ADVERTISEMENT

‘ಆಧುನಿಕ ಸವಾಲು ಎದುರಿಸಲು ತರಬೇತಿ’

ಎಪಿಸಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ: ಡಿಜಿ ಸುಶಾಂತ್ ಮಹಾಪಾತ್ರ ಕರೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2014, 6:42 IST
Last Updated 11 ಮಾರ್ಚ್ 2014, 6:42 IST

ಬೀದರ್: ಬದಲಾದ ಕಾಲ, ಸವಾಲುಗಳಿಗೆ ಅನುಗುಣವಾಗಿ ಪೊಲೀಸ್‌ ಕಾನ್‌ಸ್ಟೇಬಲ್‌ಗಳಿಗೆ ನೀಡುವ ತರಬೇತಿ ಕ್ರಮದಲ್ಲಿಯೂ ಬದಲಾವಣೆ  ತರಬೇಕಾದ ಅಗತ್ಯವಿದೆ ಎಂದು ಪೊಲೀಸ್‌ ಮಹಾ ನಿರ್ದೇಶಕ (ತರಬೇತಿ) ಸುಶಾಂತ್ ಮಹಾಪಾತ್ರ ಅಭಿಪ್ರಾಯಪಟ್ಟರು.

ಸೋಮವಾರ ನಗರದ ಪೊಲೀಸ್‌ ಕವಾಯತು ಮೈದಾನದಲ್ಲಿ ನಡೆದ 7ನೇ ತಂಡದ ಎಪಿಸಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ವೀಕ್ಷಿಸಿ ಮಾತನಾಡಿ, ಈಗ ಅಪರಾಧದ ಸ್ವರೂಪಗಳು ಬದಲಾಗುತ್ತಿವೆ. ಇದಕ್ಕೆ ಅನುಗುಣವಾಗಿ ತರಬೇತಿ ಕ್ರಮ­ದಲ್ಲಿಯೂ ಬದಲಾವಣೆ ಆಗ­ಬೇಕು ಎಂದರು.

ಪೊಲೀಸ್ ಕಾನ್‌ಸ್ಟೇಬಲ್‌ಗಳಾಗಿ ನೇಮಕ ಆಗುತ್ತಿರುವವರಲ್ಲಿ ಪದ­ವೀ­ಧರರು, ಹೆಚ್ಚಿನ ವಿದ್ಯಾರ್ಹತೆ ಉಳ್ಳವರು ಇದ್ದಾರೆ. ಅವರ ಬುದ್ಧಿಮತ್ತೆಯನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಇದು ಅಗತ್ಯ. ಜೊತೆಗೆ ಇಂಥ ತರಬೇತಿಯೂ ಪ್ರಾಯೋಗಿಕವಾಗಿ ಇರಬೇಕು ಎಂದು ಹೇಳಿದರು.

ಪೊಲೀಸ್‌ ನಿಯಮಾವಳಿಗಳು ಬ್ರಿಟಿಷ್‌ ಕಾಲದಲ್ಲಿ ಆಗಿದ್ದವು. ಆಗ ಕುದುರೆ ಸವಾರಿ ಹೇಳಿಕೊಡ­ಲಾಗುತ್ತಿತ್ತು. ಈಗ ಅಗತ್ಯವಿಲ್ಲ. ಡಿಎನ್ಎ. ಸಿಸಿ.ಟಿವಿ ವಿಶ್ಲೇಷಣೆ, ಮೊಬೈಲ್‌ ಫೊರೆನ್ಸಿಕ್‌ ವಿಶ್ಲೇಷಣೆ, ಗೂಗಲ್‌ ಮ್ಯಾಪ್ಸ್‌ಗಳ ಬಳಕೆ ಕುರಿತು ತರಬೇತಿ ನೀಡಬೇಕಾಗಿದೆ ಎಂದರು.

ಮನುಷ್ಯರಾಗಿ ನೋಡಬೇಕು: ಪೊಲೀಸ್‌ ಕಾನ್‌ಸ್ಟೇಬಲ್‌ಗಳನ್ನು ಹಿರಿಯ ಅಧಿಕಾರಿಗಳು ತಮ್ಮ ಕೆಳಹಂತದ ಸಿಬ್ಬಂದಿಯಂತೆ ಅಲ್ಲ, ಮನುಷ್ಯರಾಗಿ ನೋಡ­ಬೇಕಾಗಿದೆ.  ಕೇವಲ ಆರ್ಡರ್ಲಿ­ಗಳ ರೀತಿಯಷ್ಟೇ ನೋಡುವುದು ಸರಿಯಲ್ಲ ಎಂದು ಹೇಳಿದರು.

ನಿರ್ಗಮನ ಪಥ ಸಂಚಲನ ಕುರಿತು ಶ್ಲಾಘನೆ ವ್ಯಕ್ತಪಡಿಸಿದ ಅವರು, ಇದು ನಾನು ನೋಡಿದ ಉತ್ತಮ ಪಥ ಸಂಚಲನ. ಇಲ್ಲಿ ಪಡೆದ ತರಬೇತಿಯ ಸೇವೆಯುದ್ದಕ್ಕೂ ಉಳಿಯಲಿದೆ. ಪೊಲೀಸ್‌ ಸೇವೆಗೆ ಸೇರ್ಪಡೆಯಾದ ಬಳಿಕ ಪುನರ್‌ಮನನ ತರಬೇತಿ ಆಗಾಗ್ಗೆ ಆಗುವುದಿಲ್ಲ. ಹೀಗಾಗಿ ಇಲ್ಲಿ ಪಡೆದ ತರಬೇತಿಯ ಆದಷ್ಟು ಸೇವೆಯಲ್ಲಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾನ್‌ಸ್ಟೇಬಲ್‌ಗಳಿಗೆ ದಕ್ಷತೆ ಮತ್ತು ಸೇವಾ ಮನೋಭಾವ ಮುಖ್ಯ. ಕೌಟುಂಬಿಕ ದೌರ್ಜನ್ಯ, ಘರ್ಷಣೆ  ಇರುತ್ತವೆ. ಈ ಎಲ್ಲದರ ಬಗೆಗೆ ಮಾಹಿತಿ ತಿಳಿಯಬೇಕು. ಜಿಲ್ಲಾಡಳಿತ ನೀಡಿರುವ ಭೂಮಿಯಲ್ಲಿ ಉತ್ತಮ ತರಬೇತಿ ಕೇಂದ್ರ ಸ್ಥಾಪಿಸುವ ಮತ್ತು ಸರ್ಕಾರ ಈಚೆಗೆ ಅನುಮೋದನೆ ನೀಡಿರುವಂತೆ 8,500 ಹುದ್ದೆ ಭರ್ತಿಗೂ ಬರುವ ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳ­ಲಾಗುವುದು ಎಂದು ಹೇಳಿದರು.

ಗುಲ್ಬರ್ಗ ಈಶಾನ್ಯ ವಲಯದ ಪೊಲೀಸ್‌ ಮಹಾನಿರೀಕ್ಷಕ ಡಾ. ಸುರೇಶ್ ಕುಜ್ಞಿ ಮಹಮ್ಮದ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಎಚ್‌. ಸುಧೀರ್‌ ಕುಮಾರ್‌ ರೆಡ್ಡಿ, ಜಿಲ್ಲಾಧಿಕಾರಿ ಡಾ. ಪಿ.ಸಿ. ಜಾಫರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ಇದ್ದರು.

ಸಶಸ್ತ್ರ ಪಡೆಗೆ ನೇಮಕ–ಪದವೀಧರರೇ ಅಧಿಕ
ಬೀದರ್: ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಸೋಮವಾರ ನಡೆದ ನಿರ್ಗಮನ ಪಥ ಸಂಚಲನದಲ್ಲಿ ತರಬೇತಿ ಪೂರೈಸಿದ 149 ಪೇದೆಗಳು ಭಾಗವಹಿಸಿದ್ದು, ಇವರಲ್ಲಿ ಪ್ರಶಿಕ್ಷಣಾರ್ಥಿಯೊಬ್ಬರ ಕನಿಷ್ಠ ವಿದ್ಯಾರ್ಹತೆ ಎಸ್ಸೆಸ್ಸೆಲ್ಸಿ ಆಗಿದ್ದರೆ, ಗರಿಷ್ಠ ವಿದ್ಯಾರ್ಹತೆ ಎಂ.ಎ., ಬಿ.ಇಡಿ ಆಗಿದೆ.

