ADVERTISEMENT

‘ಡಿಸಿ ವಿರುದ್ಧ ಕಾನೂನು ಹೋರಾಟ’

​ಪ್ರಜಾವಾಣಿ ವಾರ್ತೆ
Published 7 ಜನವರಿ 2014, 6:17 IST
Last Updated 7 ಜನವರಿ 2014, 6:17 IST

ಬೀದರ್: ಜಿಲ್ಲಾಧಿಕಾರಿ ಜಾಫರ್‌ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಅಂಶ ಹಾಕಿದ್ದರು ಎಂಬ ದೂರಿಗೆ ಸಂಬಂಧಿಸಿ ಕಾನೂನು ಹೋರಾಟ ನಡೆಸಲು ಹಿಂದೂಪರ ಸಂಘಟನೆಗಳು ನಿರ್ಧರಿಸಿದ್ದು, ರಾಜ್ಯ ಸರ್ಕಾರ ಪ್ರಕರಣ ಕುರಿತು ಗಮನಹರಿಸಿ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿವೆ.

ಜಿಲ್ಲಾಧಿಕಾರಿ ವಿರುದ್ಧ ಮೊಕದ್ದಮೆ ದಾಖಲಿಸಲು ಅನುಮತಿ ನೀಡಲು ಕೋರಿ ರಾಜ್ಯಪಾಲರಿಗೆ ಪತ್ರ ಬರೆದಿದ್ದು,  ನಿಯಮದ ಅನುಸಾರ ಆರು ವಾರದಲ್ಲಿ ಪ್ರತಿಕ್ರಿಯೆ ಬರಬೇಕು. ಬರದಿದ್ದಲ್ಲಿ ಅ ಅವಧಿಯ ನಂತರ ಪ್ರಕರಣ ದಾಖಲಿಸಲು ಅವಕಾಶವಿದ್ದು, ಅದಕ್ಕಾಗಿ ಸಿದ್ಧತೆ ನಡೆದಿದೆ ಎಂದು ಹಿಂದೂ ಪರ ಸಂಘಟನೆಯ ಮುಖಂಡ ಈಶ್ವರ ಸಿಂಗ್‌ ಠಾಕೂರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಕರಣ ಕುರಿತು ರಾಷ್ಟ್ರಪತಿಗಳಿಗೂ ನವೆಂಬರ್‌ 5ರಂದು ಮನವಿ ಸಲ್ಲಿಸಲಾಗಿತ್ತು. ಅದಕ್ಕೆ ರಾಷ್ಟ್ರಪತಿಗಳ ಕಚೇರಿಯಿಂದ ಮುಖ್ಯ ಕಾರ್ಯ­ದರ್ಶಿಗಳಿಗೆ ಪತ್ರ ಬಂದಿದ್ದು, ದೂರು ಆಧರಿಸಿ ತನಿಖೆ ನಡೆಸಬೇಕು. ಅರ್ಜಿದಾರರ ಜೊತೆಗೆ ತಮ್ಮ ಕಚೇರಿಗೂ ಮಾಹಿತಿ ನೀಡಬೇಕು ಎಂದಿದೆ. ರಾಜ್ಯ ಸರ್ಕಾರ ಇನ್ನಾದರೂ ಹಿಂದೂಗಳ ಭಾವನೆಗಳನ್ನು ಅರಿತುಕೊಂಡು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಅಧಿಕಾರ ಯಾರಿಗೂ ಇಲ್ಲ. ಜಿಲ್ಲೆಗೆ ಭೇಟಿ ನೀಡಿದ್ದ ರಾಜ್ಯ ಗೃಹ ಸಚಿವರು ಈ ಪ್ರಕರಣ ಮುಖ್ಯಮಂತ್ರಿಗಳ ಗಮನದಲ್ಲಿದೆ ಎಂದು ತಿಳಿಸಿದ್ದರು. ಕಾನೂನು ಪ್ರಕಾರ ಏನು ಕ್ರಮಕೈಗೊಳ್ಳಬೇಕು ಎಂಬುದನ್ನು ಸರ್ಕಾರ ಪರಿಶೀಲಿಸಲಿ. ಅಮಾನತು­ಪಡಿಸಬೇಕು ಎಂಬುದು ನಮ್ಮ ಬೇಡಿಕೆ ಎಂದರು.

ಮುಂದುವರಿದ ಟೀಕೆ: ಜಿಲ್ಲಾಧಿಕಾರಿ­ಕಾರ್ಯವೈಖರಿ ವಿರುದ್ಧ ಟೀಕೆ ಮುಂದುವರಿಸಿದ ಅವರು, ಚಟ್ಟನಹಳ್ಳಿ ಗ್ರಾಮದಲ್ಲಿ ವರ್ಷಗಳಿಂದ ಕೃಷಿ ಮಾಡಿಕೊಂಡು ಇದ್ದ ರೈತರ ಭೂಮಿಯನ್ನು ವಕ್ಫ್‌ ಆಸ್ತಿ ಎಂದು ಪರಿವರ್ತಿಸಲು ಮುಂದಾಗಿದ್ದಾರೆ. ಇದರ ವಿರುದ್ಧವೂ ಹೋರಾಟ ನಡೆಯಲಿದೆ ಎಂದು ತಿಳಿಸಿದರು.

ಅಲ್ಲದೆ, ಉರ್ದು ವಿಶ್ವವಿದ್ಯಾಲಯದ ಸ್ಯಾಟಲೈಟ್ ಕೇಂದ್ರಕ್ಕಾಗಿ ಈ ಹಿಂದೆ ದಲಿತರು, ಗೊಂಡ ಸಮುದಾಯಕ್ಕೆ ನೀಡಿರುವ ಭೂಮಿಯನ್ನು ವಾಪಸು ಪಡೆಯಲು ಯತ್ನಿಸಲಾಗುತ್ತಿದೆ. ಹೀಗೆ ಸುಮಾರು 10 ಎಕರೆ ಭೂಮಿಯನ್ನು ವಾಪಸು ಪಡೆಯಲಾಗುತ್ತದೆ. ಇದು, ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಕೋಮು ಸೌಹಾರ್ದ ವೇದಿಕೆಯ ಮುಖಂಡರ ಹೇಳಿಕೆ ಉಲ್ಲೇಖಿಸಿ, ಹಿಂದೂ ಪರ ಸಂಘಟನೆಗಳು ಸುಳ್ಳು ಮಾಹಿತಿ ಆಧರಿಸಿ ಹೋರಾಟ ಮಾಡುತ್ತಿಲ್ಲ. ಡಿಸಿ ವಿರುದ್ಧ ವೈಯಕ್ತಿಕ ದ್ವೇಷವೂ ಇಲ್ಲ.  ವೇದಿಕೆ ಮುಖಂಡರ ಎದುರು ನೇರ ಸಂವಾದಕ್ಕೂ ಸಿದ್ಧ ಎಂದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಉಪೇಂದ್ರ ದೇಶಪಾಂಡೆ, ಬಜರಂಗ­ದಳದ ನೀಲೇಶ್‌ ರಕ್ಷಾಳ, ಚಂದ್ರಶೇಖರ ಗಾದಾ, ರಾಮಕೃಷ್ಣ ಸಾಳೆ, ಜಗನ್ನಾಥ ಭಂಗೂರ, ಯುವ ಮೋರ್ಚಾದ ಮಹೇಶ್ವರ ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.