ADVERTISEMENT

ಮಹಿಳೆಯರಿಗೆ ದೇವಾಲಯ ಪ್ರವೇಶಕ್ಕಿಂತ, ಸಂಸತ್‌, ವಿಧಾನಸಭೆಗೆಬೇಕು: ಶಿವಗಂಗಾ ರುಮ್ಮಾ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2018, 15:34 IST
Last Updated 26 ಅಕ್ಟೋಬರ್ 2018, 15:34 IST
ಬೀದರ್‌ನಲ್ಲಿ ಶುಕ್ರವಾರ 18ನೇ ರಾಷ್ಟ್ರೀಯ ಕವಯತ್ರಿಯರ ಸಮ್ಮೇಳನಕ್ಕೆ ಮೈಸೂರಿನ ಡಾ.ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಸರ್ವಮಂಗಳಾ ಚಾಲನೆ ನೀಡಿದರು. ಸುರೇಶ ಚನಶೆಟ್ಟಿ, ಮಂಗಲಾ ಕಪರೆ, ಶಾಲಿನಿ ಚಿಂತಾಮಣಿ, ಭಗವಂತ ಖೂಬಾ, ಬಂಡೆಪ್ಪ ಕಾಶೆಂಪೂರ, ಅಬ್ದುಲ್‌ ಖರೀರ್, ಲೀಲಾವತಿ ಪ್ರಸಾದ, ಲಾರಿ ಆಜಾದ್, ಪೂರ್ಣಿಮಾ ಜಿ., ಅಕ್ಕ ಅನ್ನಪೂರ್ಣ, ಭಾರತಬಾಯಿ ಶೇರಿಕಾರ, ರತ್ನಾ ಪಾಟೀಲ ಇದ್ದಾರೆ
ಬೀದರ್‌ನಲ್ಲಿ ಶುಕ್ರವಾರ 18ನೇ ರಾಷ್ಟ್ರೀಯ ಕವಯತ್ರಿಯರ ಸಮ್ಮೇಳನಕ್ಕೆ ಮೈಸೂರಿನ ಡಾ.ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಸರ್ವಮಂಗಳಾ ಚಾಲನೆ ನೀಡಿದರು. ಸುರೇಶ ಚನಶೆಟ್ಟಿ, ಮಂಗಲಾ ಕಪರೆ, ಶಾಲಿನಿ ಚಿಂತಾಮಣಿ, ಭಗವಂತ ಖೂಬಾ, ಬಂಡೆಪ್ಪ ಕಾಶೆಂಪೂರ, ಅಬ್ದುಲ್‌ ಖರೀರ್, ಲೀಲಾವತಿ ಪ್ರಸಾದ, ಲಾರಿ ಆಜಾದ್, ಪೂರ್ಣಿಮಾ ಜಿ., ಅಕ್ಕ ಅನ್ನಪೂರ್ಣ, ಭಾರತಬಾಯಿ ಶೇರಿಕಾರ, ರತ್ನಾ ಪಾಟೀಲ ಇದ್ದಾರೆ   

ಬೀದರ್‌: ‘ಆಧುನಿಕ ಮಹಿಳೆಯರಿಗೆ ಬೇಕಿರುವುದು ದೇವಾಲಯ ಪ್ರವೇಶವಲ್ಲ. ಸಂಸತ್ತು ಹಾಗೂ ವಿಧಾನಸಭೆಗಳ ಪ್ರವೇಶಕ್ಕೆ ಮಹಿಳೆಯರು ಹೆಚ್ಚು ಒತ್ತು ಕೊಡುವ ಅಗತ್ಯವಿದೆ’ ಎಂದು ಸಮ್ಮೇಳನಾಧ್ಯಕ್ಷೆ ಡಾ.ಶಿವಗಂಗಾ ರುಮ್ಮಾ ಹೇಳಿದರು.

ನಗರದ ಜಿಲ್ಲಾ ರಂಗ ಮಂದಿರದಲ್ಲಿ ಶುಕ್ರವಾರ 18ನೇ ರಾಷ್ಟ್ರೀಯ ಕವಯತ್ರಿಯರ ಸಮ್ಮೇಳನದಲ್ಲಿ ಅವರು ಪ್ರಮುಖ ಭಾಷಣ ಮಾಡಿದರು.

‘ಶಬರಿಮಲೆ ಅಯ್ಯಪ್ಪ ದೇವಸ್ಥಾನ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಅವಕಾಶ ಕಲ್ಪಿಸಿದೆ. ಮಹಿಳಾ ಪರ ಚಿಂತಕರು ಅದನ್ನೊಂದು ಬಿಡುಗಡೆ ಎನ್ನುತ್ತಿದ್ದಾರೆ. ಆದರೆ ದೇವಾಲಯಗಳೆಂಬ ನಾಲ್ಕು ಗೋಡೆಗಳಲ್ಲಿ ಅವಳು ಕಳೆದು ಹೋಗಲಿದ್ದಾಳೆ’ ಎಂದು ವಿಷಾದ ವ್ಯಕ್ತಪಡಿಸಿದರು.

ADVERTISEMENT

‘ಹಿಂದಿನ ಕಾಲದಲ್ಲಿ ದೇವಾಲಯದ ಹೊರಗಿದ್ದು ಅವಮಾನ ಅನುಭವಿಸುವುದು ಅವರ ಆರ್ಥಿಕ ಸ್ಥಿತಿಯೊಂದಿಗೂ ತಳಕು ಹಾಕಿಕೊಂಡಿತ್ತು. ಏಕೆಂದರೆ ದೇವಾಲಯದ ಹೊರಗಿರುವ ಮಹಿಳೆಯರಿಗೆ ಸಂಪತ್ತು ಮತ್ತು ಅಧಿಕಾರದಲ್ಲಿ ಪಾಲು ಇರಲಿಲ್ಲ.ಆಗಿನ ಕಾಲದ ದೇವಾಲಯಗಳು ಶಾಸಕಾಂಗಗಳಾಗಿದ್ದವು. ದೇವಾಲಯದ ಹೆಸರಿನಲ್ಲಿ ಮಹಿಳೆಯರನ್ನು ವಂಚಿಸಲಾಗುತ್ತಿತ್ತು. ಈಗ ಹಾಗಿಲ್ಲ. ಮಹಿಳೆಯರು ಸ್ವತಃ ಶಾಸಕಾಂಗಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅವರಿಗೆ ದಾರಿ ತಪ್ಪಿಸುವ ಮೂಲಕ ದೇವಾಲಯದೊಳಗೆ ಪ್ರವೇಶ ನೀಡಲಾಗುತ್ತಿದೆ’ ಎಂದು ತಿಳಿಸಿದರು.

‘ಇಡೀ ಭಾರತದಲ್ಲಿ ಮಹಿಳೆಯರು ಅಕ್ಷರ ಲೋಕವನ್ನು ಪ್ರವೇಶಿಸಿದ ದಾಖಲೆ ಸಿಗುವುದು ದಕ್ಷಿಣ ಭಾರತದಲ್ಲಿ. ಮೊದಲು ಹುಮನಾಬಾದ್ ತಾಲ್ಲೂಕಿನ ಜಲಸಂಗಿಯಲ್ಲಿ ವಿಕ್ರಮಾದಿತ್ಯನ ಕಾಲದಲ್ಲಿ ಕೆತ್ತಲಾದ ಮಹಿಳೆ ಪತ್ರ ಬರೆಯುತ್ತಿರುವ ಶಿಲ್ಪ, ಕಲಬುರ್ಗಿ ಜಿಲ್ಲೆಯ ಕಾಳಗಿಯ ತ್ರಿಕೂಟ ದೇವಸ್ಥಾನದ ಹಿಂಬದಿಯಲ್ಲಿ ನಾಗ ಮಹಿಳೆಯೊಬ್ಬಳು ಹಸ್ತಪ್ರತಿಯನ್ನು ಓದುತ್ತಿರುವ ಶಿಲ್ಪ, ಇದೇ ಮಾದರಿಯಲ್ಲಿ ಚಿಂಚನಸೂರಿನಲ್ಲಿ ಸಿಕ್ಕ ಶಿಲ್ಪಗಳು ಈ ಭಾಗದಲ್ಲಿ ಮಹಿಳೆಯರಿಗೆ ಶಿಕ್ಷಣ ಲಭ್ಯವಿತ್ತು ಎನ್ನುವುದನ್ನು ದೃಢೀಕರಿಸುತ್ತವೆ’ ಎಂದು ಹೇಳಿದರು.