ಸಶಸ್ತ್ರ ಪೊಲೀಸ್ ಪಡೆಯ ಸಿಬ್ಬಂದಿಯಾಗಿ ಆಯ್ಕೆಯಾದ ವಿವಿಧ ಜಿಲ್ಲೆಗಳಿಗೆ ಸೇರಿದ 149 ಮಂದಿ ಸುಮಾರು 10 ತಿಂಗಳ ಅವಧಿಯ ತರಬೇತಿಯನ್ನು ಜಿಲ್ಲೆಯಲ್ಲಿ ಪೂರ್ಣಗೊಳಿಸಿದರು.

ಉಳಿದಂತೆ ಈ ಪ್ರಶಿಕ್ಷಣಾರ್ಥಿಗಳಲ್ಲಿ 47 ಮಂದಿ ಬಿ.ಎ ಪದವೀಧರರಿದ್ದರೆ, 10 ಮಂದಿ ಬಿ.ಕಾಂ., 4 ಮಂದಿ ಬಿ.ಎ., ಬಿ.ಇಡಿ, 3 ಮಂದಿ ಬಿ.ಎಸ್ಸಿ, ತಲಾ ಇಬ್ಬರು ಡಿಪ್ಲೊಮಾ ಮತ್ತು ಬಿ.ಎಸ್‌ಸಿ, ಬಿ.ಇಡಿ, ಒಬ್ಬರು ಬಿ.ಪಿ.ಇಡಿ ಮತ್ತು 46 ಮಂದಿ ಪಿಯುಸಿ, 31 ಮಂದಿ ಡಿ.ಇಡಿ, ಒಬ್ಬರು ಐಟಿಐ ವಿದ್ಯಾರ್ಹತೆ ಹೊಂದಿದ್ದಾರೆ.

ನಗರದಲ್ಲಿ ಇದುವರೆಗೂ ನಾಲ್ಕು ನಾಗರಿಕ ಪೊಲೀಸ್ ಕಾನ್‌ಸ್ಟೇಬಲ್‌ಗಳ, 2 ಸಶಸ್ತ್ರ ಪೊಲೀಸ್‌ ಕಾನ್‌ಸ್ಟೇಬಲ್‌ ತಂಡಗಳಿಗೆ ತರಬೇತಿ ನೀಡಲಾಗಿದ್ದು, ಇದು ಏಳನೇ ತಂಡವಾಗಿದೆ. ಬೆಳಗಾವಿ ಜಿಲ್ಲೆಯಿಂದ 42, ಬಿಜಾಪುರ ಜಿಲ್ಲೆಯ 24, ರಾಯಚೂರು, ಗುಲ್ಬರ್ಗ ಜಿಲ್ಲೆಯ ತಲಾ 9, ದಾವಣಗೆರೆ, ಬಾಗಲಕೋಟೆ, ಚಿಕ್ಕಮಗಳೂರು, ರಾಮನಗರ ಜಿಲ್ಲೆಯ ತಲಾ 6, ಬಳ್ಳಾರಿ , ಹಾವೇರಿ, ತುಮಕೂರು, ಹಾಸನ ಜಿಲ್ಲೆಯಿಂದ ತಲಾ 5, ಬೆಂಗಳೂರು ಜಿಲ್ಲೆಯ 4, ಕೊಪ್ಪಳ ಜಿಲ್ಲೆಯ 4, ಮಂಡ್ಯ, ಗದಗ, ಚಿತ್ರದುರ್ಗ ಜಿಲ್ಲೆಯಿಂದ ತಲಾ ಮೂವರು, ಮೈಸೂರು, ಚಿಕ್ಕಬಳ್ಳಾಪುರ, ಉತ್ತರಕನ್ನಡ ಜಿಲ್ಲೆಯಿಂದ ತಲಾ ಒಬ್ಬರು ಪ್ರಶಿಕ್ಷಣಾರ್ಥಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT