಲ್ಲೂಕಿನ ಹುಲಸೂರನಲ್ಲಿ ಗುರುವಾರ ಹೊಸ ತಾಲ್ಲೂಕನ್ನು ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಿದರು. ಶಾಸಕ ಮಲ್ಲಿಕಾರ್ಜುನ ಖೂಬಾ ಇದ್ದರು   

ಬಸವಕಲ್ಯಾಣ: ‘ಜನಸಂಖ್ಯೆಯ ಕೊರತೆ ಇದ್ದರೂ ಹುಲಸೂರ ಭಾಗದ ಸಮಗ್ರ ಅಭಿವೃದ್ಧಿಗಾಗಿ ಹೊಸ ತಾಲ್ಲೂಕು ರಚನೆ ಮಾಡಲಾಗಿದೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ಹುಲಸೂರ ಪಟ್ಟಣದ ಗ್ರಾಮ ಪಂಚಾಯತಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಹೊಸ ಹುಲಸೂರ ತಾಲ್ಲೂಕು ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಬೀದರ್ ಜಿಲ್ಲೆಯಲ್ಲಿ ಚಿಟಗುಪ್ಪ, ಕಮಲನಗರ ಮತ್ತು ಹುಲಸೂರ ಒಳಗೊಂಡು ಮೂರು ಹೊಸ ತಾಲ್ಲೂಕುಗಳನ್ನು ರಚಿಸಲಾಗಿದೆ. ಈ ಮೂರು ತಾಲ್ಲೂಕುಗಳ ಉದ್ಘಾಟನೆ ಪೂರ್ಣಗೊಂಡಿದೆ. ಹುಲಸೂರ ತಾಲ್ಲೂಕಿನ ವ್ಯಾಪ್ತಿಯಲ್ಲಿ 18 ಗ್ರಾಮಗಳು ಬರುತ್ತವೆ. ತಾಲ್ಲೂಕು ಕೇಂದ್ರ ಆಗಿರುವುದರಿಂದ ಮತ್ತು ಇಲ್ಲಿ ಜನಸಂಖ್ಯೆ ಹೆಚ್ಚರುವ ಕಾರಣ ಇಲ್ಲಿನ ಗ್ರಾಮ ಪಂಚಾಯತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸ
ಲಾಗುತ್ತದೆ’ ಎಂದು ಭರವಸೆ ನೀಡಿದರು.

ADVERTISEMENT

‘ಹುಲಸೂರ ತಾಲ್ಲೂಕು ರಚನೆಗಾಗಿ ಹೋರಾಟ ನಡೆಸಿರುವಂತೆ ಯೋಜನಾಬದ್ಧವಾಗಿ ಪಟ್ಟಣದ ರಚನೆ ಅಗುವುದಕ್ಕಾಗಿಯೂ ಪ್ರಯತ್ನಿಸಬೇಕು. ಅದಕ್ಕಾಗಿ ಹೋರಾಟಕ್ಕೂ ಸಿದ್ಧರಾಗಬೇಕು. ಮಿನಿ ವಿಧಾನಸೌಧ ನಿರ್ಮಾಣಕ್ಕೆ ಮತ್ತು ವಿವಿಧ ಇಲಾಖೆಗಳ ಕಚೇರಿಗಳನ್ನು ಆರಂಭ ಆಗುವಂತೆ ಪ್ರಯತ್ನಿಸಲಾಗುವುದು' ಎಂದರು.

‘ಹುಲಸೂರ ಸಮೀಪದ ಕೊಂಗಳಿ ಬ್ಯಾರೇಜ್ ನಿಂದ ಹುಲಸೂರ ಮತ್ತು ಬಸವಕಲ್ಯಾಣ ತಾಲೂಕಿನಲ್ಲಿನ 16 ಗ್ರಾಮಗಳ ಕೆರೆಗಳಿಗೆ ನೀರು ತುಂಬುವ ₹180 ಕೋಟಿಯ ಯೋಜನೆಗೆ ಮಂಜೂರಾತಿ ದೊರೆತಿದೆ. ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ₹ 100 ಕೋಟಿ ಹಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಾಗಲೇ ಬಿಡುಗಡೆ ಮಾಡಿದ್ದಾರೆ’ ಎಂದು ತಿಳಿಸಿದರು.

ಶಾಸಕ ಮಲ್ಲಿಕಾರ್ಜುನ ಖೂಬಾ ಮಾತನಾಡಿ, ‘ಬಸವಕಲ್ಯಾಣ ಜಿಲ್ಲೆ ಆಗಬೇಕಾಗಿದೆ. ಅನುಭವ ಮಂಟಪಕ್ಕೂ ಶೀಘ್ರ ಶಂಕುಸ್ಥಾಪನೆ ನೆರವೇರಿಸಬೇಕು. ಹುಲಸೂರನಲ್ಲಿ ಪುರಸಭೆ ಶೀಘ್ರವಾಗಿ ಆಗಬೇಕು. ವಿವಿಧ ಇಲಾಖೆಗಳ ಕಚೇರಿಗಳನ್ನು ಆರಂಭಿಸಬೇಕು’ ಎಂದು ಹೇಳಿದರು.

ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ಉಪಾಧ್ಯಕ್ಷ ಡಾ.ಪ್ರಕಾಶ ಪಾಟೀಲ, ಉಪ ವಿಭಾಗಾಧಿಕಾರಿ ಶರಣಬಸಪ್ಪ ಕೊಟ್ಟಪ್ಪಗೋಳ ಮಾತನಾಡಿದರು.

ವಿಧಾನಪರಿಷತ್ ಸದಸ್ಯ ವಿಜಯಸಿಂಗ್, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಯಶೋದಾ ರಾಠೋಡ, ಗ್ರಾಮ ಪಂಚಾಯತಿ ಅಧ್ಯಕ್ಷೆ ಮಂಗಲಾಬಾಯಿ ಪಾಲ್ಗೊಂಡಿದ್ದರು. ತಾಲ್ಲೂಕು ರಚನೆ ಹೋರಾಟ ಸಮಿತಿ ಅಧ್ಯಕ್ಷ ಎಂ.ಜಿ.ರಾಜೋಳೆ, ಶಿವಾನಂದ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು.

ಆಸ್ಪತ್ರೆ ಉದ್ಘಾಟನೆ: ಮೊದಲು ಗ್ರಾಮದ ಹೊರ ಭಾಗದಲ್ಲಿ ₹ 4.75 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಿದರು.

ಶಾಸಕ ಮಲ್ಲಿಕಾರ್ಜುನ ಖೂಬಾ,ಕೆಪಿಸಿಸಿ ಕಾರ್ಯದರ್ಶಿ ಬಿ.ನಾರಾಯಣರಾವ್, ಜಿಲ್ಲಾ ಪಂಚಾಯತಿ ಸದಸ್ಯ ಸುಧೀರ ಕಾಡಾದಿ ಪಾಲ್ಗೊಂಡಿದ್ದರು.

ಹಬ್ಬದ ವಾತಾವರಣ: ಹುಲಸೂರ ಗ್ರಾಮದಲ್ಲಿ ಇಡೀದಿನ ಹಬ್ಬದ ವಾತಾವರಣ ಇತ್ತು. ಪ್ರಮುಖ ಬೀದಿಗಳಲ್ಲಿ ಬಣ್ಣ ಬಣ್ಣದ ಪತಾಕೆಗಳನ್ನು ಮತ್ತು ಕೇಸರಿ ಧ್ವಜಗಳನ್ನು ಕಟ್ಟಲಾಗಿತ್ತು. ಅನೇಕರು ಮನೆಗಳ ಎದುರಲ್ಲಿ ರಂಗೋಲಿ ಹಾಕಿದ್ದರು. ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ಎಂ.ಜಿ.ರಾಜೋಳೆ ಹಾಗೂ ಇತರೆ ಪದಾಧಿಕಾರಿಗಳು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ವಿಜಯೋತ್ಸವ ಆಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.