
ಬೀದರ್: ಭಾರತ ಸಂಚಾರ ನಿಗಮ ನಿಯಮಿತದ (ಬಿಎಸ್‌ಎನ್‌ಎಲ್) ಸ್ಥಿರ ದೂರವಾಣಿ ಸಂಪರ್ಕ ಸೇವೆ ಜಿಲ್ಲೆಯ ಗ್ರಾಹಕರಿಗೆ ಸರಿಯಾಗಿ ಲಭಿಸುತ್ತಿಲ್ಲ. ಕಳೆದ 15 ದಿನಗಳಲ್ಲಿ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಸ್ಥಿರ ದೂರವಾಣಿ ಉಪಕರಣಗಳು ಒಂದೊಂದಾಗಿ ಸ್ತಬ್ಧಗೊಳ್ಳಲಾರಂಭಿಸಿವೆ.
ನಗರದ ಹೌಸಿಂಗ್ ಬೋರ್ಡ್ ಕಾಲೊನಿ, ಓಲ್ಡ್‌ಸಿಟಿಯ ಭೀಮನಗರ, ಶಹಾಗಂಜ್ ಪ್ರದೇಶದಲ್ಲಿ ಸ್ಥಿರ ದೂರವಾಣಿಗಳು ನಿಷ್ಕ್ರೀಯಗೊಂಡಿವೆ. ಬೀದರ್ ನಗರ ಪ್ರದೇಶದಲ್ಲಿರುವ ಬಹುತೇಕ ಸ್ಥಿರ ದೂರವಾಣಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.
ಸ್ಥಿರ ದೂರವಾಣಿಯಿಂದ ಮೊಬೈಲ್ ಫೋನ್‌ಗಳಿಗೆ ಕರೆ ಮಾಡಿದರೆ ಕರ್ಕಶ ಶಬ್ದ, ಎಂಗೆಜ್ ಟೋನ್ ಕೇಳಿ ಬರುತ್ತಿದೆ. ಡಯಲ್ ಮಾಡುವ ಹಂತದಲ್ಲಿರುವಾಗಲೇ ‘ನೀವು ಕರೆ ಮಾಡಿರುವ ಗ್ರಾಹಕರು ಸ್ವಿಚ್ಡ್ ಆಫ್ ಮಾಡಿದ್ದಾರೆ’, ‘ನೀವು ಕರೆ ಮಾಡಿರುವ ಗ್ರಾಹಕರು ವ್ಯಾಪ್ತಿ ಪ್ರದೇಶದಲ್ಲಿ ಇಲ್ಲ’, ‘ನೀವು ಕರೆ ಮಾಡಿರುವ ಗ್ರಾಹಕರು ಇನ್ನೊಂದು ಕರೆಯಲ್ಲಿ ನಿರತರಾಗಿದ್ದಾರೆ, ಸ್ವಲ್ಪ ಸಮಯದ ನಂತರ ಕರೆ ಮಾಡಿ’ ಎನ್ನುವ ಧ್ವನಿಮುದ್ರಿತ ಸಂದೇಶಗಳು ಕೇಳಿ ಬರುತ್ತಿವೆ.
ಬಿಎಸ್‌ಎನ್‌ಎಲ್ ಕಚೇರಿಯಲ್ಲಿ ದೂರುದಾರರ ಪಟ್ಟಿ ಬೆಳೆಯುತ್ತಲೇ ಇದೆ. ಗ್ರಾಹಕರು ದೂರು ಕೊಟ್ಟ ತಕ್ಷಣ ಟೆಲಿಫೋನ್ ಸಿಬ್ಬಂದಿ ಮನೆ, ಕಚೇರಿಗಳಿಗೆ ಭೇಟಿಕೊಟ್ಟು ಪರಿಶೀಲಿಸುತ್ತಿದ್ದಾರೆ. ದೂರವಾಣಿ ಕಚೇರಿಯಲ್ಲೇ ತಾಂತ್ರಿಕ ದೋಷ ಇದೆ ಎಂದು ಹೇಳಿ ಹೋಗುತ್ತಿದ್ದಾರೆ. ಬಿಎಸ್‌ಎನ್‌ಎಲ್ ಅಧಿಕಾರಿಗಳು ಗ್ರಾಹಕರಿಗೆ ಕೇವಲ ಭರವಸೆಯನ್ನೇ ಕೊಡುತ್ತಿದ್ದಾರೆ. ಗ್ರಾಹಕರ ಸಮಸ್ಯೆ ನಿವಾರಣೆಯಾಗುತ್ತಿಲ್ಲ.
