ADVERTISEMENT

ನಗರದಲ್ಲಿ 151 ಸಾರ್ವಜನಿಕ ಗಣೇಶನ ಪ್ರತಿಷ್ಠಾಪನೆ

ಗಣನಾಯಕನಿಗೆ ಭಕ್ತ ಸಮೂಹದಿಂದ ಸರಳ ಸ್ವಾಗತ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2021, 14:37 IST
Last Updated 11 ಸೆಪ್ಟೆಂಬರ್ 2021, 14:37 IST
ಬೀದರ್‌ನಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಅವರು ಗಣೇಶನಿಗೆ ಆರತಿ ಬೆಳಗಿ ಪೂಜೆ ಸಲ್ಲಿಸಿದರು
ಬೀದರ್‌ನಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಅವರು ಗಣೇಶನಿಗೆ ಆರತಿ ಬೆಳಗಿ ಪೂಜೆ ಸಲ್ಲಿಸಿದರು   

ಬೀದರ್‌: ನಗರದ 151 ಕಡೆ ಸಾರ್ವಜನಿಕ ಗಣೇಶನ ಪ್ರತಿಷ್ಠಾಪನೆ ಮಾಡಿ ಭಕ್ತಿ, ಶ್ರದ್ಧೆಯಿಂದ ಪೂಜೆ ಸಲ್ಲಿಸಲಾಗುತ್ತಿದೆ. ರಾಜ್ಯ ಸರ್ಕಾರ ಕೊನೆಯ ಕ್ಷಣದಲ್ಲಿ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಅನುಮತಿ ನೀಡಿದರೂ ಮೂರ್ತಿಗಳಿಗೆ ಅಲಂಕಾರ ಮಾಡಿ ಮಂಟಪಗಳು ವಿದ್ಯುತ್ ದೀಪಗಳಿಂದ ಝಗಮಗಿಸುವಂತೆ ಮಾಡಲಾಗಿದೆ.

ಕೋವಿಡ್‌ ಕಾರಣ ಭಕ್ತರು ಈ ಬಾರಿ ಗಣನಾಯಕನನ್ನು ಅತ್ಯಂತ ಸರಳವಾಗಿಯೇ ಬರ ಮಾಡಿಕೊಂಡಿದ್ದಾರೆ. ಮಂಡಳಿಗಳು ಮನರಂಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿಲ್ಲ. ಕೇವಲ ಪೂಜೆಗೆ ಮಹತ್ವ ನೀಡಲಾಗಿದೆ.

ನಗರದ ಕ್ರಾಂತಿ ಗಣೇಶ, ಹರಳಯ್ಯ ವೃತ್ತ, ರೋಟರಿ ವೃತ್ತ, ವಿದ್ಯಾನಗರ, ಕುಂಬಾರವಾಡ, ಗುಂಪಾ, ನಾವದಗೇರಿ, ಲಾಡಗೇರಿ, ಚಿದ್ರಿ ರಸ್ತೆ, ಎಲ್‌ಐಜಿ, ಶಿವನಗರ, ಗುರುನಗರ, ಮಾಧವನಗರ ಕಾಲೊನಿ, ಆದರ್ಶ ಕಾಲೊನಿ, ಬಸವನಗರ, ಭೂವಿಗಲ್ಲಿ, ಪಾಠಕ್‌ಗಲ್ಲಿ ಹಾಗೂ ನೌಬಾದ್‌ನಲ್ಲಿ ಅಂದದ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಗಿದೆ.

ADVERTISEMENT

ಗಣೇಶನ ದರ್ಶನ ಪಡೆದ ಸಚಿವ ಚವಾಣ್:ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಶನಿವಾರ ನಗರದ ವಿವಿಧೆಡೆ ಸಂಚರಿಸಿ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ಪ್ರತಿಷ್ಠಾಪಿಸಿರುವ ಗಣಪತಿಗಳ ದರ್ಶನ ಪಡೆದರು.

ಕೆ.ಇ.ಬಿ ಹತ್ತಿರ ಯುವಾ ಹಿಂದೂ ಸೇನಾ ಗಣೇಶ ಮಂಡಳ, ಬಾಲ ಹನುಮಾನ ಗಣೇಶ ಮಂಡಳದಲ್ಲಿ ಏಕದಂತನ ದರ್ಶನ ಮಾಡಿ ಆರತಿ ಬೆಳಗಿದರು.

ಸರಳ ಮತ್ತು ಸುರಕ್ಷತಾ ಕ್ರಮಗಳೊಂದಿಗೆ ಹಬ್ಬ ಆಚರಣೆ ಮಾಡಬೇಕು. ಗಣೇಶ ವಿಸರ್ಜನೆ ಕಾರ್ಯಕ್ರಮವೂ ಸರಳವಾಗಿ ನಡೆಯಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಗಣೇಶ ಮಹಾಮಂಡಳದ ಪ್ರಧಾನ ಕಾರ್ಯದರ್ಶಿ ಬಾಬು ವಾಲಿ, ಮುಖಂಡರಾದ ಬಸವರಾಜ ಪವಾರ್, ಅರಹಂತ ಸಾವಳೆ, ವೀರಶೆಟ್ಟಿ ಖ್ಯಾಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.