ADVERTISEMENT

371ನೇ ಕಲಂ: ಹೈ-ಕ ಭಾಗಕ್ಕೆ ಹೆಚ್ಚಿನ ಲಾಭ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2012, 8:25 IST
Last Updated 16 ಆಗಸ್ಟ್ 2012, 8:25 IST

ಹುಮನಾಬಾದ್: 371ನೇ ಕಲಂ ತಿದ್ದುಪಡಿ ನಂತರ ಹೈದರಾಬಾದ್ ಕರ್ನಾಟಕ ಪ್ರದೇಶ ಜನತೆಗೆ ಹೆಚ್ಚಿನ ಲಾಭ ಲಭ್ಯವಾಗಲಿದೆ ಎಂದು ಶಾಸಕ ರಾಜಶೇಖರ ಪಾಟೀಲ ತಿಳಿಸಿದರು.

ಸ್ಥಳೀಯ ತಾಲ್ಲೂಕು ಆಡಳಿತ ವತಿಯಿಂದ ಬುಧವಾರ ಏರ್ಪಡಿಸಿದ್ದ 66ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶಕ್ಕೆ ಸ್ವಾತಂತ್ರ್ಯ ಲಭಿಸಿ, 6ದಶಕ ಗತಿಸಿದರೂ ಗ್ರಾಮೀಣ ಭಾಗದ ಮಾತೆಯರ ಶೌಚಾಲಯ ಸಮಸ್ಯೆ ಈಗಲೂ ಬಗೆಹರಿದಿಲ್ಲ. ಸರ್ಕಾರದ ಅದೆಷ್ಟೋ ಯೋಜನೆಗಳು ಈಗಲೂ ಗ್ರಾಮೀಣ ಭಾಗಕ್ಕೆ ತಲುಪುತ್ತಿಲ್ಲ. ಆ ನಿಟ್ಟಿನಲ್ಲಿ ಚುನಾಯಿತ ಪ್ರತಿನಿಧಿಗಳು ಸೇರಿದಂತೆ ಪ್ರತಿಯೊಬ್ಬರು  ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ತಿಳಿಸಿದರು.

ಹಿಂದೆ ನಾವು ಓದುವ ದಿನಗಳಲ್ಲಿ ಸರ್ಕಾರದಿಂದ ಯಾವುದೇ ಸೌಲಭ್ಯಗಳು ಇರಲಿಲ್ಲ. ಆ ಶಾಲೆಗಳಲ್ಲಿ ಓದಿದ ಅನೇಕರು ಈಗ ಐ.ಎ.ಎಸ್. ಐ.ಪಿ.ಎಸ್ ಅಧಿಕಾರಿಗಳಾಗಿದ್ದಾರೆ. ಕಾರಣ ಕೇವಲ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಓದಿದವರಿಗೆ ಮಾತ್ರ ಉನ್ನತ ಹುದ್ದೆ, ಸ್ಥಾನಮಾನ ಸಿಗುತ್ತಿದೆ ಎಂಬ ಭಾವನೆಯನ್ನು ಮನಸ್ಸಿನಿಂದ ತೆಗೆದು ಹಾಕಬೇು. ಸರ್ಕಾರ ನೀಡುತ್ತಿರುವ ವಿವಿಧ ಸೌಲಭ್ಯಗಳ ಸದ್ಬಳಕೆ ಮಾಡಿಕೊಂಡು ಉನ್ನತ ಸ್ಥಾನಮಾನ ಗಿಟ್ಟಿಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು ದೇಶದ ಸ್ವಾತಂತ್ಯಕ್ಕಾಗಿ ತ್ಯಾಗ ಬಲಿದಾನ ನೀಡಿರುವ ಮಹಾತ್ಮರ ತತ್ವಾದರ್ಶ ಮಕ್ಕಳಿಗೆ ತಿಳಿಹೇಳಬೇಕು ಎಂದರು. ರೇಷ್ಮೆ, ಕೃಷಿ, ಪ್ರಕೃತಿ ವಿಕೋಪ ಮೊದಲಾದ ಹಿನ್ನೆಲೆಯಲ್ಲಿ ಸರ್ಕಾರದಿಂದ ಮಂಜೂರಿ ಆದ ಪರಿಹಾರ ಚೆಕ್ ಮತ್ತು ಪ್ರಮಾಣಪತ್ರ ಸಂಬಂಧಪಟ್ಟ ಫಲಾನುಭವಿಗಳಿಗೆ ವಿತರಿಸಿದರು.

ADVERTISEMENT

ಹಿರಿಯ ಸಾಹಿತಿ ಎಚ್.ಕಾಶಿನಾಥರೆಡ್ಡಿ ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಸ್ತಾನ್ ಮಹ್ಮದ್ ನೋರೋದ್ದೀನ್ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಪದ್ಮಾವತಿ ಶಿವಾಜಿರಾವ ಮಚಕೂರಿ, ಜಿಲ್ಲಾ ಪಂಚಾಯಿತಿ ಸದಸ್ಯ ವೀರಣ್ಣ ಪಾಟೀಲ, ಮಹಾಂತಯ್ಯ ಎಸ್.ತೀರ್ಥ, ಎ.ಪಿ.ಎಂ.ಸಿ ಅಧ್ಯಕ್ಷ ನಾರಾಯಣರೆಡ್ಡಿ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನ ಮಾಳಶೆಟ್ಟಿ,  ಕೃಷಿಕ ಸಮಾಜದ ಅಧ್ಯಕ್ಷ ವಿಶ್ವನಾಥ ಪಾಟೀಲ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಶಿವಾಜಿರಾವ ಡೋಣೆ, ಸದಸ್ಯ ಗಜೇಂದ್ರ ಕನಕಟಕರ್ ಮೊದಲಾದ ಗಣ್ಯರು ಇದ್ದರು.

ತಹಸೀಲ್ದಾರ ಸಿ.ಲಕ್ಷ್ಮಣರಾವ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಸ್ವಾಗತಿಸಿದರು.
ಲಕ್ಷ್ಮೀ ವೆಂಕಟೇಶ್ವರ ಹಾಗೂ ವೀರಭದ್ರೇಶ್ವರ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮಂಜುನಾಥ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.