ADVERTISEMENT

15 ದಿನದೊಳಗೆ ಉದ್ಯೋಗ ಖಾತರಿ ಕೂಲಿ ಪಾವತಿ: ಶೆಟ್ಟರ್ ಸೂಚನೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2012, 9:10 IST
Last Updated 11 ಜನವರಿ 2012, 9:10 IST

ಬೀದರ್: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ 15 ದಿನಗಳ ಒಳಗೆ ಕೂಲಿ ಪಾವತಿಸುವಂತೆ ಸೂಚಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.

ನಗರದ ಜಿಲ್ಲಾ ರಂಗಮಂದಿರದಲ್ಲಿ ಮಂಗಳವಾರ ನಡೆದ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಪ್ರಥಮ ಜಿಲ್ಲಾ ಸಮ್ಮೇಳನದಲ್ಲಿ ಮಾತನಾಡಿದರು.

ಖಾತರಿ ಯೋಜನೆಯಡಿ ಅವ್ಯವಹಾರ ಆಗಿರುವ ಬಗ್ಗೆ ದೂರು ಬಂದ ಕಡೆಗಳಲ್ಲಿ ಕೂಲಿ ಪಾವತಿ ತಡೆ ಹಿಡಿಯಲಾಗಿದೆ. ಯಾವುದೇ ಅವ್ಯವಹಾರ ನಡೆಯದ ಗ್ರಾಮ ಪಂಚಾಯಿಗಳಿಗೆ ಶೀಘ್ರ ಹಣ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಉದ್ಯೋಗ ಖಾತರಿ ಮಹತ್ವದ ಯೋಜನೆಯಾಗಿದೆ. ಹೀಗಾಗಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ಜನರಿಗೆ ಇದರ ಲಾಭ ಸಿಗಲು ಸಾಧ್ಯವಿದೆ. ಖಾತರಿ ಯೋಜನೆಯಡಿ ಏಕಕಾಲಕ್ಕೆ 5-6 ಕಡೆ ಮಾತ್ರ ಕೆಲಸ ಕೈಗೆತ್ತಿಕೊಳ್ಳಬೇಕು. ಹಾಗಾದಲ್ಲಿ ಪರಿಶೀಲನೆ ನಡೆಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಸಾರ್ವಜನಿಕರ ಮಾಹಿತಿಗಾಗಿ ಯೋಜನೆಯಡಿ ಕೈಗೊಳ್ಳಲಾದ ಕೆಲಸಗಳ ಬಗ್ಗೆ ನಾಮಫಲಕ ಹಾಕಬೇಕು. ಅವ್ಯವಹಾರ ಆಗದಂತೆ ನೋಡಿಕೊಳ್ಳುವುದಕ್ಕಾಗಿ ಉದ್ಯೋಗ ಖಾತರಿ ಕಾಮಗಾರಿಗಳನ್ನು ವಿಡಿಯೋ ಚಿತ್ರೀಕರಣ ಮಾಡುವಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಹೇಳಿದರು.


ಹೆಚ್ಚಿನ ಅನುದಾನ: ಇನ್ನು ಮುಂದೆ 13ನೇ ಹಣಕಾಸು ಯೋಜನೆಯಡಿ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅನುದಾನ ಬರಲಿದೆ. ಆದ್ದರಿಂದ ಚುನಾಯಿತ ಪ್ರತಿನಿಧಿ ಹಾಗೂ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಸಲಹೆ ಮಾಡಿದರು.

ಗ್ರಾಮ ಸಭೆ: ಗ್ರಾಮಸಭೆಗಳು ಸಮರ್ಪಕವಾಗಿ ನಡೆದರೆ ಮಾತ್ರ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸಲು ಸಾಧ್ಯ. ಆದರೆ, ಕೆಲಕಡೆ ಗ್ರಾಮಸಭೆ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ ಎಂಬ ದೂರುಗಳು ಬಂದಿದೆ. ಗ್ರಾಮಸಭೆಗಳನ್ನು ವಿಡಿಯೋ ಚಿತ್ರೀಕರಣ ಮಾಡುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಸಚಿವ ರೇವುನಾಯಕ್ ಬೆಳಮಗಿ, ವಿಧಾನ ಪರಿಷತ್ ಸದಸ್ಯ ಬಸವರಾಜ ಪಾಟೀಲ್ ಹುಮನಾಬಾದ್, ಶಾಸಕರಾದ ಈಶ್ವರ ಖಂಡ್ರೆ, ಬಂಡೆಪ್ಪ ಕಾಶೆಂಪೂರ್, ರಹೀಮ್‌ಖಾನ್, ರಾಜಶೇಖರ ಪಾಟೀಲ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕುಶಾಲ ಪಾಟೀಲ್ ಗಾದಗಿ, ಬಿಎಸ್‌ಎಸ್‌ಕೆ ಅಧ್ಯಕ್ಷ ಸುಭಾಷ ಕಲ್ಲೂರು, ಉಪಾಧ್ಯಕ್ಷ ಎಂ.ಜಿ. ಮುಳೆ, ಮಾಜಿ ಶಾಸಕ ಪ್ರಕಾಶ ಖಂಡ್ರೆ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಬುವಾಲಿ, ಜಿಪಂ ಸಿಇಒ ಜಿತೇಂದ್ರ ನಾಯಕ್, ಜಿ.ಪಂ. ಸದಸ್ಯ ವೀರಣ್ಣ ಪಾಟೀಲ್, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಒಕ್ಕೂಟದ ಜಿಲ್ಲಾ ಸಂಚಾಲಕ ವಿಜಯಕುಮಾರ ಸೋನಾರೆ ಮತ್ತಿತರರು ಉಪಸ್ಥಿತರಿದ್ದರು. ಬಸವರಾಜ ರುದನೂರು ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT