ADVERTISEMENT

ಬೀದರ್: ರಿಂಗ್ ರಸ್ತೆ ಕಾಮಗಾರಿಗೆ ₹ 15 ಕೋಟಿ ಅನುದಾನ

ಸಂಸದ ಭಗವಂತ ಖೂಬಾ ಬೇಡಿಕೆಗೆ ಕೆಕೆಆರ್‍ಡಿಬಿ ಅಧ್ಯಕ್ಷ ರೇವೂರ್ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2021, 13:45 IST
Last Updated 6 ಫೆಬ್ರುವರಿ 2021, 13:45 IST
ಬೀದರ್ ಹೊರವಲಯದ ಚಿಕ್ಕಪೇಟೆ ಸಮೀಪ ರಿಂಗ್ ರಸ್ತೆ ಕಾಮಗಾರಿ ಅಪೂರ್ಣಗೊಂಡಿರುವುದನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ್ ವೀಕ್ಷಿಸಿದರು
ಬೀದರ್ ಹೊರವಲಯದ ಚಿಕ್ಕಪೇಟೆ ಸಮೀಪ ರಿಂಗ್ ರಸ್ತೆ ಕಾಮಗಾರಿ ಅಪೂರ್ಣಗೊಂಡಿರುವುದನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ್ ವೀಕ್ಷಿಸಿದರು   

ಬೀದರ್: ಚಿಕ್ಕಪೇಟೆಯಿಂದ ನೌಬಾದ್ ವರೆಗಿನ ರಿಂಗ್ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ್ ಅವರು ₹ 15 ಕೋಟಿ ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ ಎಂದು ಸಂಸದ ಭಗವಂತ ಖೂಬಾ ತಿಳಿಸಿದ್ದಾರೆ.

ಕಾಂಗ್ರೆಸ್ ಅಧಿಕಾರ ಅವಧಿಯಲ್ಲಿ ಶಹಾಪುರ ಗೇಟ್ ಸಮೀಪದಿಂದ ನೌಬಾದ್‍ಗೆ ಸಂಪರ್ಕ ಕಲ್ಪಿಸುವ ರಿಂಗ್ ರಸ್ತೆ ಪೈಕಿ ಚಿಕ್ಕಪೇಟೆಯಿಂದ ನೌಬಾದ್‍ವರೆಗಿನ 4 ಕಿ.ಮೀ. ಉದ್ದದ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಹೇಳಿದ್ದಾರೆ.

ನಗರದಲ್ಲಿ ನಡೆದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸಭೆಯಲ್ಲಿ ಕಾಮಗಾರಿ ಪೂರ್ಣಗೊಳ್ಳದ ಕಾರಣ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ದತ್ತಾತ್ರೇಯ ಪಾಟೀಲರ ಗಮನ ಸೆಳೆದಿದ್ದೆ ಎಂದು ಹೇಳಿದ್ದಾರೆ.

ADVERTISEMENT

ಕೂಡಲೇ ಮಂಡಳಿ ಅನುದಾನದಲ್ಲಿ ಕಾಮಗಾರಿ ಕೈಗೊಳ್ಳಬೇಕು. ಅನುದಾನದ ಕೊರತೆಯಿದ್ದಲ್ಲಿ ಎಲ್ಲ ಶಾಸಕರ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನ ಕಡಿತಗೊಳಿಸಿ, ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದ್ದೆ. ಸಭೆಯ ನಂತರ ಅವರನ್ನು ಚಿಕ್ಕಪೇಟೆ ಸಮೀಪದ ಕಾಮಗಾರಿ ಸ್ಥಳಕ್ಕೆ ಕರೆದೊಯ್ದು ತೋರಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಪೂರ್ಣ ರಸ್ತೆ ಪೂರ್ಣಗೊಳಿಸುವುದು ಅವಶ್ಯಕವಾಗಿದೆ. ಇಲ್ಲದಿದ್ದರೆ ಹಿಂದೆ ನಿರ್ಮಿಸಿದ ರಸ್ತೆಯೂ ಉಪಯೋಗಕ್ಕೆ ಬರುವುದಿಲ್ಲ ಎಂದು ಪ್ರತಿಕ್ರಿಯಿಸಿದ ಅವರು, ಕಾಮಗಾರಿ ಪೂರ್ಣಗೊಳಿಸಲು ಅನುದಾನ ನೀಡುವ ಆಶ್ವಾಸನೆ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

ಶಾಸಕರಾದ ರಾಜಶೇಖರ ಪಾಟೀಲ, ರಹೀಂಖಾನ್, ಪ್ರಾದೇಶಿಕ ಆಯುಕ್ತ ಎನ್. ಪ್ರಸಾದ್, ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗ್ವಾರ ಕಾಮಗಾರಿ ಪರಿಶೀಲನೆ ಸ್ಥಳದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.