ADVERTISEMENT

371 ಕಲಂ ಜಾರಿಗೆ ಒತ್ತಡ ತನ್ನಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2011, 10:10 IST
Last Updated 17 ಫೆಬ್ರುವರಿ 2011, 10:10 IST

ಬೀದರ್: ‘ಹೈದರಾಬಾದ್ ಕರ್ನಾಟಕ ಭಾಗ ತೀರಾ ಹಿಂದುಳಿದಿದೆ. ಕೇಂದ್ರದಲ್ಲಿ ತಾವು ವರ್ಚಸ್ವಿ ನಾಯಕರಾಗಿದ್ದೀರಿ. 371ನೇ ಕಲಂ ತಿದ್ದುಪಡಿಗೆ ಒತ್ತಡ ತನ್ನಿ’
ಹೀಗೆಂದು ಮಾಜಿ ಕೇಂದ್ರ ಗೃಹ ಸಚಿವ ಬೂಟಾಸಿಂಗ್ ಅವರಲ್ಲಿ ಮನವಿ ಮಾಡಿದವರು ಜಿಲ್ಲಾ ಉಸ್ತುವಾರಿ ಸಚಿವ ರೇವುನಾಯಕ್ ಬೆಳಮಗಿ. ನಗರದ ಬಸವಗಿರಿಯಲ್ಲಿ ಬುಧವಾರ ಆರಂಭಗೊಂಡ ‘ವಚನ ವಿಜಯೋತ್ಸವ’ದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೈದರಾಬಾದ್ ಕರ್ನಾಟಕ ಪ್ರದೇಶ ಶೈಕ್ಷಣಿಕ, ಔದ್ಯೋಗಿಕ ಮತ್ತಿತರ ಕ್ಷೇತ್ರಗಳಲ್ಲಿ ಹಿಂದುಳಿದಿದೆ ಹೇಳಿದರು.

ಈ ಭಾಗದವರಿಗೆ ಶಿಕ್ಷಣ ಮತ್ತು ನೌಕರಿಯಲ್ಲಿ ಮೀಸಲು ಕಲ್ಪಿಸುವುದಕ್ಕಾಗಿ ಸಂವಿಧಾನದ 371ನೇ ಕಲಂಗೆ ತಿದ್ದುಪಡಿ ತರುವ ಅಗತ್ಯವಿದೆ ಎಂದು ಎಂದರು. ತಾವು ದೊಡ್ಡ  ನಾಯಕರು. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ತಮ್ಮನ್ನು ಗೌರವಿಸುತ್ತಾರೆ. ಹೀಗಾಗಿ ಅವರ ಮೇಲೆ ಒತ್ತಡ ಹೇರಿ 371ನೇ ಕಲಂಗೆ ತಿದ್ದುಪಡಿ ತನ್ನಿ. ಆ ಮೂಲಕ ಭಾಗಕ್ಕೆ ಉಪಕಾರ ಮಾಡಿ ಎಂದು ಬೂಟಾಸಿಂಗ್ ಅವರಲ್ಲಿ ಕೋರಿದರು. ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕಾಗಿದೆ. ದುಶ್ಚಟಗಳಿಗೆ ಒಳಗಾದವರಿಗೆ ತಿಳುವಳಿಕೆ ನೀಡುವ ಕೆಲಸ ಆಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಪ್ರಸ್ತುತ ರಾಜಕೀಯದಲ್ಲಿ ಸ್ವಾರ್ಥ ಮನೋಭಾವ ಬೆಳೆಯುತ್ತಿದೆ. ಗಾಂಧೀಜಿ ಅವರ ಕನಸು ನನಸಾಗಬೇಕಾದರೆ ರಾಜಕಾರಣಿಗಳು ನಿಸ್ವಾರ್ಥರಾಗಿರಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.