ಬೀದರ್: 2012-13ನೇ ಸಾಲಿಗಾಗಿ ಯೋಜನಾ ವೆಚ್ಚದ ಅಡಿಯಲ್ಲಿ 167 ಕೋಟಿ 10 ಲಕ್ಷ ರೂಪಾಯಿಯ ಆಯವ್ಯಯಕ್ಕೆ ಶುಕ್ರವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಾಬುರಾವ್ ಕಾರಬಾರಿ ಆಯವ್ಯಯ ಮಂಡಿಸಿದರು. ಕಳೆದ ವರ್ಷ 130 ಕೋಟಿ 99 ಲಕ್ಷ ರೂಪಾಯಿಯ ಅನುದಾನಕ್ಕೆ ಅನುಮೋದನೆ ನೀಡಲಾಗಿತ್ತು. ಪ್ರಸ್ತುತ ಅನುಮೋದನೆ ನೀಡಿರುವ ಅನುದಾನ ಕಳೆದ ವರ್ಷಕ್ಕಿಂತ 36 ಕೋಟಿ 10 ಲಕ್ಷ ರೂಪಾಯಿ ಅಧಿಕವಾಗಿದೆ.
ಇಲಾಖಾವಾರು ಅನುದಾನದ ವಿವರ ಹೀಗಿದೆ.
ಶಿಕ್ಷಣ ಇಲಾಖೆ: ಪ್ರಸ್ತುತ ಸಾಲಿನಲ್ಲಿ ರೂ. 4819 ಲಕ್ಷ ಅನುದಾನದ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ. ಇದು ಕಳೆದ ಸಾಲಿಗಿಂತ ರೂ. 16 ಕೋಟಿ ಅಧಿಕವಾಗಿದೆ. ಇದರಲ್ಲಿ ಹೊಸದಾಗಿ ಅನುದಾನಕ್ಕೆ ಒಳಒಪಡುವ ಖಾಸಗಿ ಪ್ರೌಢಶಾಲೆಗಳಿಗೆ ಸಹಾಯಧನ ನೀಡಲು ರೂ. 1.21ಕೋಟಿ ನಿಗದಿಪಡಿಸಲಾಗಿದೆ.
ಯುವಜನ ಸೇವೆ ಮತ್ತು ಕ್ರೀಡೆ: ರೂ. 79 ಲಕ್ಷ ಅನುದಾನ ಕಲ್ಪಿಸಲಾಗಿದ್ದು, ಕಳೆದ ಸಾಲಿಗಿಂತ ರೂ. 18 ಲಕ್ಷ ಅಧಿಕವಾಗಿದೆ.
ಆರೋಗ್ಯ ಇಲಾಖೆ: ರೂ. 9.57 ಕೋಟಿ ಅನುದಾನ ಒದಗಿಸಲಾಗಿದ್ದು, ಕಳೆದ ಸಾಲಿಗಿಂತ ರೂ. 3.81 ಕೋಟಿ ಅಧಿಕವಾಗಿದೆ. ಆಯುಷ್ ಇಲಾಖೆಗೆ ರೂ. 54 ಲಕ್ಷ ಅನುದಾನ ಕಲ್ಪಿಸಲಾಗಿದೆ.
ಗ್ರಾಮೀಣ ನೀರು ಪೂರೈಕೆ ತ್ತು ನಿರ್ವಹಣೆ: ಕೊಳವೆ ಬಾವಿಗಳ ನಿರ್ವಹಣೆಗಾಗಿ ರೂ. 62 ಲಕ್ಷ ನಿಗದಿಪಡಿಸಲಾಗಿದೆ. ಸಂಪೂರ್ಣ ಸ್ವಚ್ಚತಾ ಆಂದೋಲನಕ್ಕಾಗಿ ರೂ. 60 ಲಕ್ಷ ಮೀಸಲಿರಿಸಲಾಗಿದೆ.
ಸಮಾಜ ಕಲ್ಯಾಣ: ಪರಿಶಿಷ್ಟ ಜಾತಿ ಕಲ್ಯಾಣಕ್ಕಾಗಿ ರೂ. 980 ಲಕ್ಷ ನಿಗದಿಪಡಿಸಲಾಗಿದ್ದು, ಕಳೆದ ಸಾಲಿಗಿಂತ ರೂ. 239 ಲಕ್ಷ ಹೆಚ್ಚಳವಾಗಿದೆ. ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕಾಗಿ ರೂ. 415 ಲಕ್ಷ ನಿಗದಿಪಡಿಸಲಾಗಿದ್ದು, ಕಳೆದ ವರ್ಷಕ್ಕಿಂತ ರೂ. 169 ಲಕ್ಷ ಹೆಚ್ಚಳವಾಗಿದೆ. ವಿಶೇಷ ಘಟಕ ಯೋಜನೆಯಡಿ ರೂ. 1.54 ಕೋಟಿ ಅನುದಾನ ಕಲ್ಪಿಸಲಾಗಿದೆ. ಉಪಾಧ್ಯಕ್ಷೆ ಸಂತೋಷಮ್ಮ ಪುಂಡಲೀಕರಾವ್, ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಮೀರ್ ಅನೀಸ್ ಅಹಮ್ಮದ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.