ADVERTISEMENT

45 ಅಡಿ ರಾವಣನ ಪ್ರತಿಕೃತಿ ದಹನ

ಸಿಡಿಮದ್ದು ಪ್ರದರ್ಶನದೊಂದಿಗೆ ಕಾರ್ಯಕ್ರಮಕ್ಕೆ ಸಂಭ್ರಮದ ತೆರೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 19:32 IST
Last Updated 8 ಅಕ್ಟೋಬರ್ 2019, 19:32 IST
ಶ್ರೀ ರಾಮಲೀಲಾ ಉತ್ಸವ ಸಮಿತಿ ವತಿಯಿಂದ ನವರಾತ್ರಿ ಪ್ರಯುಕ್ತ ಇಲ್ಲಿನ ನಗರದ ಸಾಯಿ ಆದರ್ಶ್ ಶಾಲೆಯ ಆವರಣದಲ್ಲಿ ರಾಣಿ ಸತ್ಯಮೂರ್ತಿ ನೇತೃತ್ವದಲ್ಲಿ ನೃತ್ಯಪರ್ದರ್ಶಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು
ಶ್ರೀ ರಾಮಲೀಲಾ ಉತ್ಸವ ಸಮಿತಿ ವತಿಯಿಂದ ನವರಾತ್ರಿ ಪ್ರಯುಕ್ತ ಇಲ್ಲಿನ ನಗರದ ಸಾಯಿ ಆದರ್ಶ್ ಶಾಲೆಯ ಆವರಣದಲ್ಲಿ ರಾಣಿ ಸತ್ಯಮೂರ್ತಿ ನೇತೃತ್ವದಲ್ಲಿ ನೃತ್ಯಪರ್ದರ್ಶಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು   

ಬೀದರ್: ಶ್ರೀರಾಮಲೀಲಾ ಉತ್ಸವ ಸಮಿತಿ ವತಿಯಿಂದ ವಿಜಯದಶಮಿ ಪ್ರಯುಕ್ತ ನಗರದ ಸಾಯಿ ಆದರ್ಶ ಶಾಲೆಯ ಆವರಣದಲ್ಲಿ ಎರಡು ದಿನಗಳ ವರೆಗೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 45 ಅಡಿ ರಾವಣನ ಪ್ರತಿಕೃತಿ ದಹನ ಹಾಗೂ ಆಕರ್ಷಕ ಸಿಡಿಮದ್ದು ಪ್ರದರ್ಶನದೊಂದಿಗೆ ಮಂಗಳವಾರ ಸಂಭ್ರಮದ ತೆರೆ ಬಿದ್ದಿತು.

ಶ್ರೀರಾಮಲೀಲಾ ಉತ್ಸವ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಈಶ್ವರಸಿಂಗ್ ಠಾಕೂರ್ ಮಾತನಾಡಿ, ‘ದೇಶದ ಸಂಸ್ಕೃತಿ ಹಾಗೂ ಹಬ್ಬ ಹರಿದಿನಗಳ ಮಹತ್ವ ಸಾರುವ ದಿಸೆಯಲ್ಲಿ ಸಮಿತಿಯು ಪ್ರತಿ ವರ್ಷ ಸಾಂಸ್ಕೃತಿಕ ಹಾಗೂ ರಾವಣ ದಹನ ಕಾರ್ಯಕ್ರಮ  ಆಯೋಜಿಸಿಕೊಂಡು ಬಂದಿದೆ. ವಾಯುಪಡೆ ತರಬೇತಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಉತ್ತರ ಭಾರತೀಯರಿಗೆ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುವಂತೆ ಮಾಡಿದೆ’ ಎಂದು ಹೇಳಿದರು.

‘ಬೀದರ್‌ ಬಹು ಸಂಸ್ಕೃತಿಯ ಬೀಡಾಗಿದೆ. ಅಂತೆಯೇ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳು ಅನೇಕ ವರ್ಷಗಳಿಂದ ಇಲ್ಲಿ ರಾಮಲೀಲಾ ರೂಪಕ ಪ್ರದರ್ಶಿಸುತ್ತಿದ್ದಾರೆ. ಈ ಮೂಲಕ ಬೀದರ್ ಜನತೆಗೆ ರಾಮಾಯಣದ ಸಂಕ್ಷಿಪ್ತ ದರ್ಶನ ನೀಡುತ್ತಿದ್ದಾರೆ’ ಎಂದು ತಿಳಿಸಿದರು.

ADVERTISEMENT

ವಿಧಾನ ಪರಿಷತ್‌ ಸದಸ್ಯ ರಘುನಾಥ ಮಲ್ಕಾಪುರೆ, ‘ಹಬ್ಬಗಳು ನಾಡಿನ ಸಂಸ್ಕೃತಿಯ ಪ್ರತೀಕವಾಗಿವೆ. ಶ್ರೀರಾಮ ಲೀಲಾ ಉತ್ಸವ ಸಮಿತಿಯು ವಿಜಯದಶಮಿ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಮೂಲಕ ನಾಡಿನ ಸಂಸ್ಕೃತಿ ಹಾಗೂ ಸಂಪ್ರದಾಯವನ್ನು ಉಳಿಸುವ ಕಾರ್ಯ ಮಾಡುತ್ತಿದೆ’ ಎಂದು ಬಣ್ಣಿಸಿದರು.

ಮೊದಲ ದಿನ ನಾಟ್ಯಶ್ರೀ ನೃತ್ಯಾಲಯದ ಕಲಾವಿದರು ಆಕರ್ಷಕ ಭರತ ನಾಟ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಎರಡನೆಯ ದಿನ ನೂಪುರ ನೃತ್ಯ ಅಕಾಡೆಮಿಯ ಕಲಾವಿದರು ರಾಮಕಥಾ, ಕೃಷ್ಣ ಮುಖೇಡಕರ್‌ ಸಂಗೀತ ಕಾರ್ಯಕ್ರಮ ಪ್ರಸ್ತುತ ಪಡಿಸಿದರು.

ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳಾದ ಸೂರಜ್‌, ಆದಿ, ಪ್ರಜ್ವಲ್‌ ಕುನಾಲ್‌ ಹಾಗೂ ರುಬಿಸ್ಕೊ ನೇತೃತ್ವದಲ್ಲಿ ವಿದ್ಯಾರ್ಥಿಗಳು ರಾಮಲೀಲಾ ಕಿರುನಾಟಕ ಪ್ರದರ್ಶಿಸಿದರು. ಗುರುನಾನಕ ಅವರು ಬೀದರ್‌ಗೆ ಭೇಟಿ ನೀಡಿದ 550ನೇ ವರ್ಷಾಚರಣೆ ಪ್ರಯುಕ್ತ ವೇದಿಕೆಯನ್ನು ಅಲಂಕರಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಿಖ್‌ ಸಮುದಾಯ ಐವರು ಗಣ್ಯರನ್ನು ಸನ್ಮಾನಿಸಲಾಯಿತು.

ನಂತರ ಉತ್ತರ ಭಾರತದ ಸಂಪ್ರದಾಯದಂತೆ ದುಷ್ಟ ಶಕ್ತಿಯ ದಮನದ ಸಂಕೇತವಾಗಿ ರಾವಣನ ಪ್ರತಿಕೃತಿಯನ್ನು ದಹಿಸಲಾಯಿತು. ಕಾರ್ಯಕ್ರಮದ ವೀಕ್ಷಣೆಗೆ ಬಂದಿದ್ದ ನೂರಾರು ಜನರು ಈ ಅಪೂರ್ವ ಕ್ಷಣಗಳನ್ನು ಕಣ್ತುಂಬಿಕೊಂಡರು.

ಶ್ರೀರಾಮ ಲೀಲಾ ಉತ್ಸವ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಗಾದಾ, ರಾಜಕುಮಾರ ಅಗರವಾಲ್, ನಿಲೇಶ್ ರಕ್ಷಾಳ್, ಮಹೇಶ್ವರ ಸ್ವಾಮಿ, ಶಂಕರ ಕೊಟ್ಟರಕಿ ಮೊದಲಾದವರು ಪಾಲ್ಗೊಂಡಿದ್ದರು.