ಬಿಎಸ್‌ಎನ್‌ಎಲ್ ಸಲಹಾ ಸಮಿತಿ ಸದಸ್ಯ ಸಂಗಮೇಶ ನಾಸಿಗಾರ್ ಅವರು ಬಿಎಸ್‌ಎನ್‌ಎಲ್ ಅಸಮರ್ಪಕ ಸೇವೆಗೆ ಬೇಸತ್ತು ಇಂಟರ್‌ನೆಟ್ ಸೇವೆ ಕಡಿತಗೊಳಿಸುವಂತೆ ಮೇ 29ರಂದು ಬೀದರ್‌ನ ಬಿಎಸ್ಎನ್‌ಎಲ್ ಅಧಿಕಾರಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅಲ್ಲಿನ ಸಿಬ್ಬಂದಿ ಸೇವೆ ಸ್ಥಗಿತಗೊಳಿಸುವ ಬದಲು ಎರಡು ತಿಂಗಳ ನಂತರ ₹5 ಸಾವಿರ ಮೊತ್ತದ ಬಿಲ್ ಕೊಟ್ಟು ಆಘಾತ ಉಂಟು ಮಾಡಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಗ್ರಾಹಕರು ತೊಂದರೆ ಅನುಭವಿಸುತ್ತಿದ್ದಾರೆ. ಆರು ತಿಂಗಳ ಹಿಂದೆ ಕೇಂದ್ರದ ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ದೂರು ಸಲ್ಲಿಸಿದ್ದೇನೆ. ಈ ವಾರದಲ್ಲಿ ಗ್ರಾಹಕರ ವೇದಿಕೆಯಲ್ಲಿ ಬಿಎಸ್‌ಎನ್‌ಎಲ್ ಟಿಡಿಎಂ ವಿರುದ್ಧ ದೂರು ದಾಖಲಿಸಲು ತೀರ್ಮಾನಿಸಿದ್ದೇನೆ ಎಂದು ಬಿಎಸ್‌ಎನ್‌ಎಲ್ ಸಲಹಾ ಸಮಿತಿ ಸದಸ್ಯ ಸಂಗಮೇಶ ನಾಸಿಗಾರ್ ಹೇಳುತ್ತಾರೆ.
ಬೀದರ್ ಟೆಲಿಕಾಂ ಪ್ರಧಾನ ಕಚೇರಿಯಲ್ಲಿನ ತಂತ್ರಾಂಶದಲ್ಲಿ ದೋಷ ಕಾಣಿಸಿಕೊಂಡಿದೆ. ತಂತ್ರಜ್ಞರು 10 ದಿನಗಳಿಂದ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಸ್ಥಿರ ದೂರವಾಣಿ ಗ್ರಾಹಕರಿಗೆ ತೊಂದರೆಯಾಗಿದೆ. ಸಂಭಾಷಣೆಗಳು ಸ್ಪಷ್ಟವಾಗಿ ಕೇಳಿ ಬರುತ್ತಿಲ್ಲ. ಸ್ಥಳೀಯ ತಂತ್ರಜ್ಞರಿಂದ ದೋಷ ಪತ್ತೆ ಸಾಧ್ಯವಾಗದಿದ್ದರೆ ಬೆಂಗಳೂರಿನ ತಂತ್ರಜ್ಞರಿಂದ ಪರಿಶೀಲನೆ ನಡೆಸಲಾಗುವುದು ಎಂದು ಬಿಎಸ್ಎನ್‌ಎಲ್ ಎಜಿಎಂ ಎಂ. ಗೋಪಾಲ ರೆಡ್ಡಿ ಹೇಳುತ್ತಾರೆ.
ಕೆಳ ಹಂತದ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಮೇಲಧಿಕಾರಿಗಳಿಗೆ ಪತ್ರ ಮಾತ್ರ ಬರೆಯಬಹುದು. ಅಗತ್ಯ ತಂತ್ರಾಂಶ ಹಾಗೂ ಉಪಕರಣಗಳನ್ನು ಪೂರೈಸುವಂತೆ ಸ್ಥಳೀಯ ಅಧಿಕಾರಿಗಳು ಹಿರಿಯ ಅಧಿಕಾರಿಗಳಿಗೆ ಪತ್ರಬರೆದರೂ ಅವರು ಸ್ಪಂದಿಸುತ್ತಿಲ್ಲ. ಆದಾಯ ಕಡಿಮೆ ಆದಾಯ ಇದೆ ಎನ್ನುವ ಒಂದೇ ಕಾರಣಕ್ಕೆ ಸೇವೆಯನ್ನು ವಿಸ್ತರಿಸಲು ಬಿಎಸ್‌ಎನ್‌ಎಲ್ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.
ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳು ಹೆಚ್ಚು ಸಮಸ್ಯೆ ಎದುರಿಸುತ್ತಿವೆ. ಸಂಸದರು ಉನ್ನತ ಮಟ್ಟದ ಅಧಿಕಾರಿಗಳ ಮೇಲೆ ಒತ್ತಡ ಹೇರುವ ಕೆಲಸ ಮಾಡುತ್ತಿಲ್ಲ ಎಂದು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.