ADVERTISEMENT

131 ಗ್ರಾಮಕ್ಕೆ ನಿರಂತರಜ್ಯೋತಿ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 8:25 IST
Last Updated 3 ಫೆಬ್ರುವರಿ 2011, 8:25 IST

ಔರಾದ್: ನಿತ್ಯ 24 ಗಂಟೆಗಳ ಕಾಲ ನಿರಂತರ ವಿದ್ಯುತ್ ಪೂರೈಸುವ ಸರ್ಕಾರದ ಮಹತ್ವಾಕಾಂಕ್ಷಿ ನಿರಂತರ ಜ್ಯೋತಿ ಯೋಜನೆಯಡಿ ಔರಾದ್ ತಾಲ್ಲೂಕು ಆಯ್ಕೆಯಾಗಿದ್ದು, ಇದೇ 10ರಂದು ಭೂಮಿ ಪೂಜೆ ಕಾರ್ಯಕ್ರಮ ನೆರವೇರಲಿದೆ. ಶಾಸಕ ಪ್ರಭು ಚವ್ಹಾಣ ಬುಧವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಯೋಜನೆಯಡಿ ಪ್ರಥಮ ಹಂತದಲ್ಲಿ ಆಯ್ಕೆಯಾದ ಔರಾದ್‌ಗೆ 9.36 ಕೋಟಿ ರೂಪಾಯಿ ಮಂಜೂರಾಗಿದೆ. 

ಇದೇ 10ರಂದು ಮಧ್ಯಾಹ್ನ 12 ಗಂಟೆಗೆ ಪಟ್ಟಣದ ವಜ್ಜರ ಬಾವಿ ಬಳಿ ನಿರಂತರ ಜ್ಯೋತಿ ಯೋಜನೆಯ ಭೂಮಿ ಪೂಜೆ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ರೇವು ನಾಯಕ ಬೆಳಮಗಿ, ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮನಿಶ ಮೌದ್ಗಿಲ್ ಮತ್ತು ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿದ್ಯುತ್ ಖಾತೆ ಸಚಿವೆ ಶೋಭಾ ಅವರು ಬರಲು ಒಪ್ಪಿಕೊಂಡಿದ್ದು, ಈ ಬಗ್ಗೆ ಪ್ರವಾಸ ಕಾರ್ಯಕ್ರಮ ನಿಗದಿಯಾಗಬೇಕಿದೆ ಎಂದು ಅವರು ಹೇಳಿದರು.

ಸೌಲಭ್ಯ: ತಾಲ್ಲೂಕಿನ ನಿರಂತರ ಜ್ಯೋತಿ ಯೋಜನೆ ಕಾಮಗಾರಿ ಬಸವಕಲ್ಯಾಣದ ಓಂ ಎಲೆಕ್ಟ್ರಿಕಲ್ ಸಂಸ್ಥೆಗೆ ಒಪ್ಪಿಸಲಾಗಿದೆ. ತಾಂಡಾಗಳು ಸೇರಿ ಒಟ್ಟು 131 ಗ್ರಾಮಗಳು ಯೋಜನೆಯ ವ್ಯಾಪ್ತಿಗೆ ಬರಲಿವೆ ಎಂದು ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸಂತೋಷ ತಿಳಿಸಿದರು.

131 ಗ್ರಾಮಗಳಿಗೆ ನಿರಂತರ ವಿದ್ಯುತ್ ಒದಗಿಸಲು ಚಿಮೆಗಾಂವ್, ಕರಂಜಿ, ದಾಬಕಾ, ಕಾಳಗಾಪುರ, ಚಾಂದೋರಿ, ಕೌಠಾ ಸೇರಿ ಒಟ್ಟು ಆರು ಫೀಡರ್ ಅಳವಡಿಸಲಾಗುವುದು. ಒಟ್ಟು 323 ಕಿ.ಮೀ. ಹೊಸದಾಗಿ ವಿದ್ಯುತ್ ತಂತಿ ಹಾಕಲಾಗುತಿದೆ. 176 ಟ್ರಾನ್ಸ್‌ಫಾರ್ಮರ್ ಅಳವಡಿಸಲಾಗುತ್ತಿದೆ. ಕಾಮಗಾರಿ ಮುಗಿಸಲು ಒಂದು ವರ್ಷ ಕಾಲಮಿತಿ ನೀಡಲಾಗಿದೆ ಎಂದು ಅವರು ವಿವರಿಸಿದರು.

ಈ ಹೊಸ ಯೋಜನೆ ಮನೆಗಳಿಗೆ ಮತ್ತು ವಾಣಿಜ್ಯ ಉದ್ದೇಶಗಳಿಗೆ ಬಳಕೆಯಾಗಲಿದೆ. ಈಗಾಗಲೇ ಇರುವ ಫೀಡರ್ ಮತ್ತು ಟ್ರಾನ್ಸ್‌ಫಾರ್ಮರ್ ರೈತರ ಪಂಪಸೆಟ್‌ಗಳಿಗೆ ಮಾತ್ರ ಬಳಸಲು ಅವಕಾಶ ನೀಡಲಾಗುತ್ತದೆ. ಇದರಿಂದ ರೈತರಿಗೂ ಅನುಕೂಲವಾಗಲಿದೆ ಎಂದು ಜೆಸ್ಕಾಂ ಎಂಜಿನಿಯರ್ ತಿಳಿಸಿದರು.ಜಿಪಂ. ಸದಸ್ಯ ಧುಳಪ್ಪ ಸೂರಂಗೆ, ಕಾಶಿನಾಥ ಜಾಧವ್, ಧುರೀಣ ರಮೇಶ ಬಿರಾದಾರ, ಬಂಡೆಪ್ಪ ಕಂಟೆ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.