‘ನಾಗಾರ್ಜುನ ಕೊಂಡದಲ್ಲಿ ದೊರಕಿರುವ ಶಿಲ್ಪದಲ್ಲಿ ಲಿಪಿಕಾರನೊಬ್ಬ ರಾಣಿ ಮಾಯೆಯ ಕನಸಿನ ಅರ್ಥವನ್ನು ವಿವರಿಸುವ ಚಿತ್ರವಿದೆ. ಈ ಎಲ್ಲ ಶಿಲ್ಪಗಳಲ್ಲಿ ನೇರವಾಗಿ ಮಹಿಳೆಯರೇ ಹಸ್ತಪ್ರತಿಯನ್ನು ಓದುತ್ತಿರುವ ಹಾಗೂ ಬರೆಯುತ್ತಿರುವ ಉಬ್ಬು ಶಿಲ್ಪಗಳನ್ನು ಕಾಣಬಹುದಾಗಿದೆ’ ಎಂದು ವಿವರಿಸಿದರು.

‘ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರಗಳ ಸಂಖ್ಯೆ ಕಡಿಮೆ. ಗಂಡು ಹೆಣ್ಣಿನ ಅನುಪಾತದಲ್ಲೂ ವ್ಯತ್ಯಾಸ ಇದೆ. ಕೇರಳ ಪ್ರಮೀಳಾ ರಾಜ್ಯವೆಂದೇ ಪ್ರಾಚೀನ ಕಾಲದಲ್ಲಿ ಪ್ರಸಿದ್ಧಿ ಪಡೆದಿತ್ತು’ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಸಂಸದ ಭಗವಂತ ಖೂಬಾ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿದರು.

ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ಸಾನ್ನಿಧ್ಯ ವಹಿಸಿದ್ದರು. ಅ.ಭಾ.ಕ.ಸಮ್ಮೇಳನದ ಸಂಸ್ಥಾಪಕ ಡಾ.ಲಾರಿ ಆಜಾದ್ ಅಧ್ಯಕ್ಷತೆ ವಹಿಸಿದ್ದರು. ಎ.ಐ.ಪಿ.ಸಿ ಅಧ್ಯಕ್ಷೆ ಡಾ.ವಿಜಯಲಕ್ಷ್ಮಿ ಕೋಸಗಿ, ನಗರಸಭೆ ಅಧ್ಯಕ್ಷೆ ಶಾಲಿನಿ ಚಿಂತಾಮಣಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಸ್ವಾಗತ ಸಮಿತಿ ಕೋಶಾಧ್ಯಕ್ಷೆ ರತ್ನಾ ಪಾಟೀಲ, ಪ್ರಾಚಾರ್ಯೆ ವಿದ್ಯಾವತಿ ಬಲ್ಲೂರ್ ಇದ್ದರು. ಸ್ವಾಗತ ಸಮಿತಿಯ ಅಧ್ಯಕ್ಷೆ ಪೂರ್ಣಿಮಾ ಜಾರ್ಜ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಶಂಕರ ಟೋಕರೆ ನಿರೂಪಿಸಿದರು. ಜಯದೇವಿ ಯದಲಾಪುರೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.