ಅದ್ಧೂರಿ ಮೆರವಣಿಗೆ:

ಇದಕ್ಕೂ ಮೊದಲು ಶ್ರೀರಾಮ, ಲಕ್ಷ್ಮಣ, ಹನುಮನ ವೇಷಧಾರಿಗಳ ಮೆರವಣಿಗೆ ನಡೆಯಿತು. ರಾಮ, ಲಕ್ಷ್ಮಣರು ಕುದುರೆಯ ಮೇಲೆ ಕಾಣಿಸಿಕೊಂಡರೆ, ರಾವಣ ಬುಲೆಟ್‌ ಮೇಲೆ ಕುಳಿತಿದ್ದ. ವಾಹನ ಸೇನೆ ಮೆರವಣಿಗೆಯಲ್ಲಿ ಗಮನ ಸೆಳೆಯಿತು.

ಕೆಇಬಿ ಹನುಮಾನ ಮಂದಿರದ ಆವರಣದಿಂದ ಆರಂಭವಾದ ಮೆರವಣಿಗೆಯಲ್ಲಿ ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಶ್ರೀರಾಮನ ವೇಷಧಾರಿ ಹನುಮಾನ ಮಂದಿರದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆಯಲ್ಲಿ ಸಾಗಿದ. ಶ್ರೀರಾಮ ಇದು ಯುದ್ಧಕ್ಕೆ ಹೊರಟು ನಿಂತ ಸನ್ನಿವೇಶವನ್ನು ಬಿಂಬಿಸುವಂತಿತ್ತು.

ಸಿಡಿಮದ್ದು ಪ್ರದರ್ಶನ:

ರಾತ್ರಿ 8.30ರ ವೇಳೆಗೆ ಸಿಡಿಮದ್ದು ಪ್ರದರ್ಶನ ನಡೆಯಿತು. ಭೂಮಿಯಿಂದ ಸುಮಾರು ನಲವತ್ತು ಅಡಿಗಳ ಎತ್ತರಕ್ಕೆ ಚಿಮ್ಮಿದ ಸಿಡಿಮದ್ದುಗಳು ಆಗಸದಲ್ಲಿ ನಕ್ಷತ್ರಾಕಾರದ ಚಿತ್ತಾರ ಮೂಡಿಸಿದವು. ಕೆಲ ಪಟಾಕಿಗಳು ಬೆಳಕಿನ ಸುರಿಮಳೆ ಸುರಿದವು. ಸಿಡಿಮದ್ದಿನ ಚಿತ್ತಾರ ನೆರೆದಿದ್ದ ಪ್ರೇಕ್ಷಕರಲ್ಲಿ ಪುಳಕ ಮೂಡಿಸಿತು.

ಜನರಲ್‌ ಕಾರ್ಯಪ್ಪ ವೃತ್ತದಿಂದ ರೋಟರಿ ವೃತ್ತದ ವರೆಗಿನ ಮಾರ್ಗದಲ್ಲಿ ಸಂಜೆ ವೇಳೆ ಸಂಚಾರ ನಿಷೇಧ ಮಾಡಲಾಗಿತ್ತು. ಜಹೀರಾಬಾದ್ ಹಾಗೂ ಗುಂಪಾ ಕಡೆಗೆ ಹೋಗುವ ವಾಹನಗಳಿಗೆ ಜನವಾಡ ರಸ್ತೆ, ಮೋಹನ್‌ ಮಾರ್ಕೆಟ್‌ ಕಡೆ ವ್ಯವಸ್ಥೆ ಮಾಡಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್‌ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು.

ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ್, ಶಾಸಕ ಬಂಡೆಪ್ಪ ಕಾಶೆಂಪುರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಉದ್ಯಮಿ ಗುರುನಾಥ ಜನನ ಕೊಳ್ಳೂರು, ನಗರಸಭೆ ಮಾಜಿ ಅಧ್ಯಕ್ಷೆ ಶಾಲಿನಿ ಚಿಂತಾಮಣಿ, ಡಾ.ಸಚಿನ್‌ ಗುದಗೆ ಇದ್ದರು.

ಶ್ರೀ ರಾಮ ಲೀಲಾ ಉತ್ಸವ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಗಾದಾ, ರಾಜಕುಮಾರ ಅಗರವಾಲ್, ನಿಲೇಶ್ ರಕ್ಷಾಳ್, ಮಹೇಶ್ವರ ಸ್ವಾಮಿ, ಶಂಕರ ಕೊಟ್ಟರಕಿ ಮೊದಲಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.