ADVERTISEMENT

ಕೆಕೆಎಚ್‍ಆರ್‌ಎಸಿಎಸ್: 11 ಭಜನೆ ಕಿಟ್ ವಿತರಣೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2021, 12:43 IST
Last Updated 6 ಅಕ್ಟೋಬರ್ 2021, 12:43 IST
ಬೀದರ್‌ನ ಜನಸೇವಾ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ವತಿಯಿಂದ ಮಹಿಳಾ ಭಜನೆ ಮಂಡಳಿಗಳಿಗೆ ಭಜನೆ ಕಿಟ್ ವಿತರಿಸಲಾಯಿತು
ಬೀದರ್‌ನ ಜನಸೇವಾ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ವತಿಯಿಂದ ಮಹಿಳಾ ಭಜನೆ ಮಂಡಳಿಗಳಿಗೆ ಭಜನೆ ಕಿಟ್ ವಿತರಿಸಲಾಯಿತು   

ಬೀದರ್: ಕಲೆ ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡುವ ದಿಸೆಯಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘವು ಜಿಲ್ಲೆಯ 11 ಮಹಿಳಾ ಭಜನೆ ಮಂಡಳಿಗಳಿಗೆ ಭಜನೆ ಕಿಟ್ ಒದಗಿಸಿದೆ.

ನಗರದ ಪ್ರತಾಪನಗರದ ಜನಸೇವಾ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ ಚಳಕಾಪುರದ ಘತ್ತರಗಿ ಭಾಗ್ಯವಂತಿ ದೇವಸ್ಥಾನ ಭಜನೆ ಮಂಡಳಿ, ಮುಧೋಳದ ಲಕ್ಷ್ಮಿ ದೇವಸ್ಥಾನ ಭಜನೆ ಮಂಡಳಿ, ಬೀದರ್‍ನ ಅಕ್ಕ ಮಹಾದೇವಿ ಭಜನೆ ಮಂಡಳಿ, ನಾವದಗೇರಿಯ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ, ಹುಮನಾಬಾದ್‍ನ ವೆಂಕಟೇಶ್ವರ ಸೇವಾ ಸಮಿತಿ ಭಜನೆ ಮಂಡಳಿ, ಕಮಲನಗರದ ಭಾಗ್ಯವಂತಿ ಭಜನೆ ಮಂಡಳಿ, ಭೋಸಗಾದ ಅಕ್ಕಮಹಾದೇವಿ ಭಜನೆ ಮಂಡಳಿ, ಬಸವಕಲ್ಯಾಣದ ನಂದಿ ಬಸವೇಶ್ವರ ದೇವಸ್ಥಾನ ಭಜನೆ ಮಂಡಳಿ, ಪರುಷಕಟ್ಟೆ ದೇವಸ್ಥಾನ ಭಜನೆ ಮಂಡಳಿ, ಬೆಮಳಖೇಡದ ಜೈ ಭವಾನಿ ದೇವಸ್ಥಾನ ಭಜನೆ ಮಂಡಳಿ ಹಾಗೂ ಹುಲಸೂರಿನ ದೇಗುಲ ಮಹಾದೇವ ದೇವಸ್ಥಾನ ಭಜನೆ ಮಂಡಳಿಗೆ ಹಾರ್ಮೋನಿಯಂ, ಡೊಲಕ್, ಮೈಕ್ ಸೆಟ್ ಹಾಗೂ 10 ಜೋಡಿ ತಾಳ ಒಳಗೊಂಡ ಕಿಟ್ ವಿತರಣೆ ಮಾಡಲಾಯಿತು.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ನಿರ್ದೇಶಕ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ದೇಸಿ ಕಲೆಗಳನ್ನು ಉಳಿಸಿ ಬೆಳೆಸುವುದು ಹಾಗೂ ಕಲಾವಿದರಿಗೆ ಉತ್ತೇಜನ ನೀಡುವುದು ಭಜನೆ ಕಿಟ್ ವಿತರಣೆಯ ಉದ್ದೇಶ ಆಗಿದೆ ಎಂದು ತಿಳಿಸಿದರು.

ADVERTISEMENT

ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಲೆ, ಸಾಹಿತ್ಯ, ಸಾಂಸ್ಕೃತಿಕ, ಪರಂಪರೆಯ ಬೆಳವಣಿಗೆಗೆ ಸಂಘ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ ಮಾತನಾಡಿ, ಸಂಘ ಕಲಾವಿದರಿಗೆ ಭಜನೆ ಸಲಕರಣೆ ಕಲ್ಪಿಸಿರುವುದು ಸಂತಸದ ಸಂಗತಿಯಾಗಿದೆ. ಭಜನೆ ಸಲಕರಣಗಳು ಕಲೆ ಹಾಗೂ ಕಲಾವಿದರ ಬೆಳವಣಿಗೆಗೆ ನೆರವಾಗಲಿವೆ ಎಂದು ತಿಳಿಸಿದರು.

ಸಂಘದ ಜಿಲ್ಲಾ ಸಂಯೋಜಕ ರೇವಣಸಿದ್ದ ಜಾಡರ, ತಾಲ್ಲೂಕು ಸಂಯೋಜಕ ಗಣಪತಿ ಹಡಪದ, ವಿಕಾಸ ಅಕಾಡೆಮಿಯ ಔರಾದ್ ತಾಲ್ಲೂಕು ಸಂಚಾಲಕ ಗುರುನಾಥ ವಟಗೆ, ಪ್ರಿಯಾಂಕ ಪಾಟೀಲ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.